ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋದಾವರಿ-ಕೃಷ್ಣಾ-ಕಾವೇರಿ ನದಿಗಳ ಜೋಡಿಸುವ ಯೋಜನೆ: ರಾಜ್ಯಕ್ಕೆ ಬರೀ 2.19 TMC ನೀರು

Published 9 ಜುಲೈ 2024, 0:03 IST
Last Updated 9 ಜುಲೈ 2024, 0:03 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮಹಾನದಿ–ಗೋದಾವರಿ–ಕೃಷ್ಣಾ–ಕಾವೇರಿ– ಪೆನ್ನಾರ್‌ ನದಿಗಳ ಜೋಡಣೆಯಿಂದ ಕರ್ನಾಟಕ ರಾಜ್ಯಕ್ಕೆ ನೈಜವಾಗಿ ಸಿಗುವುದು 2.19 ಟಿಎಂಸಿ ಅಡಿ ನೀರು ಮಾತ್ರ. 

ನೀರಿನ ಹಂಚಿಕೆಯಲ್ಲಿ ಭಾರಿ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರ, ಈ ತಾರತಮ್ಯ ಸರಿಪಡಿಸದಿದ್ದರೆ ಕರಡು ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ರಾಜ್ಯವಾರು ನೀರಿನ ಹಂಚಿಕೆಯನ್ನು ಪುನರ್‌ ‍ಪರಿಶೀಲಿಸಬೇಕು ಎಂದು ಆಗ್ರಹಿಸಿ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕರಿಗೆ ಜೂನ್‌ 19ರಂದು ಪತ್ರ ಬರೆದಿದ್ದಾರೆ. 

ಮಹಾನದಿ–ಗೋದಾವರಿ ಕಣಿವೆಯ ಹೆಚ್ಚುವರಿ 7 ಸಾವಿರ ಮಿಲಿಯನ್‌ ಕ್ಯೂಬಿಕ್‌ ಮೀಟರ್‌ (ಎಂಸಿಎಂ) ನೀರನ್ನು ಕೃಷ್ಣಾ, ಪೆನ್ನಾರ್‌ ಹಾಗೂ ಕಾವೇರಿ ಕಣಿವೆಯ ಭಾಗಕ್ಕೆ ಹರಿಸಿ 9.44 ಲಕ್ಷ ಹೆಕ್ಟೇರ್‌ ಭೂಮಿಗೆ ನೀರುಣಿಸಲು ಸಂಸ್ಥೆ ಪ್ರಸ್ತಾವ ಸಿದ್ಧಪಡಿಸಿತ್ತು. ಬಳಿಕ ಬೇಡ್ತಿ–ವರದಾ ನದಿಗಳ ಜೋಡಣೆಯನ್ನು ಈ ಪ್ರಸ್ತಾವದಲ್ಲಿ ಸೇರಿಸಲಾಗಿತ್ತು. ರಾಜ್ಯಗಳ ಜತೆಗೆ ಸಮಾಲೋಚಿಸಿ ಬಳಿಕ ಪರಿಷ್ಕೃತ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಹೆಚ್ಚುವರಿ ನೀರಿನ ವರ್ಗಾವಣೆ ಪ್ರಮಾಣವನ್ನು 7 ಸಾವಿರ ಎಂಸಿಎಂನಿಂದ 4 ಸಾವಿರ ಎಂಸಿಎಂಗೆ ಇಳಿಸಲಾಗಿತ್ತು. ನದಿ ಜೋಡಣೆಯಾದ ಬಳಿಕ ದಕ್ಷಿಣದ ರಾಜ್ಯಗಳಿಗೆ 147 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ. ರಾಜ್ಯಕ್ಕೆ 10.74 ಟಿಎಂಸಿ ಅಡಿ ನೀರು ನಿಗದಿಪಡಿಸಲಾಗಿದೆ. 

ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಕುಡಿಯುವ ನೀರು, ಕೈಗಾರಿಕೆ ಹಾಗೂ ನೀರಾವರಿ ಉದ್ದೇಶಕ್ಕೆ ನೀರಿನ ಹಂಚಿಕೆ ಮಾಡಲಾಗಿದೆ. ಆದರೆ, ಕರ್ನಾಟಕಕ್ಕೆ ಕೈಗಾರಿಕೆ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಹಂಚಿಕೆ ಆಗಿದೆ. ರಾಜ್ಯಕ್ಕೆ ನೈಜವಾಗಿ 2.19 ಟಿಎಂಸಿ ಅಡಿ ಮಾತ್ರ ಸಿಗಲಿದೆ. ಉಳಿದ ನೀರು ಕೆಳಭಾಗದಲ್ಲಿರುವ ರಾಜ್ಯಗಳಿಗೆ ಹರಿದು  ಹೋಗಲಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಲಿದೆ ಎಂಬುದು ಕರ್ನಾಟಕ ರಾಜ್ಯದ ತಕರಾರು. 

ಈ ಯೋಜನೆಯ ಅನುಷ್ಠಾನಕ್ಕೆ ಮುನ್ನ ರಾಜ್ಯಗಳು ಕರಡು ಒಪ್ಪಂದಕ್ಕೆ ಸಹಿ ಹಾಕಬೇಕಿದೆ. ಜಲ ಅಭಿವೃದ್ಧಿ ಸಂಸ್ಥೆಯು ಕರಡು ಒಪ್ಪಂದವನ್ನು ರಾಜ್ಯಗಳಿಗೆ ಕಳುಹಿಸಿದೆ. ಈ ಒಪ್ಪಂದಕ್ಕೆ ಸಹಿ ಹಾಕಲು ಕರ್ನಾಟಕ ನಿರಾಕರಿಸಿದೆ. ಐತಿಹಾಸಿಕ ಕಾರಣಗಳಿಂದಾಗಿ ಕೃಷ್ಣಾ ಹಾಗೂ ಕಾವೇರಿ ಕಣಿವೆಗೆ ಹೆಚ್ಚಿನ ನೀರು ಹಂಚಿಕೆಯಾಗಬೇಕು. ದಕ್ಷಿಣದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬರ ಪೀಡಿತ ಪ್ರದೇಶ ಹೆಚ್ಚು ಇರುವುದು ಕರ್ನಾಟಕದಲ್ಲೇ. ಹೀಗಾಗಿ, ಹೆಚ್ಚುವರಿ ನೀರಿನಲ್ಲಿ ರಾಜ್ಯಕ್ಕೆ ಶೇ 50ರಷ್ಟು ಪಾಲು ನೀಡಬೇಕು ಎಂದು ರಾಜ್ಯ ಪಟ್ಟು ಹಿಡಿದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT