ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಲೇಶ್ ಕುಮಾರ್ ಪ್ರಕರಣ: ಕೇಂದ್ರಕ್ಕೆ ಹೈಕೋರ್ಟ್‌ ನಿರ್ದೇಶನ

Published 17 ಜುಲೈ 2023, 22:04 IST
Last Updated 17 ಜುಲೈ 2023, 22:04 IST
ಅಕ್ಷರ ಗಾತ್ರ

ಬೆಂಗಳೂರು: ‘ಸೌದಿ ಅರೇಬಿಯಾದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ಶೈಲೇಶ್‌ ಕುಮಾರ್ ಅವರ ಮೇಲ್ಮನವಿ (ಸೌದಿಯಲ್ಲಿ ನಡೆಯುತ್ತಿರುವ ಪ್ರಕರಣ) ವಿಚಾರಣೆಯಲ್ಲಿ ಕೇಂದ್ರದ ನೆರವಿನ ಪಾತ್ರವನ್ನು ಪರಿಶೀಲಿಸಿದ ಹೈಕೋರ್ಟ್‌, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಕೆಲವೊಂದು ನಿರ್ದೇಶನ ನೀಡಿದೆ.

’ಧರ್ಮನಿಂದನೆ ಆರೋಪದಡಿ ಸೌದಿ ಅರೇಬಿಯಾದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ನಿವಾಸಿ ಜನಾರ್ದನ ಸಾಲಿಯಾನ ಶೈಲೇಶ್‌ ಕುಮಾರ್ ಅವರ ಪತ್ನಿಯಾದ ಮಂಗಳೂರಿನ ಬಿಕರ್ನಕಟ್ಟೆ ನಿವಾಸಿ ಕವಿತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಮೇಲ್ಮನವಿ ವಿಚಾರಣೆ ವೇಳೆ ಶೈಲೇಶ್‌ ಅವರಿಗೆ ಶಿಕ್ಷೆ ಕಾಯಂ ಆದರೆ ಇಡೀ ಪ್ರಕ್ರಿಯೆ ವಿಫಲವಾಗುತ್ತದೆ. ಅಷ್ಟರೊಳಗೆ ಅವರನ್ನು ನೇಣಿಗೇರಿಸಿದರೆ ಏನು ಮಾಡಬೇಕು? ಅಲ್ಲಿ ಏನು ಬೇಕಾದರೂ ಆಗಬಹುದು. ಸೌದಿ ಅರೇಬಿಯಾದಲ್ಲಿ ಆದೇಶವನ್ನು ಅಧಿಕೃತಗೊಳಿಸಿದ ಮೇಲೆ ಅದನ್ನು ಪುನರ್ ಪರಿಶೀಲಿಸಲು ಸಾಧ್ಯವಿದೆಯೇ ಎಂಬುದನ್ನು ನೋಡಿಕೊಳ್ಳಬೇಕು‘ ಎಂದು ಕೇಂದ್ರದ ಪರ ವಕೀಲ ಮಧುಕರ ದೇಶಪಾಂಡೆ ಅವರಿಗೆ ಸೂಚಿಸಿತು.

ಅಂತೆಯೇ, ‘ಸೌದಿ ಅರೇಬಿಯಾದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ಶೈಲೇಶ್‌ ಕುಮಾರ್ ಅವರು ಮೇಲ್ಮನವಿಯ ವಿಚಾರಣೆಯ ವೇಳೆ ತಾವು ಇಚ್ಛಿಸುವ ವಕೀಲರನ್ನು ನೇಮಿಸಿಕೊಳ್ಳಬಹುದೇ? ಹೌದು ಎಂದಾದರೆ ಭಾರತ ಸರ್ಕಾರವು ಅವರಿಗೆ ವಕೀಲರ ನೆರವು ಒದಗಿಸಲಿದೆಯೇ? ಭಾರತದಲ್ಲಿ ಪೊಲೀಸ್ ವಿಚಾರಣೆ ನಡೆಯುತ್ತಿದ್ದು, ಅದು ಪೂರ್ಣಗೊಳ್ಳುವವರೆಗೆ ವಿಚಾರಣೆಯನ್ನು ಮುಂದೂಡುವಂತೆ ಭಾರತೀಯ ರಾಯಭಾರ ಕಚೇರಿಯನ್ನು ಕೋರಬಹುದೇ...? ಎಂಬುದನ್ನು ತಿಳಿಸಿ‘ ಎಂದು ನಿರ್ದೇಶಿಸಿತು.

ಇದಕ್ಕೆ ಮಧುಕರ್ ದೇಶಪಾಂಡೆ, ‘ಮೇಲ್ಮನವಿ ಹಂತದಲ್ಲಿರುವ ಪ್ರಕರಣವನ್ನು ಬಾಕಿ ಉಳಿಸುವ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಬೇಕಿದೆ. ಸೂಕ್ತ ವೇದಿಕೆಯ ಮೂಲಕ ಅದನ್ನು ನಾವು ಸೌದಿಗೆ ತಲುಪಿಸಬೇಕಿದೆ‘ ಎಂದರು. ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT