ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಬಳಿಗೊಂದು ಕರ್ನಾಟಕ ಪಬ್ಲಿಕ್‌ ಶಾಲೆ: ಬಿ.ಸಿ.ನಾಗೇಶ್‌

ವಿಧಾನಸಭೆಯಲ್ಲಿ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿಕೆ
Last Updated 17 ಮಾರ್ಚ್ 2022, 21:53 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಹಂತ ಹಂತವಾಗಿ ಪ್ರತಿ ಹೋಬಳಿಗೆ ಒಂದು ಕರ್ನಾಟಕ ಪಬ್ಲಿಕ್‌ ಶಾಲೆ (ಕೆಪಿಎಸ್‌) ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.

2019–20ರ ಸಾಲಿನಲ್ಲಿ 100 ಸೇರಿ 276 ಪಬ್ಲಿಕ್‌ ಶಾಲೆಗಳನ್ನು ತೆರೆಯಲಾಗಿದೆ. ಅಲ್ಲದೆ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಮಟ್ಟವನ್ನು ಉತ್ತಮಪಡಿಸಲು ಹೋಬಳಿ ಮಟ್ಟದಲ್ಲಿ ಮೂಲಭೂತ ಸೌಕರ್ಯವಿರುವ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಉನ್ನತೀಕರಿಸಲಾಗುವುದು ಎಂದು ಅವರು ಹೇಳಿದರು.

ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಶಾಲೆಗಳಿರಲಿವೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಕರ ಕೊರತೆ ಇದ್ದು, ಭರ್ತಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಜವಾಬ್ದಾರಿ ಹಾಗೂ ಮೇಲ್ವಿಚಾರಣೆಯ ಪಾತ್ರವನ್ನು ಶಿಕ್ಷಣ ಇಲಾಖೆಯೇ ನಿರ್ವಹಿಸುತ್ತದೆ ಎಂದರು.

ಹೊಸ ಐಟಿಐ ಕಾಲೇಜು ಇಲ್ಲ: ರಾಜ್ಯದಲ್ಲಿ 270 ಸರ್ಕಾರಿ ಮತ್ತು 178 ಅನುದಾನಿತ ಐಟಿಐಗಳಿದ್ದು, ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಬರುತ್ತಿಲ್ಲ. ಸಾಕಷ್ಟು ಸೀಟುಗಳು ಖಾಲಿ ಉಳಿದಿರುವುದರಿಂದ ಹೊಸದಾಗಿ ಐಟಿಐಗಳನ್ನು ಆರಂಭಿಸುವುದಿಲ್ಲ ಎಂದು ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ಕಾಂಗ್ರೆಸ್‌ನ ಅಖಂಡ ಶ್ರೀನಿವಾಸಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪುಲಿಕೇಶಿ ನಗರದಲ್ಲಿ ಐಟಿಐ ಸ್ಥಾಪನೆಗೆ ಎರಡು ಎಕರೆ ಜಮೀನು ಕೊಟ್ಟರೆ ಪರಿಶೀಲಿಸಲಾಗುವುದು.

ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ‘ಡಿ’ ಗ್ರೂಪ್‌ ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದ ಮೇಲೆ ಒಂದು ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಉಳಿದ ಖಾಲಿ ಹುದ್ದೆಗಳಿಗೆ ಸರ್ಕಾರವೇ ನೇಮಕ ಮಾಡಿಕೊಳ್ಳಲಿದೆ ಎಂದು ಕಾಂಗ್ರೆಸ್‌ನ ಶಿವಾನಂದ ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿದರು.

ಅಲ್ಲದೆ, ಈಗಾಗಲೇ 1,250 ಉಪನ್ಯಾಸಕರ ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದೆ. 12 ಸಾವಿರ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗಿರುವ ಶುಲ್ಕವನ್ನು ಆಯಾ ಕಾಲೇಜುಗಳ ಬ್ಯಾಂಕ್‌ ಖಾತೆಗಳಲ್ಲಿ ಜಮೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT