ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಮೀರಿ ಗುತ್ತಿಗೆ ಕಾಮಗಾರಿ: ಸರ್ಕಾರ ಮೇಲೆ ₹2,865 ಕೋಟಿಗೂ ಹೆಚ್ಚು ಹೊರೆ

ಗುತ್ತಿಗೆದಾರರಿಗೆ ತಕ್ಷಣ ಪಾವತಿಸಬೇಕಿರುವ ಮೊತ್ತವೇ ₹2,865 ಕೋಟಿ
Published 22 ನವೆಂಬರ್ 2023, 0:30 IST
Last Updated 22 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿ ಲಭ್ಯ ಇದ್ದ ಅನುದಾನಕ್ಕಿಂತ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿದ ಪರಿಣಾಮ, ಸರ್ಕಾರ ಮೇಲೆ ₹2,865 ಕೋಟಿಗೂ ಹೆಚ್ಚು ಹೊರೆ ಬಿದ್ದಿದೆ.

ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನಕ್ಕಿಂತ ಶೇ 200ರಿಂದ 300ರಷ್ಟು ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ, ಕೆಲವು ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ ಹಲವು ಮುಕ್ತಾಯದ ಹಂತದಲ್ಲಿವೆ.

ಪೂರ್ಣಗೊಂಡಿರುವ ಕಾಮಗಾರಿಗಳ ಬಾಕಿ ಬಿಲ್‌ ಪಾವತಿಸುವಂತೆ ಗುತ್ತಿಗೆದಾರರು ತೀವ್ರ ಒತ್ತಡ ಹೇರುತ್ತಿದ್ದು,  ಪೂರಕ ಅನುದಾನದಲ್ಲಿ ಹೆಚ್ಚುವರಿ ಅನುದಾನ ನೀಡುವಂತೆ ಸಣ್ಣ ನೀರಾವರಿ ಇಲಾಖೆಯು ಆರ್ಥಿಕ ಇಲಾಖೆಗೆ ಕಡತ ಸಲ್ಲಿಸಿದೆ. ಈ ಕಡತಕ್ಕೆ ಸಣ್ಣ ನೀರಾವರಿ ಸಚಿವ ಎನ್.ಎಸ್‌. ಬೋಸರಾಜು ಅನುಮೋದನೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಇಲಾಖೆಯಲ್ಲಿ 2023 ಏಪ್ರಿಲ್‌ 1ಕ್ಕೆ ಒಟ್ಟು ₹11,238 ಕೋಟಿ ಮೊತ್ತದ ಕಾಮಗಾರಿಗಳ ಕಾರ್ಯಭಾರವಿದೆ. ಬಜೆಟ್‌ನಲ್ಲಿ ಹಿಂದಿನ ಬಿಜೆಪಿ ಸರ್ಕಾರ ಅನುದಾನ ಮೀಸಲಿಡದೆ ಕಾಮಗಾರಿಗೆ ಅನುಮೋದನೆ ನೀಡಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. 

ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್‌ನಲ್ಲಿ ಇಲಾಖೆಗೆ ₹2,269.95 ಕೋಟಿ ಅನುದಾನ ಒದಗಿಸಲಾಗಿತ್ತು. ಜುಲೈನಲ್ಲಿ ಸಿದ್ದರಾಮ‌ಯ್ಯ ಮಂಡಿಸಿದ ಬಜೆಟ್‌ನಲ್ಲಿ ಈ ಅನುದಾನವನ್ನು ₹2,000.39 ಕೋಟಿಗೆ ಕಡಿತಗೊಳಿಸಲಾಗಿದೆ. 

ಇಲಾಖೆಯು ಐದು ಪ್ರಧಾನ ರೀತಿಯ ಕಾಮಗಾರಿಗಳನ್ನು ನಿರ್ವಹಿಸುತ್ತಿದೆ. ಕೆರೆಗಳ ಆಧುನೀಕರಣ ವಿಭಾಗದಲ್ಲಿ ಕೆರೆಗಳ ಏರಿ ಬಲಪಡಿಸುವುದು, ಕೋಡಿಯ ದುರಸ್ತಿ ಮತ್ತು ನಾಲೆಗಳ ಲೈನಿಂಗ್‌ ಇತ್ಯಾದಿ ಕಾಮಗಾರಿ ನಡೆಸಲಾಗುತ್ತಿದೆ. ಅಣೆಕಟ್ಟು ಮತ್ತು ಪಿಕಪ್‌ ವಿಭಾಗದಲ್ಲಿ ನದಿ, ಹಳ್ಳಗಳಿಗೆ ಅಡ್ಡಲಾಗಿ ಬಾಂದಾರ, ಸೇತುವೆ ಸಹಿತ ಬಾಂದಾರ, ಕಿಂಡಿಅಣೆಕಟ್ಟೆ, ಉಪ್ಪು ನೀರು ತಡೆಗೋಡೆ ಅಣೆಕಟ್ಟುಗಳ ನಿರ್ಮಾಣ ಮಾಡಲಾಗುತ್ತಿದೆ. ಏತ ನೀರಾವರಿ ಯೋಜನೆ ಅಡಿಯಲ್ಲಿ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆರೆಗಳಿಗೆ ತುಂಬಿಸುವ ಕಾಮಗಾರಿ ನಡೆಸಲಾಗುತ್ತಿದೆ. ಪಶ್ಚಿಮವಾಹಿನಿ ವಿಭಾಗದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ ನದಿಗಳ ಹರಿವು ಸಂರಕ್ಷಿಸಲು ಮತ್ತು ಸಂಗ್ರಹಿಸಲು ಪಶ್ಚಿಮವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಮಾಡಲಾಗುತ್ತಿದೆ. ಪ್ರವಾಹ ನಿಯಂತ್ರಣ ಸಣ್ಣ ಕಾಮಗಾರಿಗಳು ವಿಭಾಗದಲ್ಲಿ ನದಿ ದಂಡೆಗಳಿಗೆ ಪ್ರವಾಹದಿಂದ ಹಾನಿಯಾಗುವುದನ್ನು ತಡೆಯಲು ನದಿ ದಂಡೆ ಸಂರಕ್ಷಣಾ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಐದು ಪ್ರಧಾನ ಯೋಜನೆಗಳಡಿ ಶೇ 90ರಷ್ಟು ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ.

ಟೆಂಡರ್‌ ನಿಯಮಗಳ ಅನ್ವಯ ಕಾಮಗಾರಿ ಪೂರ್ಣಗೊಳಿಸಿ ಬಿಲ್‌ಗಳನ್ನು ಪಾವತಿಗೆ ಸಲ್ಲಿಸಿರುವ ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು ಪಾವತಿಸಲು ಸರ್ಕಾರದಿಂದ ಹಣ ಬಿಡುಗಡೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಸಚಿವ ಬೋಸರಾಜು ಅವರಿಗೆ ಬೆಳಗಾವಿ ಜಿಲ್ಲಾ ಕಾರ್ಯನಿರತ ಗುತ್ತಿಗೆದಾರರ ಸಂಘ ಇದೇ 10ರಂದು ಮನವಿ ಸಲ್ಲಿಸಿದೆ.

‘ಇಲಾಖೆಯ ವಿವಿಧ ವಿಭಾಗಗಳ ವ್ಯಾಪ್ತಿಯಲ್ಲಿ ಕೈಗೊಂಡಿರುವ ಹಲವು ಕಾಮಗಾರಿಗಳ ಬಿಲ್‌ಗಳು ಬಾಕಿ ಇವೆ. ಇದರಿಂದ ಬಹುತೇಕ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕಾಮಗಾರಿಗೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಮರುಪಾವತಿ ಹಾಗೂ ಬಡ್ಡಿ ಪಾವತಿ, ಕುಟುಂಬ ನಿರ್ವಹಣೆ ಹೀಗೆ ವೆಚ್ಚ ನಿಭಾಯಿಸಲಾಗದೆ ಮುಜುಗರ ಅನುಭವಿಸುವಂತಾಗಿದೆ. ಬಿಲ್‌ ಪಾವತಿಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಂಘದ ಅಧ್ಯಕ್ಷ ಆರ್‌.ಡಿ. ಪದ್ಮಣ್ಣವರ ಮನವಿಯಲ್ಲಿ ಕೋರಿದ್ದಾರೆ.

₹700 ಕೋಟಿ‌ ಬಾಕಿ: ಸಿ.ಎಂಗೆ ಖಾದರ್‌ ಪತ್ರ

ಸಣ್ಣ ನೀರಾವರಿ ಇಲಾಖೆಯಲ್ಲಿ ‌ಮಂಗಳೂರು ವಿಭಾಗ ಒಂದರಲ್ಲಿಯೇ 2,500ಕ್ಕೂ ಹೆಚ್ಚು ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ.‌ ಹಲವು ಪಟ್ಟು ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಈ ವಿಭಾಗದಲ್ಲಿ ಅನುಮೋದನೆ ನೀಡಿರುವುದರಿಂದ ಸುಮಾರು ₹700 ಕೋಟಿ ಮೊತ್ತದ ಬಿಲ್‌ ಪಾವತಿಗೆ ಬಾಕಿ ಇದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ನ.2ರಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

2020–21ರಿಂದ 2022–23ನೇ ಸಾಲಿನ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಪತ್ರ ಬರೆದಿರುವ ಅವರು, ಬಲಿಷ್ಠ ಗುತ್ತಿಗೆದಾರರು ಪ್ರತಿವರ್ಷ 10ರಿಂದ 15 ಕಾಮಗಾರಿಗಳನ್ನು ಪಡೆದಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಗುತ್ತಿಗೆದಾರರು ವರ್ಷಕ್ಕೆ ಒಂದು ಕಾಮಗಾರಿ ಮಾತ್ರ ಪಡೆದಿದ್ದಾರೆ. ಕೆಲವು ಗುತ್ತಿಗೆದಾರರು ಬಲಿಷ್ಠ ಗುತ್ತಿಗೆದಾರರ ಹೆಸರಿನಲ್ಲಿ ಬಂಡವಾಳ ಹೂಡಿಕೆ ಮಾಡಿ ಕಾಮಗಾರಿ ಪಡೆದಿದ್ದಾರೆ. ಬಲಿಷ್ಠ ಗುತ್ತಿಗೆದಾರರು ತಮ್ಮ ಪ್ರಭಾವ ಬಳಸಿ ಪ್ರತಿ ತಿಂಗಳು ಬಿಡುಗಡೆಯಾದ ಹಣದಲ್ಲಿ ಗರಿಷ್ಠ ಮೊತ್ತ ಪಡೆಯುತ್ತಿದ್ದಾರೆ. ಹೀಗಾಗಿ, ಪ್ರತಿ ತಿಂಗಳು ಬರುವ ಎಲ್‌ಒಸಿಯಲ್ಲಿ (ಹಣ ಭರವಸೆ ಪತ್ರ) ಆರ್ಥಿಕವಾಗಿ ಹಿಂದುಳಿದ ಗುತ್ತಿಗೆದಾರರಿಗೆ ಮತ್ತು ವರ್ಷಕ್ಕೆ ಒಂದು ಕಾಮಗಾರಿ ಪಡೆದ ಗುತ್ತಿಗೆದಾರರಿಗೆ ಆದ್ಯತೆಯಲ್ಲಿ ಹಣ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಕೋರಿದ್ದಾರೆ.

ಸಭಾಧ್ಯಕ್ಷರು ಪತ್ರದಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಕಾಮಗಾರಿ ಮಾಡುವುದು ಕಷ್ಟಕರ. ಹಣಕಾಸು ಇಲಾಖೆ ಒಪ್ಪಿಗೆ ಪಡೆದೇ ಕೆಲಸ ಮಾಡಿಸಲಾಗಿದೆ. ಈಗ ಸರ್ಕಾರದ ಬಳಿ ಹಣ ಇಲ್ಲದೆ ಬಿಲ್ ಪಾವತಿಸಲು ಸಬೂಬು ಹೇಳುತ್ತಿದ್ದಾರೆ. ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಹಿಂದಿನ ಸರ್ಕಾರಗಳು ಬಿಟ್ಟು ಹೋಗಿದ್ದ ಬಿಲ್‌ಗಳನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಪಾವತಿಸಿಲ್ಲವೆ?

-ಜೆ.ಸಿ. ಮಾಧುಸ್ವಾಮಿ ಮಾಜಿ ಸಚಿವ ಸಣ್ಣ ನೀರಾವರಿ ಇಲಾಖೆ

ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಪಾವತಿಸಲು ಬಾಕಿ ಇರುವ ಮೊತ್ತ ಇನ್ನೂ ಜಾಸ್ತಿ ಇದೆ. ಹೀಗಾಗಿ ಪೂರಕ ಅಂದಾಜಿನಲ್ಲಿ ಹೆಚ್ಚುವರಿ ಅನುದಾನ ಒದಗಿಸುವಂತೆ ಆರ್ಥಿಕ ಇಲಾಖೆಯನ್ನು ಕೇಳಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಬಜೆಟ್‌ನಲ್ಲಿ ಅನುದಾನ ಮೀಸಲಿಡದೆ ಚುನಾವಣಾ ವರ್ಷದಲ್ಲಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ.

-ಎನ್‌.ಎಸ್‌. ಬೋಸರಾಜು ಸಚಿವರು ಸಣ್ಣ ನೀರಾವರಿ

ಬಾಕಿ ಬಿಲ್‌ಗಳ ವಿವರ (ಯಾವ ಕಾಮಗಾರಿ;ಎಷ್ಟು ಬಾಕಿ) (₹ ಕೋಟಿಗಳಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT