ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತ ಸಮುದಾಯಕ್ಕೆ ‘ಆತ್ಮಹತ್ಯೆಯ ದೌರ್ಭಾಗ್ಯ’ ನೀಡಿದ ಕಾಂಗ್ರೆಸ್‌: ಬಿಜೆಪಿ ಕಿಡಿ

Published 8 ಜುಲೈ 2024, 10:58 IST
Last Updated 8 ಜುಲೈ 2024, 10:58 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 15 ತಿಂಗಳಲ್ಲಿ ನಡೆದಿರುವ ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, ಕಾಂಗ್ರೆಸ್‌ ಸರ್ಕಾರದ ರೈತ ವಿರೋಧಿ ನೀತಿಯಿಂದ ನೊಂದು ರೈತ ಸಮುದಾಯ ಆತ್ಮಹತ್ಯೆಯ ಹಾದಿ ಹಿಡಿದಿದೆ ಎಂದು ವಾಗ್ದಾಳಿ ನಡೆಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ‘ನಾಡಿಗೆ ಅನ್ನ ನೀಡುವ ರೈತ ಸಮುದಾಯ, ಕಾಂಗ್ರೆಸ್‌ ಸರ್ಕಾರದ ರೈತ ವಿರೋಧಿ ನೀತಿಯಿಂದ ನೊಂದು, ಬೆಂದು, ಬಸವಳಿದು ಆತ್ಮಹತ್ಯೆಯ ಹಾದಿ ಹಿಡಿದಿದೆ. ರಾಜ್ಯದ ಪಾಲಿನ ಕಿಸಾನ್‌ ಸಮ್ಮಾನ್‌ ಸಹಾಯಧನ ರದ್ದು, ₹1,087 ಕೋಟಿ ಹಾಲಿನ ಪ್ರೋತ್ಸಾಹಧನ ಬಾಕಿ, ಹನಿ ನೀರಾವರಿ ಯೋಜನೆಯ ಸಹಾಯಧನ ಕಡಿತ, ಬೆಲೆ ಏರಿಕೆ ಮತ್ತು ಅಸಮರ್ಪಕ ಬರ ಪರಿಹಾರ ವಿತರಣೆ ಕಾರಣಗಳಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ರೈತರಿಗೆ ‘ಆತ್ಮಹತ್ಯೆಯ ದೌರ್ಭಾಗ್ಯ’ ನೀಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರೈತ ವಿರೋಧಿ ನಡೆಯಿಂದ ಕೇವಲ ಹದಿನೈದು ತಿಂಗಳಲ್ಲೇ ರಾಜ್ಯದ ಸರಿ ಸುಮಾರು 1,182 ಅನ್ನದಾತರು ಉಸಿರು ಚೆಲ್ಲಿದ್ದಾರೆ. ನೊಂದ ರೈತ ಕುಟುಂಬದ ಶಾಪ ಕಾಂಗ್ರೆಸ್‌ ಸರ್ಕಾರಕ್ಕೆ ತಟ್ಟದೇ ಇರಲಾರದು ಎಂದು ಬಿಜೆಪಿ ಕಿಡಿಕಾರಿದೆ.

ರೈತರ ಆತ್ಮಹತ್ಯೆ ಕುರಿತು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ‘ಕರ್ನಾಟಕ ಇತಿಹಾಸದಲ್ಲಿಯೇ ಅತಿ ಭಂಡ ಸರ್ಕಾರವೆಂದರೆ ರೈತ ವಿರೋಧಿ, ರೈತ ಹಂತಕ ಸಿದ್ದರಾಮಯ್ಯ ಅವರ ಸರ್ಕಾರವಾಗಿದೆ. ಕಾಂಗ್ರೆಸ್‌ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ರಾಜ್ಯದ 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕಾಂಗ್ರೆಸ್‌ನ ರೈತ ವಿರೋಧಿ ನೀತಿಯ ಜ್ವಲಂತ ನಿದರ್ಶನವಾಗಿದೆ’ ಎಂದು ಹೇಳಿದ್ದಾರೆ.

ಪರಿಹಾರಕ್ಕಾಗಿಯೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅವಹೇಳನ ಮಾಡುತ್ತಾ, ರೈತರಿಗೆ ಸಿಗಬೇಕಾದ ಪರಿಹಾರ ಕೊಡದೇ ಮೀನಮೇಷ ಎಣಿಸುತ್ತಾ ಕಾಲಹರಣ ಮಾಡಿದ ಕಾಂಗ್ರೆಸ್ ಸರ್ಕಾರ, ರೈತರನ್ನು ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ತೀವ್ರ ಬರ, ಬೆಳೆ ಹಾನಿ, ಕೈಗೆ ಸಿಗದ ಫಸಲು, ಸಾಲದ ಹೊರೆ ಹೀಗೆ ನಾನಾ ಕಾರಣಗಳಿಗೆ 2023 ಏಪ್ರಿಲ್‌ 1ರಿಂದ 2024 ಜುಲೈ 4ರೊಳಗೆ ಒಟ್ಟು 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT