ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ನಾಳೆ: ಬಿಜೆಪಿ ಸರ್ಕಾರದ ಕೊನೇ ಬಜೆಟ್‌ನಲ್ಲಿ ಏನಿತ್ತು?

Published 6 ಜುಲೈ 2023, 11:08 IST
Last Updated 6 ಜುಲೈ 2023, 11:08 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023ರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ತಮ್ಮ ಸರ್ಕಾರದ ಕೊನೇ ಬಜೆಟ್‌ ಮಂಡಿಸಿದ್ದರು. ಚುನಾವಣೆ ಗೆಲ್ಲುವ ಸಲುವಾಗಿ ಜನಪ್ರಿಯ ಘೋಷಣೆಗಳನ್ನು ಮಾಡಿ ಎಲ್ಲ ಸಮುದಾಯದ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಆದಾಗ್ಯೂ ಬಿಜೆಪಿಗೆ ನಿರೀಕ್ಷಿತ ಗೆಲುವು ಸಿಗಲಿಲ್ಲ.

ಬೊಮ್ಮಾಯಿ ಅವರು ಇದೇ ವರ್ಷ ಫೆಬ್ರವರಿ 17ರಂದು ಮಂಡಿಸಿದ್ದ ₹ 3,09,182 ಕೋಟಿ ಗಾತ್ರದ ಬಜೆಟ್‌ನಲ್ಲಿ ಭೂ ಸಿರಿ, ರೈತ ಸಿರಿ, ವಿದ್ಯಾವಾಹಿನಿ, ಗೃಹಿಣಿ ಶಕ್ತಿ, ನಮ್ಮ ನೆಲೆ, ಸಹ್ಯಾದ್ರಿ ಸಿರಿ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದರು. 

ಇದೀಗ ಹೊಸ ಸರ್ಕಾರ ರಚನೆಯಾಗಿದೆ. ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ನಾಳೆ (ಜುಲೈ 7ರಂದು) ಈ ಸರ್ಕಾರದ ಮೊದಲ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಹೊಸ ಬಜೆಟ್‌ ಮಂಡನೆಯಾಗುತ್ತಿರುವ ಈ ಹೊತ್ತಿನಲ್ಲಿ ಬೊಮ್ಮಾಯಿ ಸರ್ಕಾರದ ಕೊನೇ ಬಜೆಟ್‌ನ ಪ್ರಮುಖ ಅಂಶಗಳತ್ತ ಚಿತ್ತ ಹರಿಸೋಣ.

* ರೈತರಿಗೆ ನೀಡಲಾಗುವ ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿ ₹3 ಲಕ್ಷದಿಂದ ₹5 ಲಕ್ಷಕ್ಕೆ ಏರಿಕೆ. 25 ಸಾವಿರ ಕೋಟಿ ರೂ. ಸಾಲ ವಿತರಣೆ ಗುರಿ.

* ಸರ್ಕಾರಿ ಪದವಿಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ. 8 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ

* ಹಳ್ಳಿ ಮುತ್ತು ಯೋಜನೆ: ಗ್ರಾಮೀಣ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿ, ಸಿಇಟಿ ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾಗುವ 500 ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕ ಭರಿಸಲು ಕ್ರಮ

* ಮನೆಮನೆಗೆ ಆರೋಗ್ಯ ಕಾರ್ಯಕ್ರಮದಡಿ ಗ್ರಾಮೀಣ ಜನತೆಯ ಸಮಗ್ರ ಆರೋಗ್ಯ ತಪಾಸಣೆಗೆ 2023-24ರಲ್ಲಿ ಎರಡು ಬಾರಿ ಆರೋಗ್ಯ ಶಿಬಿರ ಆಯೋಜನೆ

* ಆರೋಗ್ಯ ಸೇವೆಗಳ ಡಿಜಿಟಲೀಕರಣ. ರೋಗಿಗಳ ಆರೋಗ್ಯ ದಾಖಲೆಗಳ ಸುರಕ್ಷಿತ ಕ್ರೋಡೀಕರಣಕ್ಕೆ ಕ್ರಮ

* ರಾಯಚೂರಿನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆ ಹಾಗೂ ಕುಮಟಾದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ

* ಮಹಿಳಾ ಸಬಲೀಕರಣಕ್ಕೆ ಗೃಹಿಣಿ ಶಕ್ತಿ ಯೋಜನೆ - ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಮಾಸಿಕ ₹500 ಸಹಾಯಧನ. 30 ಲಕ್ಷ ಕಾರ್ಮಿಕ ಮಹಿಳೆಯರಿಗೆ ಉಚಿತ ಬಸ್ ಪಾಸ್ (1000 ಕೋಟಿ)

* ವಿದ್ಯಾವಾಹಿನಿ ಯೋಜನೆಯಡಿ, ಶಾಲಾ ಕಾಲೇಜುಗಳ 8 ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ (350 ಕೋಟಿ)

* ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ನಿವೃತ್ತಿ ಉಪಧನಕ್ಕಾಗಿ 40 ಕೋಟಿ ಅನುದಾನ; ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಬಿಸಿಯೂಟ ತಯಾರಕಿಯರು, ಆಶಾ ಕಾರ್ಯಕರ್ತೆಯರ ಗೌರವ ಧನ 1 ಸಾವಿರ ರೂ. ಹೆಚ್ಚಳ

* ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ ಕಾರ್ಯಕ್ರಮದಡಿ ಪ್ರತಿ ಜಿಲ್ಲೆಯಲ್ಲಿ ಜಾನಪದ ಹಬ್ಬ ಆಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT