ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

110 ಮಲ ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ: ಸಚಿವ ಸಂಪುಟ ತೀರ್ಮಾನ

ರಾಷ್ಟ್ರೀಯ ಹಸಿರು ಪೀಠ ನಿರ್ದೇಶನದಡಿ ಸಚಿವ ಸಂಪುಟ ತೀರ್ಮಾನ
Published 19 ಅಕ್ಟೋಬರ್ 2023, 16:42 IST
Last Updated 19 ಅಕ್ಟೋಬರ್ 2023, 16:42 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 30 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪರಿಸರ ಪರಿಹಾರ ನಿಧಿಯಡಿ 110 ಮಲ ತ್ಯಾಜ್ಯ ಸಂಸ್ಕರಣಾ ಸ್ಥಾವರಗಳ ಸ್ಥಾಪನೆಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ. ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಅಲ್ಲದೇ, ರಾಜ್ಯಮಟ್ಟದಲ್ಲಿ ಕರ್ನಾಟಕ ಮಿಷನ್‌ ಡೈರೆಕ್ಟರ್‌ ಮೂಲಕ ಒಟ್ಟು 161 ಸೆಸ್‌ಪೂಲ್‌ ವಾಹನಗಳನ್ನು ಸೆಪ್ಟಿಕ್‌ ಟ್ಯಾಂಕ್‌ಗಳಿಂದ ಎಫ್‌ಎಸ್‌ಟಿಪಿ ಘಟಕಗಳಿಗೆ ಮಲದ ಕೆಸರು ಸಾಗಣೆಗಾಗಿ ಖರೀದಿಸಲು ಅನುಮೋದನೆ ನೀಡಲಾಯಿತು ಎಂದರು.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ನಿರ್ದೇಶನ ಜಾರಿ ತರಲು ಎನ್‌ಜಿಟಿ ಪರಿಸರ ಪರಿಹಾರ ನಿಧಿ ಮತ್ತು ಎಸ್‌ಬಿಎಂ (ಯು)–2.0 ನಿಧಿಗಳ ಅಡಿಯಲ್ಲಿ ₹ 400.24 ಕೋಟಿ ವೆಚ್ಚದಲ್ಲಿ ಕೆಯುಐಡಿಎಫ್‌ಸಿ ವತಿಯಿಂದ ಈ ಘಟಕಗಳನ್ನು ನಿರ್ಮಿಸಲಾಗುವುದು. ಕರ್ನಾಟಕ ಮಿಷನ್‌ ಡೈರೆಕ್ಟರ್‌ ಮೂಲಕ ₹ 40.25 ಕೋಟಿ ವೆಚ್ಚದಲ್ಲಿ ಸೆಸ್‌ಪೂಲ್‌ ವಾಹನಗಳನ್ನು ಖರೀದಿಸಲಾಗುವುದು ಎಂದು ಪಾಟೀಲ ತಿಳಿಸಿದರು.

ಮೊದಲ ಹಂತದಲ್ಲಿ 110 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳ್ಳಲಿದೆ. ಇದಕ್ಕೆ ಟೆಂಡರ್‌ ಕರೆಯಲಾಗುವುದು. ಪ್ರತಿ ಕಂದಾಯ ವಿಭಾಗಕ್ಕೆ ನಾಲ್ಕು ಪ್ಯಾಕೇಜ್‌ಗಳಿಗಿಂತ ಹೆಚ್ಚಿಲ್ಲದಂತೆ ಟೆಂಡರ್‌ ಪ್ಯಾಕೇಜ್‌ ರೂಪಿಸಲಾಗುವುದು. ಈಗ ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಒಂದು ಘಟಕ ಆರಂಭವಾಗಿದೆ. ಅಲ್ಲದೇ, 45 ಎಫ್‌ಎಸ್‌ಟಿಪಿಗಳ ನಿರ್ಮಾಣ ಕಾರ್ಯ ಪೌರಾಡಳಿತ ನಿರ್ದೇಶನಾಲಯ ಕೈಗೆತ್ತಿಕೊಂಡಿದೆ ಎಂದು ಹೇಳಿದರು.

Cut-off box - 100 ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಒಪ್ಪಿಗೆ ರಾಜ್ಯದಲ್ಲಿ 100 ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು. ರಾಜ್ಯದಲ್ಲಿ ₹ 100 ಕೋಟಿ ವೆಚ್ಚದಲ್ಲಿ ಒಟ್ಟು 400 ಗ್ರಾಮ ನ್ಯಾಯಾಲಯಗಳನ್ನು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 100 ನ್ಯಾಯಾಲಯಗಳ ಸ್ಥಾಪನೆ ಆಗಲಿದೆ. ಇದಕ್ಕೆ ₹ 25 ಕೋಟಿ ಬೇಕಾಗುತ್ತದೆ ಎಂದರು. ‘ಗ್ರಾಮ ನ್ಯಾಯಾಲಯ– 2008’ರ ಅನ್ವಯ ರಾಜ್ಯ ಸರ್ಕಾರವು ಪಂಚಾಯಿತಿಮಟ್ಟದಲ್ಲಿ ಒಂದು ಅಥವಾ ಹೆಚ್ಚಿನ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ಅವಕಾಶವಿದೆ. ಈಗ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ತಾಲ್ಲೂಕುಗಳಲ್ಲಿ ತಲಾ ಒಂದೊಂದು ನ್ಯಾಯಾಲಯ ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ನ್ಯಾಯ ಮತ್ತು ಉಚಿತ ಕಾನೂನು ನೆರವಿಗೆ ಸಂಬಂಧಿಸಿದಂತೆ ರಾಜ್ಯವು ಸಮಾನ ಅವಕಾಶದ ಆಧಾರದ ಮೇಲೆ ನ್ಯಾಯ ಲಭಿಸುವಂತೆ ಕಾನೂನು ವ್ಯವಸ್ಥೆಯ ನಿರ್ವಹಣೆ ನಿಶ್ಚಿತಗೊಳಿಸಲು ಗ್ರಾಮ ನ್ಯಾಯಾಲಯಗಳ ಅಗತ್ಯವಿದೆ ಎಂದರು. ಈ ನ್ಯಾಯಾಲಯಗಳು ಜೆಎಂಎಫ್‌ಸಿ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ಮೂಲಕ ಕಾರ್ಯಕಲಾಪಗಳನ್ನು ನಿರ್ವಹಿಸುತ್ತವೆ ಎಂದೂ ಎಚ್‌.ಕೆ. ಪಾಟೀಲ ತಿಳಿಸಿದರು.

ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು

* ಗೃಹಲಕ್ಷ್ಮಿ ಯೋಜನೆ ಲಿಂಗತ್ವ ಅಲ್ಪಸಂಖ್ಯಾತರಿಗೂ ವಿಸ್ತರಣೆ. ಇದರಿಂದ ಈ ಸಮುದಾಯದ ಫಲಾನುಭವಿಗಳಿಗೆ ತಿಂಗಳಿಗೆ ₹ 2 ಸಾವಿರ ಸಿಗಲಿದೆ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ 854 ಕುಟುಂಬಗಳಿಗೆ ಇದರ ಪ್ರಯೋಜನ ಸಿಗಲಿದೆ. ₹ 2.04 ಕೋಟಿ ವೆಚ್ಚವಾಗಲಿದೆ.

* ಕೊಪ್ಪಳ ವೈದ್ಯಕೀಯ ಕಾಲೇಜಿನ 450 ಹಾಸಿಗೆಗಳ ಬೋಧನಾ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ಪರಿಷ್ಕೃತ ₹ 192 ಕೋಟಿ ಅಂದಾಜಿಗೆ ಒಪ್ಪಿಗೆ

* ಹುಬ್ಬಳ್ಳಿಯ ಗೋಕುಲ್‌ ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ಸಾರಿಗೆ ಕೇಂದ್ರ ಬಸ್‌ ನಿಲ್ದಾಣವನ್ನು ₹ 23.48 ಕೋಟಿ ಅಂದಾಜು ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಅನುಮೋದನೆ

* ಧಾರವಾಡ ಹಳೆಯ ನಗರ ಸಾರಿಗೆ ಬಸ್‌ ನಿಲ್ದಾಣವನ್ನು ₹ 13.11 ಕೋಟಿ ವೆಚ್ಚದಲ್ಲಿ ನೂತನ ಮಾದರಿ ನಗರ ಸಾರಿಗೆ ಬಸ್‌ ನಿಲ್ದಾಣ ನಿರ್ಮಾಣ ಮಾಡಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ

* ರಾಜ್ಯದ 11 ಪೊಲೀಸ್‌ ತರಬೇತಿ ಶಾಲೆಗಳ ಬಲವರ್ಧನೆ ಕಾಮಗಾರಿಯನ್ನು ₹ 20 ಕೋಟಿ ಆಡಳಿತಾತ್ಮಕ ಅನುಮೋದನೆ. ಖಾನಾಪುರ ಕಲಬುರಗಿ ಕೆಪಿಎ ಮೈಸೂರು ಐಮಂಗಲ ಧಾರವಾಡ ಹಾಸನ ಪಿಟಿಎಸ್‌ ಮೈಸೂರು ಥಣಿಸಂದ್ರ ಯಲಹಂಕ ಚನ್ನಪಟ್ಟಣ ಮತ್ತು ಪಿಡಿಎಂಎಸ್‌ಗಳಲ್ಲಿರುವ ಶಾಲೆಗಳ  ಬಲವರ್ಧನೆ ಮಾಡಲಾಗುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT