ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಖಾನೆ: 3 ಗಂಟೆ ಹೆಚ್ಚು ದುಡಿಮೆ; ಮಸೂದೆಗೆ ಅಂಗೀಕಾರ

Last Updated 22 ಫೆಬ್ರುವರಿ 2023, 23:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು 9 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಮತ್ತು ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ.

ಸದ್ಯ 9 ಗಂಟೆ ಮಾತ್ರ ಕೆಲಸಕ್ಕೆ ಅವಕಾಶ ಕಲ್ಪಿಸಬಹುದಿತ್ತು. ಮಹಿಳಾ ಕಾರ್ಮಿಕರನ್ನು ನಿಗದಿತ ಅವಧಿಯಲ್ಲಷ್ಟೇ ಅವಕಾಶ ನೀಡಬಹುದಿತ್ತು. ದಿನದ 24 ಗಂಟೆಯ ಅವಧಿಯಲ್ಲಿ ಯಾವ ಹೊತ್ತಿನಲ್ಲಾದರೂ ಕೆಲಸ ಮಾಡುವ ಅನುಮತಿ ಸಿಗಲಿದೆ. ಇದಕ್ಕಾಗಿ ಸರ್ಕಾರ ಮಂಡಿಸಿದ ‘ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ–2023’ಕ್ಕೆ ವಿಧಾನಸಭೆ ಬುಧವಾರ ಅಂಗೀಕಾರ ನೀಡಿದೆ.

‘ಇದರಿಂದ 3 ಗಂಟೆಗಳಷ್ಟು ಕೆಲಸದ ಅವಧಿ ಹೆಚ್ಚಲಿದ್ದು, ಅವಧಿ ಮೀರಿ ಕೆಲಸ ಮಾಡಿದ ಸಂದರ್ಭದಲ್ಲಿ ಕೆಲಸಗಾರನಿಗೆ ದುಪ್ಪಟ್ಟು ದರದಲ್ಲಿ ಮಜೂರಿ ನೀಡಬೇಕಾಗುತ್ತದೆ’ ಎಂದು ಮಸೂದೆಯನ್ನು ಮಂಡಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

‘ಆರ್ಥಿಕ ಚಟುವಟಿಕೆಗಳು ಮತ್ತು ಉದ್ಯೋಗಾವಕಾಶ ಸೃಜಿಸುವ ಉದ್ದೇಶ ದಿಂದ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಹೊಸ ಕಾಯ್ದೆ ಜಾರಿಗೆ ಬಂದ ನಂತರ ವಾರದಲ್ಲಿ ಗರಿಷ್ಠ 48 ಗಂಟೆಗಳಿಗೆ ಒಳ ಪಟ್ಟು, ವಿರಾಮ, ಮಧ್ಯಂತರಗಳನ್ನು ಒಳಗೊಂಡಂತೆ ಕೆಲಸದ ಅವಧಿ (ದೈನಂದಿನ ಗರಿಷ್ಠ) 9 ರಿಂದ 12 ಗಂಟೆಗೆ ಹೆಚ್ಚಲಿದೆ. ಇದಕ್ಕೆ ಕೆಲಸಗಾರನ ಲಿಖಿತ ಒಪ್ಪಿಗೆಯ ಅಗತ್ಯವಿದ್ದು, ಆಗ ಮಾತ್ರ ಕೆಲಸದ ಅವಧಿ 12 ಗಂಟೆಗಳಿಗೆ ವಿಸ್ತರಿಸಬಹುದು’ ಎಂದರು.

‘ಕೆಲಸಗಾರನಿಗೆ ವಾರದ ಉಳಿದ ದಿನಗಳು ಪಾವತಿ ರಜಾ ದಿನಗಳಾಗಿ ಪರಿಗಣಿಸಲಾಗುವುದು. ಅಂದರೆ, ಒಬ್ಬ ಕಾರ್ಮಿಕ ದಿನಕ್ಕೆ 12 ಗಂಟೆಗಳಂತೆ 48 ಗಂಟೆ ಕೆಲಸ ಮಾಡಿದರೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡಿದಂತೆ ಆಗುತ್ತದೆ. ಉಳಿದ ದಿನಗಳನ್ನು ಪಾವತಿ ರಜಾ ದಿನಗಳನ್ನಾಗಿ ಪರಿಗಣಿಸಬೇಕಾಗುತ್ತದೆ’ ಎಂದು ವಿವರಿಸಿದರು.

‘ಕಾರ್ಖಾನೆಗಳಲ್ಲಿ ಕೆಲಸಗಾರನಿಗೆ ಕೆಲಸದ ಅವಧಿಯನ್ನು ಯಾವುದೇ ಮಧ್ಯಂತರವಿಲ್ಲದೇ, 6 ಗಂಟೆಗಳವರೆಗೆ ವಿಸ್ತರಿಸಲೂ ಅವಕಾಶ ನೀಡಲಾಗಿದೆ. ಈ ಆಯ್ಕೆಯನ್ನು ಒಪ್ಪಿಕೊಂಡರೆ, 6 ಗಂಟೆ ನಂತರ ಹೆಚ್ಚುವರಿ ಕೆಲಸ ಮಾಡಿದರೂ ದುಪ್ಪಟ್ಟು ದರದ ಮಜೂರಿ ನೀಡಬೇಕಾ ಗುತ್ತದೆ’ ಎಂದರು.

ದುಪ್ಪಟ್ಟು ಮಜೂರಿ: ವಾರದಲ್ಲಿ ಐದು ದಿನಗಳು ಕೆಲಸ ಮಾಡುವಾಗ, ಯಾವುದೇ ದಿನದಲ್ಲಿ 10 ಗಂಟೆಗಳಿಗಿಂತ ಹೆಚ್ಚು ಅಥವಾ ಯಾವುದೇ ವಾರದಲ್ಲಿ 48 ಗಂಟೆಗಳಿಂತ ಹೆಚ್ಚು ಕೆಲಸ ಮಾಡಿದರೆ, ಯಾವುದೇ ವಾರದಲ್ಲಿ ನಾಲ್ಕು ದಿನಗಳು ಕೆಲಸ ಮಾಡುವಾಗ ಅಥವಾ ಪಾವತಿ ರಜಾ ದಿನಗಳಲ್ಲಿ ಕೆಲಸ ಮಾಡುವಾಗ ಹನ್ನೊಂದುವರೆ ಗಂಟೆಗಳಿಗಿಂತ ಹೆಚ್ಚಾದಲ್ಲಿ ಕೆಲಸಗಾರ ದುಪ್ಪಟ್ಟು ಮಜೂರಿಗೆ ಅರ್ಹನಾಗುತ್ತಾನೆ.

ಮಹಿಳೆಯರಿಗೆ ಇದ್ದ ನಿರ್ಬಂಧ ತೆರವು

ದುಡಿಮೆ ಮತ್ತು ಗಳಿಕೆಯಲ್ಲಿ ಸಮಾನತೆ ಮತ್ತು ಸಮಾನ ಅವಕಾಶವನ್ನು ನೀಡಲು ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯವನ್ನು ಖಾತರಿಪಡಿಸುವ ಷರತ್ತಿಗೆ ಒಳಪಟ್ಟು ದಿನದ 24 ಗಂಟೆಯಲ್ಲಿ ಯಾವ ಅವಧಿಯಲ್ಲಿ ಬೇಕಾದರೂ ಕೆಲಸ ಮಾಡಬಹುದು.

ಅವಧಿ ಮೀರಿ ಕೆಲಸಕ್ಕಾಗಿ (ಓವರ್‌ ಟೈಮ್) ಮಹಿಳಾ ಕೆಲಸಗಾರರಿಗೆ ಅನುವು ಮಾಡಿಕೊಡುವುದಕ್ಕಾಗಿ ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಮಹಿಳಾ ಕೆಲಸಗಾರರಿಂದ ಲಿಖಿತ ಒಪ್ಪಿಗೆ ಪಡೆದು ಅವಕಾಶ ನೀಡಬಹುದಾಗಿದೆ.

ರಾತ್ರಿ ಪಾಳಿಯ ಸುರಕ್ಷತೆ:

*ರಾತ್ರಿ ಪಾಳಿಯಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಸಾಕಷ್ಟು ಮಹಿಳಾ ಭದ್ರತೆಯನ್ನು ನೀಡಬೇಕು

*ಮಹಿಳಾ ಕಾರ್ಮಿಕರು ಮುಂಚಿತವಾಗಿ ಆಗಮಿಸಲು ಮತ್ತು ಕೆಲಸದ ಬಳಿಕ ವಿಶ್ರಮಿಸಲು ಸಾಕಷ್ಟು ಸಂಖ್ಯೆಯಲ್ಲಿ ವಿಶ್ರಾಂತಿ ಕೊಠಡಿಗಳನ್ನು ಕಲ್ಪಿಸಬೇಕು.

*ಮಹಿಳಾ ಕಾರ್ಮಿಕರಿಗೆ ಅವರ ಮನೆಯಿಂದ ಕೆಲಸ ಸ್ಥಳದವರೆಗೆ ಮತ್ತು ಅಲ್ಲಿಂದ ಹಿಂದಿರುಗಲು (ರಾತ್ರಿ ಪಾಳಿ ಮಾತ್ರ) ಸಾರಿಗೆ ಸೌಲಭ್ಯವನ್ನು ನೀಡಬೇಕು. ಈ ವಾಹನಗಳಲ್ಲಿ ಭದ್ರತಾ ಸಿಬ್ಬಂದಿ (ಮಹಿಳಾ ಭದ್ರತಾ ಸಿಬ್ಬಂದಿ ಒಳಗೊಂಡಿರಬೇಕು) ಒದ
ಗಿಸಬೇಕು. ಪ್ರತಿಯೊಂದು ಸಾರಿಗೆ ವಾಹನವು ಸಿಸಿಟಿವಿ ಕ್ಯಾಮರಾ ಮತ್ತು ಜಿಪಿಎಸ್‌ ವ್ಯವಸ್ಥೆ ಹೊಂದಿರಬೇಕು.

*ರಾತ್ರಿ ಪಾಳಿಯಲ್ಲಿ ಪಾಳಿ ಪ್ರಭಾರದಲ್ಲಿರುವ ಮೇಲ್ವಿಚಾರಕರು ಅಥವಾ ಫೋರ್‌ಮೆನ್‌ ಅಥವಾ ಇತರ ಮೇಲ್ವಿಚಾರಣಾ ಸಿಬ್ಬಂದಿ ವೃಂದಬಲದ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಇಲ್ಲದಷ್ಟು ಮಹಿಳೆಯರು ಇರಬೇಕು.

*ಬೆಳಗಿನ ಪಾಳಿಯಿಂದ ರಾತ್ರಿ ಪಾಳಿಗೆ ಹಾಗೆಯೇ ರಾತ್ರಿ ಪಾಳಿಯಿಂದ ಬೆಳಗಿನ ಪಾಳಿಗೆ ಮಹಿಳಾ ಕಾರ್ಮಿಕ
ರನ್ನು ಬದಲಿಸಿದಾಗಲೆಲ್ಲಾ ಹಿಂದಿನ ಪಾಳಿಗಳು ಮತ್ತು ರಾತ್ರಿ ಪಾಳಿಯ ಮಧ್ಯದ ವಿರಾಮ ಅಥವಾ ಅಂತರವು ನಿರಂತರ 12 ಗಂಟೆಗಳಿ
ಗಿಂತ ಕಡಿಮೆಯಾಗಿರಬಾರದು.

*ಮಹಿಳಾ ಸಿಬ್ಬಂದಿಯನ್ನು ಕರೆದೊಯ್ಯುವ ವಾಹನದಲ್ಲಿ ಪ್ರತಿಯೊಬ್ಬ ಚಾಲಕನ ವೈಯಕ್ತಿಕ ವಿವರಣೆ ಮತ್ತು ತಾವಾಗಿಯೇ ಉದ್ಯೋಗವನ್ನು ಪಡೆದ ಎಲ್ಲಾ ಚಾಲಕರ ಹಿಂದಿನ ಉದ್ಯೋಗದ ಪೂರ್ವ ಇತಿಹಾಸ ಪರಿಶೀಲಿಸಬೇಕು.

*ಮಹಿಳಾ ಉದ್ಯೋಗಿಗಳ ದೂರವಾಣಿ ಸಂಖ್ಯೆ, ವಿಶೇಷವಾಗಿ ಮೊಬೈಲ್‌ ಸಂಖ್ಯೆಗಳು ಇ–ಮೇಲ್‌ ಐಡಿ ಮತ್ತು ವಿಳಾಸವನ್ನು ಅನಧಿಕೃತ ವ್ಯಕ್ತಿಗಳಿಗೆ ಬಹಿರಂಗಪಡಿಸಬಾರದು.

*ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಂತೆ ಯಾವುದೇ ಮಹಿಳಾ ಸಿಬ್ಬಂದಿಗೆ ಕಡ್ಡಾಯ ಅಥವಾ ಕಟ್ಟುಪಾಡು ಮಾಡುವಂತಿಲ್ಲ. ರಾತ್ರಿಪಾಳಿ
ಗಳಲ್ಲಿ ಕೆಲಸ ಮಾಡುವ ಆಸಕ್ತಿ ಇರುವ ಮಹಿಳಾ ನೌಕರರಿಂದ ಲಿಖಿತ ಸಮ್ಮತಿ ಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT