ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವರ್ಕರ್‌ ಪಾಠಕ್ಕೆ ಕೊಕ್‌ | ಕಾಂಗ್ರೆಸ್‌ ನಿರ್ಧಾರದಿಂದ ವ್ಯತಿರಿಕ್ತ ಪರಿಣಾಮ: ರಂಜಿತ್

Published 17 ಜೂನ್ 2023, 9:52 IST
Last Updated 17 ಜೂನ್ 2023, 9:52 IST
ಅಕ್ಷರ ಗಾತ್ರ

ಪಣಜಿ: ಕರ್ನಾಟಕದಲ್ಲಿ ಶಾಲಾ ಪಠ್ಯದಿಂದ ಹಿಂದುತ್ವ ಸಿದ್ಧಾಂತ ಪ್ರತಿಪಾದಕ ವಿ.ಡಿ. ಸಾವರ್ಕರ್‌ ಅವರ ಪಠ್ಯವನ್ನು ಕೈಬಿಟ್ಟಿರುವ ಕಾಂಗ್ರೆಸ್‌ ಸರ್ಕಾರದ ಕ್ರಮವನ್ನು ಸಾವರ್ಕರ್‌ ಮೊಮ್ಮಗ ರಂಜಿತ್ ಸಾವರ್ಕರ್ ಖಂಡಿಸಿದ್ದಾರೆ.

ಪಠ್ಯ ಪರಿಷ್ಕರಣೆ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಸಾವರ್ಕರ್ ಪಠ್ಯ ತೆಗೆದುಹಾಕುವ ಕರ್ನಾಟಕ ಸರ್ಕಾರದ ನಿರ್ಧಾರದಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದು ಹೇಳಿದ್ದಾರೆ.

‘ಪಾಠಗಳನ್ನು ಕೈಬಿಡುವ ಮೂಲಕ ವಿದ್ಯಾರ್ಥಿಗಳು ಸಾವರ್ಕರ್ ಬಗ್ಗೆ ಕಲಿಯುವ ಅವಕಾಶವನ್ನು ಕಸಿದುಕೊಳ್ಳಬಹುದು ಎಂದು ಕಾಂಗ್ರೆಸ್ ಭಾವಿಸಿರಬಹುದು. ಆದರೆ, ವಿದ್ಯಾರ್ಥಿಗಳು ತುಂಬಾ ತೀಕ್ಷ್ಣರಾಗಿದ್ದು, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ’ ಎಂದು ರಂಜಿತ್ ವಾಗ್ದಾಳಿ ನಡೆಸಿದ್ದಾರೆ.

‘ಪಾಠವನ್ನು ಅಳಿಸಿದರೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಸಾವರ್ಕರ್ ಕುರಿತು ಸಾಕಷ್ಟು ವಿಷಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿವೆ. ಜತೆಗೆ, ಸಾವರ್ಕರ್ ಅವರ ಸಾಹಿತ್ಯವನ್ನು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ’ ಎಂದಿದ್ದಾರೆ.

ವಾಸ್ತವವಾಗಿ ನೀವು ಏನನ್ನಾದರೂ ಹೆಚ್ಚು ದಮನಿಸಿದರೆ ಅದು ಹೆಚ್ಚು ಮರುಕಳಿಸುತ್ತದೆ ಎಂದು ನಾನು ಹೇಳುತ್ತೇನೆ. ಅದು ಸಹಜ ಪ್ರತಿಕ್ರಿಯೆ. ಪ್ರತಿಯೊಂದು ಕ್ರಿಯೆಯು ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆಯನ್ನು ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ.

ಪಠ್ಯ ಪರಿಷ್ಕರಣೆ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ನಡೆಸಿದ್ದ ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೈ ಬಿಟ್ಟು, ಅದಕ್ಕೂ ಹಿಂದೆ ಇದ್ದಂತಹ ಪಠ್ಯಗಳನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ. ಕೇಶವಬಲಿರಾಂ ಹೆಡಗೇವಾರ್‌, ಸಾವರ್ಕರ್‌ ಕುರಿತ ಪಾಠಗಳು, ಚಕ್ರವರ್ತಿ ಸೂಲಿಬೆಲೆ ಬರೆದ ಪಾಠಗಳನ್ನು ಕೈಬಿಡಲು ತೀರ್ಮಾನಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದರು.

ಹಿಂದೆ ಪಠ್ಯದಲ್ಲಿ ಇದ್ದ ಸಾವಿತ್ರಿಬಾಯಿ ಫುಲೆ, ಡಾ. ಅಂಬೇಡ್ಕರ್ ಕುರಿತ ಕವನ ಹಾಗೂ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರು ‘ಮಗಳಿಗೆ ಬರೆದ ಪತ್ರ’ದ ಪಾಠ ಸೇರಿದಂತೆ ಹಲವನ್ನು ಮತ್ತೆ ಸೇರಿಸಲಾಗುವುದು ಎಂದೂ ಹೇಳಿದ್ದರು.

ಈ ಮೂರು ವಿಷಯಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್‌ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ವಿವಾದಾತ್ಮಕವಾಗಿರುವ ಕಾಯ್ದೆಗಳನ್ನು ಮತ್ತು ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೈ ಬಿಡುವುದಾಗಿ ಭರವಸೆ ನೀಡಿತ್ತು ಎಂದು ಹೇಳಿದ್ದಾರೆ. ‘ಸುಮಾರು 45 ಬದಲಾವಣೆಗಳನ್ನು ಮಾಡಿದ್ದು, ಅದಕ್ಕೆ ಸಂಬಂಧಿಸಿದಂತೆ 15 ಪುಟಗಳ ಪೂರಕ ಪಠ್ಯವನ್ನು (ಸಪ್ಲಿಮೆಂಟರಿ) ರೂಪಿಸಿ ಶಾಲೆಗಳಿಗೆ ಕಳುಹಿಸಲು ತೀರ್ಮಾನಿಸಲಾಗಿದೆ. ‘ಯಾವುದನ್ನು ಬೋಧಿಸಬೇಕು, ಯಾವುದನ್ನು ಬೋಧಿಸಬಾರದು ಎಂಬುದನ್ನು ಶಿಕ್ಷಕರಿಗೆ ತಿಳಿಸಲಾಗುವುದು. ಸೇತುಬಂಧ ಕಾರ್ಯಕ್ರಮ ಮುಗಿಯುವುದರೊಳಗೆ ಪೂರಕ ಪಠ್ಯದ ಭಾಗವನ್ನು ಕಳುಹಿಸಲಾಗುವುದು’ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT