ಬೆಂಗಳೂರು: ಅರ್ಹತಾ ಕಂಡಿಕೆಗಳಾದ ಬಿ, ಸಿ, ಡಿ, ಐ, ಜೆ, ಕೆ, ಎಲ್, ಎಂ, ಎನ್- ಕ್ಲೇಮ್ ಮಾಡಿರುವ ಹಾಗೂ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ನಿಗದಿತ ದಿನಾಂಕಗಳಂದು ದಾಖಲೆಗಳ ಪರಿಶೀಲನೆಗೆ ಹಾಜರಾಗದೇ ಇದ್ದರೆ ಅಂತಹವರು ಆಗಸ್ಟ್ 9ರವರೆಗೆ ಕೆಇಎ ಕಚೇರಿಗೆ ಖುದ್ದು ಹಾಜರಾಗಿ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳದೇ ಇದ್ದಲ್ಲಿ ಅಂತಹವರು ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಅರ್ಹರಾಗುವುದಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಇಟಿ ಪರಿಶೀಲನಾ ಅರ್ಜಿಯೇ ಸಾಕು: ಈ ಮೇಲ್ಕಂಡ ಕಂಡಿಕೆಗಳಲ್ಲಿ ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಆಯಾ ದಿನವೇ ಪರಿಶೀಲನಾ ಪತ್ರ (ವೆರಿಫಿಕೇಷನ್ ಸ್ಲಿಪ್) ನೀಡಿದ್ದು, ಅದನ್ನೇ ಯುಜಿನೀಟ್ ಪ್ರವೇಶಕ್ಕೂ ಬಳಸಬಹುದು. ಯುಜಿಸಿಇಟಿ ಅರ್ಜಿಗೆ ಯುಜಿನೀಟ್ ರೋಲ್ ಸಂಖ್ಯೆಯನ್ನು ಲಿಂಕ್ ಮಾಡಬೇಕು ಮತ್ತು ಅರ್ಜಿ ಪ್ರತಿಯನ್ನು ಮುದ್ರಣ ಮಾಡಿಕೊಳ್ಳಬೇಕು. ಅಂತಹವರು ಯುಜಿನೀಟ್ ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯುಜಿಸಿಇಟಿ ವೆರಿಫಿಕೇಷನ್ ಸ್ಲಿಪ್‌ನಲ್ಲಿ ಮುದ್ರಿತವಾಗಿರುವ ಸೀಕ್ರೆಟ್ ಕೀ ಮತ್ತು ಅರ್ಜಿ ಸಂಖ್ಯೆಯನ್ನೇ ನಮೂದಿಸಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳಿಗೆ ಇಚ್ಛೆಗಳನ್ನು (ಆಪ್ಷನ್) ದಾಖಲಿಸಬಹುದು. ಇದಕ್ಕೆ ಸದ್ಯದಲ್ಲೇ ಪೋರ್ಟಲ್ ಅನ್ನು ತೆರೆಯಲಾಗುವುದು ಎಂದು ಅವರು ವಿವರಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.