ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಚೆನ್ನೈ ಕಾರಿಡಾರ್‌: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್

Published 9 ಫೆಬ್ರುವರಿ 2024, 16:15 IST
Last Updated 9 ಫೆಬ್ರುವರಿ 2024, 16:15 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು–ಚೆನ್ನೈ ಕಾರಿಡಾರ್‌ ಮಾರ್ಗದಲ್ಲಿನ ಹೊಸಕೋಟೆ ತಾಲ್ಲೂಕಿನ ಕೊಳತೂರು ಜಂಕ್ಷನ್‌ ಬಳಿ ಮೇಲ್ಸೇತುವೆ ನಿರ್ಮಿಸುವಂತೆ ಕೋರಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಕೃಷಿಕರಾದ ಕೆ.ವಿ. ರವಿಕುಮಾರ್ ಸೇರಿದಂತೆ ಕೊಳತೂರು, ಅಪ್ಪಸಂದ್ರ, ಸೋಲೂರು, ಊರಹಳ್ಳಿ ಗ್ರಾಮಗಳ ಒಟ್ಟು 13 ನಿವಾಸಿಗಳು ಸಲ್ಲಿಸಿರುವ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್‌, ‘ಕಾರಿಡಾರ್‌ ನಿರ್ಮಾಣದಿಂದ ಗ್ರಾಮೀಣ ಭಾಗದ ನಿವಾಸಿಗಳು ಅನಪೇಕ್ಷಿತ ತೊಂದರೆ ಅನುಭವಿಸುವಂತಾಗಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ, ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್‌ ಯೋಜನಾ ನಿರ್ದೇಶಕ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ವಿಚಾರಣೆಯನ್ನು ಮಾರ್ಚ್‌ 1ಕ್ಕೆ ಮುಂದೂಡಲಾಗಿದೆ.

ಅರ್ಜಿಯಲ್ಲಿ ಏನಿದೆ?: ‘ಕೊಳತೂರು ಜಿಲ್ಲೆಯ ಪ್ರಮುಖ ಗ್ರಾಮ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಇದರ ಮುಖ್ಯ ರಸ್ತೆಯು ಕನಿಷ್ಠ 20 ಗ್ರಾಮಗಳನ್ನು ಸಂಪರ್ಕಿಸುತ್ತದೆ. ಈ ಗ್ರಾಮ ಹಾಲು ಉತ್ಪಾದನೆಯಲ್ಲಿ ಜಿಲ್ಲೆಯಲ್ಲಿ 2ನೇ ಸ್ಥಾನದಲ್ಲಿದೆ. ಅಂತೆಯೇ, ಸಮೀಪದಲ್ಲೇ ಜಿಲ್ಲಾ ತಾಯಿ ಮಕ್ಕಳ ಆಸ್ಪತ್ರೆಯನ್ನು ಸುಮಾರು ₹ 40 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಭಾಗದಲ್ಲಿ ಪ್ರತಿದಿನ ಸರಾಸರಿ ಒಂದು ಸಾವಿರ ವಾಹನಗಳ ಸಂಚಾರವಿದೆ. ಮುಖ್ಯವಾಗಿ ಶಾಲಾ ಮಕ್ಕಳು ಮತ್ತು ಹಾಲು ಸಾಗಣೆ ವಾಹನಗಳು, ಉಗ್ರಾಣಗಳಿಂದ ತರಕಾರಿ, ಹಣ್ಣು, ಇತ್ಯಾದಿ ದಿನಬಳಕೆ ಸಾಮಗ್ರಿಗಳ ಸರಬರಾಜು ನೇರವಾಗಿ ಬೆಂಗಳೂರು–ಕೋಲಾರ ರಸ್ತೆಯ ಎನ್‌ಎಚ್‌–75ಕ್ಕೆ ತಲುಪುತ್ತದೆ. 

ಬೆಂಗಳೂರು–ಚೆನ್ನೈ ಕಾರಿಡಾರ್‌ ರಸ್ತೆಯಿಂದ ಕೊಳತೂರು ಗ್ರಾಮದ ಮುಖ್ಯ ದ್ವಾರಕ್ಕೆ ಲಿಂಕ್‌ ರಸ್ತೆ ಕೊಟ್ಟು ಅಡ್ಡಿಪಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಮುಖ್ಯವಾಗಿ ತಾಯಿ ಮಕ್ಕಳ ಆಸ್ಪತ್ರೆಗೆ ತೆರಳುವವರು  ಸುತ್ತಿಕೊಂಡು ಬರಬೇಕಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಸಾಕಷ್ಟು ಮನವಿ ಸಲ್ಲಿಸಿದ್ದರೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಬೇರಾವುದೇ ರೀತಿಯ ಪರಿಹಾರ ಮಾರ್ಗವನ್ನೂ ತೋರಿಸಿಲ್ಲ’ ಎಂಬುದು ಅರ್ಜಿದಾರರ ಅಹವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT