ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ |ಅಭ್ಯರ್ಥಿಗಳ ಆಯ್ಕೆ ಹಿಂದೆ ವರಿಷ್ಠರ ತಂತ್ರಗಾರಿಕೆ: ವಿಜಯೇಂದ್ರ

Published 14 ಮಾರ್ಚ್ 2024, 15:22 IST
Last Updated 14 ಮಾರ್ಚ್ 2024, 15:22 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನೂ ಗೆಲ್ಲುವ ಜತೆಗೆ, ವಿಧಾನಸಭೆಗೆ ಯಾವುದೇ ಸಮಯದಲ್ಲಿ ಚುನಾವಣೆ ನಡೆದರೂ ಸ್ಪಷ್ಟ ಬಹುಮತ ಪಡೆಯುವ ತಂತ್ರಗಾರಿಕೆ ಅಭ್ಯರ್ಥಿಗಳ ಆಯ್ಕೆಯ ಹಿಂದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆಯ ಹಿಂದೆ ಪಕ್ಷದ ವರಿಷ್ಠರ ದೂರ ದೃಷ್ಟಿ ಇದೆ. ವೀಕ್ಷಕರು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಪಡೆದು ಪ್ರತಿ ಕ್ಷೇತ್ರದಿಂದ ತಲಾ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಘಟಕ ಕಳುಹಿಸಿತ್ತು. ವರಿಷ್ಠರು ಕೆಲ ಲೋಕಸಭಾ ಸದಸ್ಯರಿಗೆ ಟಿಕೆಟ್‌ ನಿರಾಕರಿಸಿದ್ದಾರೆ. ಹೊಸ ಮುಖಗಳಿಗೆ ಅವಕಾಶ ನೀಡುವ ಜತೆಗೆ, ಹಿಂದುಳಿದ ವರ್ಗಗಳಿಗೂ ನ್ಯಾಯ ದೊರಕಿಸಿದ್ದಾರೆ ಎಂದರು.

ರಾಜ್ಯದಲ್ಲಿ ಒಮ್ಮೆಯೂ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇಪದೆ ಹೇಳುತ್ತಾರೆ. ಮುಂದೆ ನಡೆಯುವ ಚುನಾವಣೆಯಲ್ಲಿ ಪಕ್ಷ ದಾಖಲೆಯ ಸ್ಥಾನ ಗಳಿಸಬೇಕು ಎನ್ನುವುದು ಬಿಜೆಪಿ ಕಾರ್ಯಕರ್ತರ ಅಭಿಲಾಷೆ. ಸಿದ್ದರಾಮಯ್ಯ ಅವರ ಕನಸು, ಕಾರ್ಯಕರ್ತರ ಆಸೆ ಎರಡನ್ನೂ ಈಡೇರಿಸುವ ತಂತ್ರಗಾರಿಕೆಯನ್ನು ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲೇ ವರಿಷ್ಠರು ತೋರಿದ್ದಾರೆ ಎಂದು ಹೇಳಿದರು.

‘ಅಭ್ಯರ್ಥಿಗಳ ಆಯ್ಕೆಯಲ್ಲಿ ಅತ್ಯಂತ ಖುಷಿ ನೀಡಿದ್ದು ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಆಯ್ಕೆ. ಸ್ವಾತಂತ್ರ್ಯ ಪೂರ್ವದಲ್ಲೇ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ರಾಜವಂಶದ ಯದುವೀರ ಅವರಿಗೆ ಹಾಗೂ ಹೃದಯ ತಜ್ಞ ಡಾ.ಮಂಜುನಾಥ್‌ ಅವರಿಗೆ ಟಿಕೆಟ್‌ ನೀಡಿದನ್ನು ಸ್ವಾಗತಿಸುತ್ತೇವೆ’ ಎಂದರು.  

ಮೂರ‍್ನಾಲ್ಕು ದಿನಗಳಲ್ಲಿ ಉತ್ತರ!

ಶೆಟ್ಟರ್‌ಗೆ ಯಾವ ಕ್ಷೇತ್ರ? ಕೆ.ಎಸ್‌. ಈಶ್ವರಪ್ಪ ಮುನಿಸಿಕೊಂಡಿದ್ದಾರಲ್ಲಾ?.. ಹೀಗೆ ಸುದ್ದಿಗಾರರು ಯಾವ ಪ್ರಶ್ನೆ ಕೇಳಿದರೂ ವಿಜಯೇಂದ್ರ ನೀಡಿದ ಒಂದೇ ಸಾಲಿನ ಪ್ರತಿಕ್ರಿಯೆ ಮೂರ‍್ನಾಲ್ಕು ದಿನಗಳಲ್ಲಿ ಉತ್ತರ ಸಿಗುತ್ತದೆ ಎನ್ನುವುದು. ‘ಟಿಕೆಟ್‌ ಕೈತಪ್ಪಿದ ಅಭ್ಯರ್ಥಿಗಳು ಅವರ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಜನರ ಪ್ರೀತಿ ವಿಶ್ವಾಸವನ್ನೂ ಗಳಿಸಿದ್ದಾರೆ. ಆದರೆ ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ಕೆಲ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಅಸಮಾಧಾನಿತರ ಜತೆ ಹಿರಿಯರು ಮಾತನಾಡುವರು. ಕ್ಷೇತ್ರ ಬದಲಾವಣೆಯಾಗಿರುವ ಶೋಭಾ ಕರಂದ್ಲಾಜೆ ಅವರನ್ನೂ ಗೆಲ್ಲಿಸಿಕೊಳ್ಳುತ್ತೇವೆ. ಲೋಕಸಭಾ ಚುನಾವಣಾ ಫಲಿತಾಂಶ ಎಲ್ಲದಕ್ಕೂ ಉತ್ತರ ನೀಡಲಿದೆ’ ಎಂದರು.

ಮೈಸೂರು ಅಭಿವೃದ್ಧಿಗಾಗಿ ಸ್ಪರ್ಧೆ: ಯದುವೀರ

‘ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆಯ ದೃಷ್ಟಿಕೋನ ಇಟ್ಟುಕೊಂಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ನಿರ್ಧರಿಸಿದೆ’ ಎಂದು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು. ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಗುರುವಾರ ಭೇಟಿ ನೀಡಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ಅಧಿಕಾರ ಇದ್ದಾಗ ಹೆಚ್ಚಿನ ಅಭಿವೃದ್ಧಿ ಮಾಡಲು ಅವಕಾಶ ಸಿಗುತ್ತದೆ. ಈಗಿನ ಸಂಸದ ಪ್ರತಾಪಸಿಂಹ ಅವರು ಸಹ ಮೈಸೂರಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ತಮ್ಮ ಕಾರ್ಯಕ್ಕೆ ಅವರ ಸಹಕಾರವೂ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT