ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿ ನೇಹಾ ಹತ್ಯೆ: ಸರ್ಕಾರ ಜಿಹಾದಿಗಳ ರಕ್ಷಣೆಗೆ ನಿಂತಿದೆ; ಆರ್‌. ಅಶೋಕ

Published 19 ಏಪ್ರಿಲ್ 2024, 11:24 IST
Last Updated 19 ಏಪ್ರಿಲ್ 2024, 11:24 IST
ಅಕ್ಷರ ಗಾತ್ರ

ಬೆಂಗಳೂರು: ‘ಲವ್‌ ಜಿಹಾದ್‌ಗೆ ಒಪ್ಪದ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆದರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಲವ್‌ಜಿಹಾದ್‌ ನಡೆದಿಲ್ಲ ಎಂದು ಜಿಹಾದಿಗಳ ರಕ್ಷಣೆಗೆ ನಿಂತಿದ್ದಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಆರೋಪಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜು ಆವರಣದಲ್ಲೇ ಮುಸ್ಲಿಂ ಮತಾಂಧರು ಹಾಡು ಹಗಲೇ ನೇಹಾ ಅವರನ್ನು ಇರಿದು ಕೊಂದಿರುವ ಘಟನೆಯಿಂದ ಇಡೀ ರಾಜ್ಯವೇ ದಿಗ್ಭ್ರಮೆಗೆ ಒಳಗಾಗಿದೆ ಎಂದರು.

ಸಿದ್ದರಾಮಯ್ಯ ಮತ್ತು ಗೃಹಸಚಿವ ಪರಮೇಶ್ವರ ಅವರು ಈ ಸಂಬಂಧ ನಾಚಿಕೆಗೆಟ್ಟ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಕಾರ್ಪೊರೇಟರ್‌ ಮಗಳೇ ಹತ್ಯೆಗೀಡಾಗಿದ್ದಾಳೆ. ಲವ್‌ಜಿಹಾದ್‌ ಕಾರಣಕ್ಕೆ ಕೊಲೆಯಾಗಿದೆ ಎಂದು ಮನೆಯವರೇ ಹೇಳಿದ್ದರೂ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕೌಟುಂಬಿಕ ಕಾರಣ ಎಂದು ತೇಪೆ ಸಾರಿಸಿದ್ದಾರೆ. ಸುಳ್ಳುಗಳ ಸರದಾರ ಬೇರೆ ಯಾರೂ ಅಲ್ಲ ಸ್ವತಃ ಸಿದ್ದರಾಮಯ್ಯ ಅವರೇ ಸುಳ್ಳುಗಳ ಸರದಾರ. ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆಯೇ ಇಲ್ಲ ಮತ್ತು ಹಿಂದೂಗಳಿಗೆ ರಕ್ಷಣೆಯೇ ಇಲ್ಲವಾಗಿದೆ ಎಂದು ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಮೇಲೆ ಮುಸ್ಲಿಂ ಮತಾಂಧರ ಆಕ್ರಮಣ ಹೆಚ್ಚಾಗಿದೆ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ‘ಜೈ ಶ್ರೀರಾಮ್‌’ ಘೋಷಣೆ ಕೂಗಿದ ಯುವಕರ ಮೇಲೆ ಹಲ್ಲೆ ನಡೆಸಿ ಅಲ್ಲಾಹು ಅಕ್ಬರ್‌ ಕೂಗುವಂತೆ ಕೊಲೆ ಬೆದರಿಕೆ ಹಾಕಿದ್ದರು. ನಿನ್ನೆ ಹರ್ಷಿಕಾ ಪೂಣಚ್ಚ ಎಂಬ ಕಲಾವಿದೆ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಹನುಮಾನ್ ಚಾಲಿಸಾ ರೆಕಾರ್ಡ್‌ ಹಾಕಿದ್ದ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಶಿವಮೊಗ್ಗದಲ್ಲಿ ಔರಂಗಜೇಬ್‌ ಕಟೌಟ್‌ ಹಾಕಿ ಗಲಾಟೆ ಎಬ್ಬಿಸಿ ಹಿಂದೂಗಳನ್ನು ಬೆದರಿಸುವ ಕೆಲಸವೂ ನಡೆಯಿತು. ಇದಲ್ಲದೇ ಬೆಳಗಾವಿ ಅಧಿವೇಶನದ ವೇಳೆ ದಲಿತ ಮಹಿಳೆಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಾಕಲಾಯಿತು. ಇವೆಲ್ಲವನ್ನೂ ಸಿದ್ದರಾಮಯ್ಯ ಸರ್ಕಾರ ವ್ಯವಸ್ಥಿತವಾಗಿ ಮುಚ್ಚಿ ಹಾಕಿದೆ ಎಂದರು.

ಮುಸ್ಲಿಂ ಓಲೈಕೆ ಮೂಲಕ ಕಾಂಗ್ರೆಸ್‌ ಪಕ್ಷ ಬಹುಸಂಖ್ಯಾತರ ಹಿಂದೂಗಳನ್ನು ಮೂಲೆ ಗುಂಪು ಮಾಡುತ್ತಿದೆ. ಸಾರ್ವಜನಿಕರ ರಕ್ಷಣೆ ನೀಡಲು ಸಾಧ್ಯವಾಗದಿದ್ದರೆ, ನಿಮ್ಮ ರಕ್ಷಣೆ ನೀವೇ ಮಾಡಿಕೊಳ್ಳಿ ಎಂದಾದರೂ ಹೇಳಲಿ. ಸಾರ್ವಜನಿಕರ ರಕ್ಷಣೆ ಮಾಡುವ ನೈತಿಕ ಅಧಿಕಾರವನ್ನೇ ಸರ್ಕಾರ ಕಳೆದುಕೊಂಡಿದೆ ಎಂದು ಅಶೋಕ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT