ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಗ್ಯಾರಂಟಿ ಆಮಿಷ: ಕೇಂದ್ರಕ್ಕೆ ಹೈಕೋರ್ಟ್‌ ನೋಟಿಸ್‌

Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಚುನಾವಣೆ ವೇಳೆ ಮತದಾರರಿಗೆ ಗ್ಯಾರಂಟಿ ಭಾಗ್ಯಗಳ ಆಮಿಷವೊಡ್ಡಿ ಮತ ಪಡೆಯುವ ರಾಜಕೀಯ ಪಕ್ಷಗಳ ಮಾದರಿಗೆ ಕರ್ನಾಟಕ ರಾಜ್ಯ ಅವಕಾಶ ಮಾಡಿಕೊಟ್ಟಿದ್ದು, ಇಂತಹ ನಡೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು’ ಎಂಬ ಮನವಿಗೆ ಹೈಕೋರ್ಟ್‌ ಸ್ಪಂದಿಸಿದೆ.

ಈ ಸಂಬಂಧ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಎಂ.ಗೌತಮ ಗೌಡ, ಕೆ.ಆರ್.ಪ್ರಸಾದ್ ಮತ್ತು ಎ.ಮಂಜುನಾಥ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ‘ರಾಜ್ಯದಲ್ಲಿ ಕಳೆದ ವರ್ಷ  ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಮತದಾರರಿಗೆ ಗ್ಯಾರಂಟಿ ಕಾರ್ಡುಗಳ ಆಮಿಷವೊಡ್ಡಲಾಗಿದೆ. ಇದು ಚುನಾವಣಾ ಅಕ್ರಮ. ಇದೀಗ ಎಲ್ಲಾ ರಾಜ್ಯಗಳೂ ಇದೇ ಮಾದರಿಯನ್ನು ಅನುಕರಿಸಲು ಆರಂಭಿಸಿವೆ. ಹಾಗಾಗಿ, ಈ ಮಾದರಿ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಪ್ರತಿವಾದಿಗಳಾದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಕೇಂದ್ರ ಕಾನೂನು ಸಚಿವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ‍ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ಮಾರ್ಚ್‌ 11ಕ್ಕೆ ಮುಂದೂಡಿತು.

ಮನವಿ ಏನಿದೆ?: ‘ಚಾಲ್ತಿಯಲ್ಲಿರುವ ಕಾನೂನುಗಳನ್ನು ಪುನರ್‌ ಪರಿಶೀಲನೆಗೆ ಒಳಪಡಿಸಬೇಕು. ಮಾದರಿ ಚುನಾವಣಾ ನೀತಿ ಸಂಹಿತೆಗೆ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು. ಯಾರು ಆಧುನಿಕ ತಂತ್ರಜ್ಞಾನ ಬಳಸಿ ಇಂತಹ ಗ್ಯಾರಂಟಿ ಆಮಿಷಗಳನ್ನು ಒಡ್ಡುತ್ತಾರೆಯೊ ಅವರನ್ನು ಜನಪ್ರತಿನಿಧಿಗಳ ಕಾಯ್ದೆ ಅನುಸಾರ ಮತ್ತು ಭಾರತೀಯ ದಂಡ ಸಂಹಿತೆಯ ಕಲಂಗಳಡಿ ಶಿಕ್ಷಿಸಲು ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಎಚ್‌.ಸಿ. ಬಾಲಕೃಷ್ಣ ವಿರುದ್ಧ ಜೆಡಿಎಸ್‌ ದೂರು

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತ ಹಾಕದಿದ್ದರೆ ಗ್ಯಾರಂಟಿ ಯೋಜನೆ ರದ್ದುಗೊಳಿಸುವುದಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್‌ ಶಾಸಕ ಎಚ್‌.ಸಿ. ಬಾಲಕೃಷ್ಣ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಮ ಜರುಗಿಸುವಂತೆ ಆಗ್ರಹಿಸಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಜೆಡಿಎಸ್‌ ದೂರು ಸಲ್ಲಿಸಿದೆ.

ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದ ನಿಯೋಗವು ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಅವರನ್ನು ಶುಕ್ರವಾರ ಭೇಟಿಮಾಡಿ ದೂರು ಸಲ್ಲಿಸಿತು.

ಪಕ್ಷದ ಶಾಸಕರಾದ ಸುರೇಶ್ ಬಾಬು, ಕರೆಮ್ಮ ನಾಯಕ್, ಎಚ್.ಟಿ.ಮಂಜುನಾಥ, ಹರೀಶ್ ಗೌಡ, ಸ್ವರೂಪ್ ಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಎಚ್‌.ಎಂ.ರಮೇಶ್ ಗೌಡ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎ.ಪಿ.ರಂಗನಾಥ್ ನಿಯೋಗದಲ್ಲಿ ಇದ್ದರು. ‘ಬಾಲಕೃಷ್ಣ ಅವರು ಮತದಾರರಿಗೆ ಬೆದರಿಕೆ ಒಡ್ಡುವ ಮತ್ತು ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಆಮಿಷ ಒಡ್ಡುವ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಡಿ ಕ್ರಮ ಜರುಗಿಸಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT