ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಕಾರ್ಯಾಚರಣೆ | 69 ಸ್ಥಳಗಳಲ್ಲಿ ಶೋಧ; ಅಧಿಕಾರಿಗಳಿಗೆ ಬಿಸಿ

Published 30 ಅಕ್ಟೋಬರ್ 2023, 5:26 IST
Last Updated 30 ಅಕ್ಟೋಬರ್ 2023, 5:26 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿದ್ದಾರೆಂಬ ದೂರಿನ ಮೇಲೆ ಸೋಮವಾರ ಬೆಳಿಗ್ಗೆಯೇ ಕಾರ್ಯಾಚರಣೆ ಆರಂಭಿಸಿದ ಲೋಕಾಯುಕ್ತ ಪೊಲೀಸರು, 17 ಅಧಿಕಾರಿಗಳು ಹೊಂದಿರುವ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಹಾಗೂ ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 69 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಶುರುವಿಟ್ಟ ಲೋಕಾಯುಕ್ತ ಪೊಲೀಸರಿಗೆ ಭಾರಿ ಅಚ್ಚರಿಯೇ ಕಾದಿತ್ತು. ದೊಡ್ಡ ಮೊತ್ತದ ನಗದು ವಶವಾದ ಮಾಹಿತಿ ಇಲ್ಲವಾದರೂ ಕೆಲವು ಅಧಿಕಾರಿಗಳು ಏಳೆಂಟು ನಿವೇಶನ, ಐಷಾರಾಮಿ ತೋಟದ
ಮನೆಗಳನ್ನು ಹೊಂದಿರುವುದು ಪತ್ತೆಯಾಗಿದೆ.

ಬೆಳಿಗ್ಗೆಯಿಂದ ಶುರುವಾದ ಶೋಧ ಕಾರ್ಯ ಸಂಜೆಯವರೆಗೂ ಮುಂದುವರಿದಿತ್ತು. ಕೆಲವು ಅಧಿಕಾರಿಗಳು ತಮ್ಮ ಆದಾಯಕ್ಕಿಂತ ಶೇ 60ರಷ್ಟು ಹೆಚ್ಚಿನ ಆಸ್ತಿ ಹೊಂದಿದ್ದರೆ, ಲಾಭಕಟ್ಟಿನ ಹುದ್ದೆಯಲ್ಲಿರುವ ಕೆಲವು ಅಧಿಕಾರಿಗಳ ಅಕ್ರಮ ಆಸ್ತಿಯ ಪ್ರಮಾಣ ಶೇ 322ಕ್ಕಿಂತ ಹೆಚ್ಚಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಅರಣ್ಯ, ಸಮಾಜ ಕಲ್ಯಾಣ, ವಾಣಿಜ್ಯ ತೆರಿಗೆ, ನಗರ ಯೋಜನೆ, ಕೈಗಾರಿಕೆ, ಕೆಪಿಟಿಸಿಎಲ್‌ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಶೋಧದ ವೇಳೆ, 17 ಅಧಿಕಾರಿಗಳು ಒಟ್ಟು ₹37 ಕೋಟಿ ಮೌಲ್ಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಬಗ್ಗೆ ದಾಖಲೆ ಲಭ್ಯವಾಗಿದೆ ಎಂದು ಲೋಕಾಯುಕ್ತ ಮೂಲಗಳು ಹೇಳಿವೆ.

ದಾಳಿಯಲ್ಲಿ ₹14 ಲಕ್ಷಕ್ಕೂ ಹೆಚ್ಚು ನಗದು ವಶಕ್ಕೆ ಪಡೆಯಲಾಗಿದೆ. ಸಹಾಯಕ ಎಂಜಿನಿಯರ್ ನಾಗೇಂದ್ರಪ್ಪ ಮನೆಯಲ್ಲಿ 1.30 ಕೆ.ಜಿ ಚಿನ್ನ ದೊರೆತಿದೆ. 

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಟಿ.ಎಂ. ಶಶಿಕುಮಾರ್‌ ಆದಾಯಕ್ಕೆ ಮೀರಿ ಅಂದಾಜು ಶೇ 322ರಷ್ಟು ಆಸ್ತಿ ಹೊಂದಿದ್ದಾರೆ. ದಾವಣಗೆರೆ ಜಿಲ್ಲೆಯ ಬಾಯ್ಲರ್ಸ್‌ ಮತ್ತು ಫ್ಯಾಕ್ಟರೀಸ್‌ ವಿಭಾಗದ ಉಪನಿರ್ದೇಶಕ ಎಸ್‌.ಆರ್‌. ಶ್ರೀನಿವಾಸ್ ಅವರು ಶೇ 290ರಷ್ಟು ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವುದು ದಾಳಿಯ ವೇಳೆ ಪತ್ತೆಯಾಗಿದೆ.  

ಎಲ್ಲೆಲ್ಲಿ ದಾಳಿ: ಬೆಂಗಳೂರು ನಗರ, ತುಮಕೂರು, ಮಂಡ್ಯ, ಚಿತ್ರದುರ್ಗ, ಉಡುಪಿ, ಹಾಸನ, ಬಳ್ಳಾರಿ, ರಾಯಚೂರು, ಕಲಬುರ್ಗಿ, ಬೆಳಗಾವಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT