ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತಷ್ಟು ತಗ್ಗಿದ ತುಂಗಭದ್ರೆ ಒಳ–ಹೊರಹರಿವು: ಮುಳುಗಡೆ ಭೀತಿ ದೂರ

Last Updated 9 ಸೆಪ್ಟೆಂಬರ್ 2019, 9:16 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು, ಹೊರಹರಿವು ಸೋಮವಾರ ಮತ್ತಷ್ಟು ತಗ್ಗಿದ್ದು, ತಾಲ್ಲೂಕಿನ ಕೆಲ ಗ್ರಾಮಗಳು ಮುಳುಗಡೆ ಭೀತಿಯಿಂದ ದೂರವಾಗಿವೆ.

ನಾಲ್ಕೈದು ದಿನಗಳಿಂದ ಸತತವಾಗಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿತ್ತು. 1,25,000 ಕ್ಯುಸೆಕ್‌ ವರೆಗೆ ನೀರು ಬಿಡಲಾಗಿತ್ತು. ಎರಡು ಲಕ್ಷ ಕ್ಯುಸೆಕ್‌ ವರೆಗೆ ಹೆಚ್ಚಾಗುವ ಸಾಧ್ಯತೆ ಇತ್ತು. ಅದರಿಂದ ತಾಲ್ಲೂಕಿನ ಹಂಪಿ, ವೆಂಕಟಾಪುರ ಹಾಗೂ ಬುಕ್ಕಸಾಗರ ಗ್ರಾಮಗಳು ಮುಳುಗಡೆಯ ಭೀತಿ ಎದುರಿಸುತ್ತಿದ್ದವು.

ಕಂಪ್ಲಿ–ಗಂಗಾವತಿ ಸೇತುವೆಗೆ ಸಮನಾಗಿ ನೀರು ಹರಿಯುತ್ತಿದ್ದರಿಂದ ವಾಹನ ಸಂಚಾರ ಕಡಿತಗೊಳ್ಳುವ ಸಾಧ್ಯತೆ ಇತ್ತು. ಆದರೆ, ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವ ಕಾರಣ ಸೇತುವೆ ಮೇಲೆ ಲಘು ವಾಹನ ಸಂಚಾರ ಆರಂಭಗೊಂಡಿದೆ. ನದಿ ಅಂಚಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಹಂಪಿಯ ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಚಕ್ರತೀರ್ಥ ಈಗಲೂ ಸಂಪೂರ್ಣವಾಗಿ ನೀರಿನಲ್ಲಿಯೇ ಇವೆ.
1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1,632.14 ಅಡಿ ನೀರು ಸಂಗ್ರಹವಾಗಿದೆ. 96,546 ಕ್ಯುಸೆಕ್‌ ಒಳಹರಿವು ಇದ್ದರೆ, 96,600 ಕ್ಯುಸೆಕ್‌ ಹೊರಹರಿವು ದಾಖಲಾಗಿದೆ. ಭಾನುವಾರ 97,352 ಕ್ಯುಸೆಕ್‌ ಒಳಹರಿವು, 1,01,000 ಕ್ಯುಸೆಕ್‌ ಹೊರಹರಿವು ಇತ್ತು.

ಮಳೆ ಇಳಿಮುಖ, ಮುಂದುವರಿದ ಪ್ರವಾಹ

ಬೆಳಗಾವಿ: ಜಿಲ್ಲೆಯಲ್ಲಿ ಹಾಗೂ ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲಿ ಸೋಮವಾರ ಮಳೆ ಇಳಿಮುಖವಾಗಿದೆ.ಆದಾಗ್ಯೂ, ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣ ಏರಿಕೆಯಲ್ಲಿಯೇ ಇದೆ.

ಚಿಕ್ಕೋಡಿ ಬಳಿ ಕೃಷ್ಣಾ ನದಿಗೆ 1.88 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ನಿನ್ನೆಗೆ ಹೋಲಿಸಿದರೆ 8,000 ಕ್ಯುಸೆಕ್ ಹೆಚ್ಚು ಇದಾಗಿದೆ.
ಮಲಪ್ರಭಾ ಹಾಗೂ ಘಟಪ್ರಭಾ ಹರಿವು ಕೂಡ ಇಳಿಮುಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT