ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ರಾಜಕೀಯದಿಂದ ನಿವೃತ್ತಿ: ರಮಾನಾಥ ರೈ

Published 16 ಮೇ 2023, 12:00 IST
Last Updated 16 ಮೇ 2023, 12:00 IST
ಅಕ್ಷರ ಗಾತ್ರ

ಮಂಗಳೂರು: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿರುವ ಪಕ್ಷದ ನಾಯಕ ರಮಾನಾಥ ರೈ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಪ್ರಕಟಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ನನಗೀಗ 71 ವರ್ಷ. ಇಷ್ಟು ವರ್ಷ ಪಕ್ಷವು ನನಗೆ ಎಲ್ಲ ರೀತಿಯ ಅವಕಾಶಗಳನ್ನು ನೀಡಿದೆ. ನಾನು ಅಭ್ಯರ್ಥಿಯಾಗುವ ಬಗ್ಗೆ ಪಕ್ಷದಲ್ಲೇ ಭಿನ್ನಸ್ವರಗಳಿದ್ದವು. ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ, ಪಕ್ಷದ ಚಟುವಟಿಕೆಗಳಲ್ಲಿ ಇನ್ನು ಮುಂದೆಯೂ ಸಕ್ರಿಯವಾಗಿ ಭಾಗವಹಿಸುತ್ತೇನೆ’ ಎಂದರು. 

ಬಂಟ್ವಾಳ ಕ್ಷೇತ್ರದಿಂದ 1985ರ ಬಳಿಕ ಒಟ್ಟು ಒಂಬತ್ತು ಸಲ ಸ್ಪರ್ಧಿಸಿರುವ ರಮಾನಾಥ ರೈ ಆರು (1985, 1989, 1994, 1999, 2008 ಮತ್ತು 2013) ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೂರು ಸಲ (2004, 2018, ಮತ್ತು 2023) ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಸೊಲನುಭವಿಸಿದ್ದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ರೈ, ‘ಇನ್ನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ನಾನು ನಿರ್ಧಾರ ತಳೆದಿದ್ದೇನೆ. ನನಗೆ ಪಕ್ಷ ಮುಖ್ಯ. ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ಧವಾಗಿರುತ್ತೇನೆ’ ಎಂದರು.

‘ಈ ಬಾರಿಯ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ ಪಕ್ಷದ ಬಗ್ಗೆಯೇ ಒಲವು ವ್ಯಕ್ತಪಡಿಸಿದ್ದರು. ಈ ಬಾರಿ ಗೆಲ್ಲಬಹುದು ಎಂಬ ವಿಶ್ವಾಸವನ್ನು ಹೊಂದಿದ್ದೆ. ಆದರೂ ಎಲ್ಲೋ ಹಿನ್ನಡೆಯಾಗಿದೆ. ಸೋಲಿಗೆ ಕಾರಣ ಏನು ಎಂಬ ಬಗ್ಗೆ ಆತ್ಮಾವಲೊಕ ಮಾಡಿಕೊಳ್ಳುತ್ತೇನೆ. 2018ರ ವಿಧಾನ ಸಭಾ ಚುನಾವಣೆಗೆ ಹೋಲಿಸಿದರೆ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿನ ಅಂತರ 15,971ಮತಗಳಿಂದ 8,282ಕ್ಕೆ ಇಳಿಕೆಯಾಗಿದೆ’ ಎಂದರು.

ರಾಜ್ಯದಲ್ಲಿ ಪಕ್ಷದ ಸಾಧನೆಗೆ ಅಭಿನಂದನೆ ಸಲ್ಲಿಸಿದ ರೈ, ‘ಇಷ್ಟು ವರ್ಷವೂ ರಾಜ್ಯದಲ್ಲಿ ಬಿಜೆಪಿ ಒಮ್ಮೆಯೂ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ. ಅವರು ಜೆಡಿಎಸ್‌ ಜೊತೆ ಸಮ್ಮಿಶ್ರ ಸರ್ಕಾರ ನಡೆಸಿದರು. ನಂತರ ಪಕ್ಷೇತರ ಶಾಸಕರ ಜೊತೆ ಸೇರಿ ಹಾಗೂ ಆಪರೇಷನ್‌ ಕಮಲದ ಮೂಲಕ‌ ಸರ್ಕಾರ ರಚಿಸಿದರು. ಮತದಾರರು ಯಾವತ್ತೂ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡಿಲ್ಲ. ಮುಂದೆಯೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಪಕ್ಷವೇ ಜಯಭೇರಿ ಬಾರಿಸಲಿದೆ’ ಎಂದರು. 

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಲೋಕಸಭೆ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಈಗಲೇ ಸಜ್ಜಾಗಬೇಕು ಎಂದರು. 

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆ ಆಗಿರುವ ಸೋಲನ್ನು ಒಪ್ಪಿಕೊಳ್ಳುತ್ತೇವೆ. ಮುಂಬರುವ ಚುನಾವಣೆಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಕಠಿಣ ಶ್ರಮ ಹಾಕಲಿದ್ದೇವೆ. ಹೇಗೂ ರಾಜ್ಯದಲ್ಲಿ ನಮ್ಮ ಪಕ್ಷದ್ದೇ ಸರ್ಕಾರ ರಚನೆಯಾಗಲಿದೆ’ ಎಂದರು. 

ಪ್ರಮಾಣವಚನ ಸಮಾರಂಭ ಮುಗಿದ ತಕ್ಷಣವೇ ಕಾಂಗ್ರೆಸ್‌ ಪಕ್ಷದ ‘ಗ್ಯಾರಂಟೀ’ಗಳನ್ನು ಅನುಷ್ಠಾನಕ್ಕೆ ತರಲಾಗುವುದು‘ ಎಂದು ತಿಳಿಸಿದರು.

ರಮಾನಾಥ ರೈ  ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಕುರಿತು ಪ್ರತಿಕ್ರಿಯಿಸಿದ ಶಾಸಕ ಯು.ಟಿ.ಖಾದರ್‌, ‘ಅವರು ಹಿರಿಯ ನಾಯಕ. ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಕ್ಕೆ ಪಕ್ಷವು ಅವಕಾಶ ನೀಡುವುದಿಲ್ಲ. ಇನ್ನು ಮುಂದೆಯೂ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸದ್ದಾರೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT