ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಅತ್ಯುತ್ತಮ ಸಾಧನೆ (ಶೇ 77.88) ಮೆರೆದಿದ್ದಾರೆ. ಕಲಾ, ವಾಣಿಜ್ಯ, ವಿಜ್ಞಾನದ ಮೂರೂ ವಿಭಾಗಗಳಲ್ಲೂ ಮೊದಲ ಸ್ಥಾನದ ಕಿರೀಟವನ್ನು ಬಾಲಕಿಯರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

2024–25ರಲ್ಲಿ ಪರೀಕ್ಷೆ ಬರೆದಿದ್ದ 6.37 ಲಕ್ಷ ವಿದ್ಯಾರ್ಥಿಗಳಲ್ಲಿ 4.68 ಲಕ್ಷ ವಿದ್ಯಾರ್ಥಿಗಳು (ಶೇ 73.45) ತೇರ್ಗಡೆಯಾಗಿದ್ದಾರೆ. 2023–24ನೇ ಸಾಲಿನ ಫಲಿತಾಂಶಕ್ಕೆ (ಶೇ 81.15) ಹೋಲಿಸಿದರೆ ಈ ಬಾರಿ ಶೇ 7.70ರಷ್ಟು ಫಲಿತಾಂಶ ಕುಸಿದಿದೆ. ಪುನರಾವರ್ತಿತ ಹಾಗೂ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳ ಫಲಿತಾಂಶವನ್ನೂ ಪರಿಗಣಿಸಿದರೆ ಒಟ್ಟಾರೆ ಫಲಿತಾಂಶ ಶೇ 69.16ರಷ್ಟಿದೆ.

ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಷಯದ ಮೂರು ವಿಭಾಗಗಳಲ್ಲಿ ನಾಲ್ವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಈ ಬಾರಿಯ ವಿಶೇಷ. ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಲ್.ಆರ್. ಸಂಜನಾ ಬಾಯಿ (597), ವಾಣಿಜ್ಯ ವಿಭಾಗದಲ್ಲಿ ಮಂಗಳೂರು ಕೆನರಾ ಕಾಲೇಜಿನ ಎಸ್. ದೀಪಶ್ರೀ (599), ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನ ಅಮೂಲ್ಯ ಕಾಮತ್ (599) ಹಾಗೂ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ವಾಗ್ದೇವಿ ಕಾಲೇಜಿನ ಆರ್. ದೀಕ್ಷಾ ಅವರು ಮೊದಲ ಸ್ಥಾನ ಪಡೆದಿದ್ದಾರೆ.

ಪರೀಕ್ಷೆ ಬರೆದಿದ್ದ 3.45 ಲಕ್ಷ ವಿದ್ಯಾರ್ಥಿನಿಯರಲ್ಲಿ 2.69 ಲಕ್ಷ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 2.92 ಲಕ್ಷ ಬಾಲಕರಲ್ಲಿ 1.99 ಲಕ್ಷ (ಶೇ 68.20) ತೇರ್ಗಡೆಯಾಗಿದ್ದಾರೆ.

ಗ್ರಾಮೀಣರಿಗಿಂತ ನಗರ ಪ್ರದೇಶದ ವಿದ್ಯಾರ್ಥಿಗಳೇ ಈ ಬಾರಿ ಅಧಿಕ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದಿದ್ದ ನಗರ ಪ್ರದೇಶದ 5.03 ಲಕ್ಷ ವಿದ್ಯಾರ್ಥಿಗಳಲ್ಲಿ 3.75 ಲಕ್ಷ (ಶೇ 74.55) ಹಾಗೂ 1.34 ಲಕ್ಷ ಗ್ರಾಮೀಣ ವಿದ್ಯಾರ್ಥಿಗಳಲ್ಲಿ 93,251 (ಶೇ 69.33) ಮಂದಿ ತೇರ್ಗಡೆಯಾಗಿದ್ದಾರೆ.

ದಕ್ಷಿಣ ಕನ್ನಡ ಹಿಂದಿಕ್ಕಿದ ಉಡುಪಿ: ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆಯುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯನ್ನು ಈ ಬಾರಿ ಉಡುಪಿ ಜಿಲ್ಲೆ ಹಿಂದಿಕ್ಕಿದೆ. ಶೇ 93.90 ಫಲಿತಾಂಶ ಪಡೆದ ಉಡುಪಿ, ಜಿಲ್ಲಾವಾರು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಶೇ 93.57 ಸ್ಥಾನ ಪಡೆದ ದಕ್ಷಿಣ ಕನ್ನಡ ಎರಡನೇ ಸ್ಥಾನಕ್ಕೆ ಇಳಿದಿದೆ. ಕೊಪ್ಪಳ, ಚಿಕ್ಕೋಡಿ, ಗದಗ, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ, ರಾಯಚೂರು, ಕಲಬುರಗಿ, ಯಾದಗಿರಿ ಕೊನೆಯ 10 ಸ್ಥಾನಗಳಲ್ಲಿವೆ.

ಪರೀಕ್ಷೆ–2, 3ಕ್ಕೆ ಶುಲ್ಕವಿಲ್ಲ

ಅನುತ್ತೀರ್ಣರಾದ ಹಾಗೂ ಫಲಿತಾಂಶ ವೃದ್ಧಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸದೆ ಎರಡನೇ ಮತ್ತು ಮೂರನೇ ಪರೀಕ್ಷೆ ಬರೆಯಲು ಅವಕಾಶ ಒದಗಿಸಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪಿಯು ಪರೀಕ್ಷೆ–2 ಏ.24ರಿಂದ ಮೇ 8ರವರೆಗೆ, ಪರೀಕ್ಷೆ–3 ಜೂನ್ 9ರಿಂದ 21ರವರೆಗೆ ನಡೆಯಲಿದೆ. ಎರಡೂ ಪರೀಕ್ಷೆ ತೆಗೆದುಕೊಳ್ಳುವ ಎಲ್ಲ ವಿದ್ಯಾರ್ಥಿಗಳಿಗೂ
ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಶುಲ್ಕ ಪಾವತಿಸದೇ, ಏ.9ರಿಂದ ಏ.17ರ ಒಳಗೆ ಆಯಾ ಕಾಲೇಜುಗಳಲ್ಲಿ ಹೆಸರು ನೋಂದಾಯಿಸಿಕೊಂಡು ಪರೀಕ್ಷೆ ಬರೆಯಬಹುದು ಎಂದರು.

ಸರ್ಕಾರದ ಈ ನಿರ್ಧಾರ ಬಡ ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಅನುತ್ತೀರ್ಣತೆಯ ಕಾರಣ ಪದವಿ ಶಿಕ್ಷಣದಿಂದ ವಂಚಿತರಾಗುವ ಪ್ರಮಾಣವೂ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮರುಮೌಲ್ಯಮಾಪನಕ್ಕೆ ಅರ್ಜಿ: 17ಕ್ಕೆ ಕೊನೆ

ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಏ.17ರ ಒಳಗೆ ಅರ್ಜಿ ಸಲ್ಲಿಸಬಹುದು.

ಉತ್ತರ ಪತ್ರಿಕೆಗಳ ಛಾಯಾಪ್ರತಿ ಪಡೆಯಲು ಏ.13, ಛಾಯಾ ಪ್ರತಿ ಡೌನ್ಲೋಡ್ ಮಾಡಿಕೊಳ್ಳಲು ಏ.16 ಕೊನೆಯ ದಿನ. ಪ್ರತಿ ವಿಷಯದ ಛಾಯಾ ಪ್ರತಿಗೆ ₹530 ಹಾಗೂ ಮರುಮೌಲ್ಯಮಾಪನಕ್ಕೆ ₹1,670 ನಿಗದಿ ಮಾಡಲಾಗಿದೆ.

ಖಾಸಗಿ, ಸರ್ಕಾರಿ ಕಾಲೇಜುಗಳ ಫಲಿತಾಂಶ ವಿಶ್ಲೇಷಿಸಲಾಗುತ್ತದೆ. ಸರ್ಕಾರಿ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಈ ವಿಶ್ಲೇಷಣಾ ವರದಿಯನ್ನು ಬಳಸಿಕೊಳ್ಳಲಾಗುತ್ತದೆ.
-ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ

ಕಾಲೇಜಿನಲ್ಲಿ ನಿರಂತರವಾಗಿ ನಡೆಸುತ್ತಿದ್ದ ಅಣಕು ಪರೀಕ್ಷೆ ಆತ್ಮವಿಶ್ವಾಸ ಬೆಳೆಸಿತ್ತು. ಪರೀಕ್ಷಾ ಭಯವೇ ಇರಲಿಲ್ಲ. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಓದುವ ಆಸೆ ಇದೆ.
-ಅಮೂಲ್ಯ ಕಾಮತ್, ಎಕ್ಸ್ಪರ್ಟ್ ಕಾಲೇಜು, ಮಂಗಳೂರು

ಶಿಕ್ಷಕರಾದ ಅಪ್ಪ-ಅಮ್ಮ, ಕಾಲೇಜಿನ ಉಪನ್ಯಾಸಕರು ಓದಿಗೆ ಪ್ರೋತ್ಸಾಹ ನೀಡಿದರು. ಕೃತಕ ಬುದ್ಧಿಮತ್ತೆಯಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡುವ ಗುರಿ ಇಟ್ಟುಕೊಂಡಿದ್ದೇನೆ.
-ಆರ್.ದೀಕ್ಷಾ, ವಾಗ್ದೇವಿ ಕಾಲೇಜು, ತೀರ್ಥಹಳ್ಳಿ

ಕಠಿಣ ಪರಿಶ್ರಮದಿಂದ ಮೊದಲ ಸ್ಥಾನ ಸಾಧ್ಯವಾಗಿದೆ. ಅಂದಿನ ಅಭ್ಯಾಸವನ್ನು ಅಂದೇ ಮನನ ಮಾಡುವುದನ್ನು ರೂಢಿಸಿಕೊಂಡಿದ್ದೆ. ಸಿ.ಎ ಆಗಬೇಕು ಎನ್ನುವ ಗುರಿ ಇದೆ.
-ಎಸ್. ದೀಪಶ್ರೀ, ಕೆನರಾ ಕಾಲೇಜು, ಮಂಗಳೂರು

ತಾಯಿ ಕಾವೇರಿ ಮತ್ತು ಲಾರಿ ಚಾಲಕರಾದ ತಂದೆ ರಾಮನಾಯ್ಕ ನನ್ನನ್ನು ಕಷ್ಟಪಟ್ಟು ಓದಿಸಿದರು. ನನ್ನ ಶ್ರಮ ಫಲ ಕೊಟ್ಟಿದೆ. ಐಎಎಸ್ ಅಧಿಕಾರಿಯಾಗುವ ಗುರಿ ಇದೆ.
-ಎಲ್.ಆರ್. ಸಂಜನಾಬಾಯಿ, ಇಂದು ಕಾಲೇಜು, ಕೊಟ್ಟೂರು

123 ಕಾಲೇಜುಗಳಿಗೆ ಶೂನ್ಯ ಫಲಿತಾಂಶ

ರಾಜ್ಯದ 123 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ. 90 ಖಾಸಗಿ, 20 ಅನುದಾನಿತ, ಎಂಟು ಸರ್ಕಾರಿ, ಹಾಗೂ ಐದು ವಸತಿ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಯೂ ತೇರ್ಗಡೆಯಾಗಿಲ್ಲ. 134 ಕಾಲೇಜುಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ.

ಹಾಜರಾತಿ ಕೊರತೆ; ಎರಡನೇ ಪರೀಕ್ಷೆ

ದ್ವಿತೀಯ ಪಿಯುಸಿಯಲ್ಲಿ ಹಾಜರಾತಿ ಕೊರತೆಯ ಕಾರಣ ಮೊದಲ ಪರೀಕ್ಷೆಯಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳು ಪರೀಕ್ಷೆ–2 ಮತ್ತು ಪರೀಕ್ಷೆ–3 ಬರೆಯಲು ಮಂಡಳಿ ಅವಕಾಶ ನೀಡಿದೆ. ಅವರು ಖಾಸಗಿ ಅಭ್ಯರ್ಥಿಗಳಾಗಿ ಹೆಸರು ನೋಂದಣಿ ಮಾಡಿಕೊಳ್ಳಬೇಕು.

ನ್ಯೂನತೆಯ 123 ವಿದ್ಯಾರ್ಥಿಗಳು ತೇರ್ಗಡೆ

ಕಲಿಕಾ ನ್ಯೂನತೆ, ಮಂದಬುದ್ಧಿ, ದೃಷ್ಟಿ ದುರ್ಬಲತೆ, ನಿಧಾನಗತಿಯ ಕಲಿಕೆ ಮೊದಲಾದ ನ್ಯೂನತೆ ಇರುವ 191 ಮಕ್ಕಳು ಈ ಬಾರಿಯ ಪಿಯು ಪರೀಕ್ಷೆ ಬರೆದಿದ್ದರು. ಅವರಲ್ಲಿ 123 ಮಕ್ಕಳು (ಶೇ 64.40) ತೇರ್ಗಡೆಯಾಗಿದ್ದಾರೆ.

4,830 ಖಾಸಗಿ ವಿದ್ಯಾರ್ಥಿಗಳು ತೇರ್ಗಡೆ

ತರಗತಿಗಳಿಗೆ ಹಾಜರಾಗದೆ ವಯೋಮಿತಿಯ ಆಧಾರದಲ್ಲಿ ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆದಿದ್ದ 17,297 ವಿದ್ಯಾರ್ಥಿಗಳಲ್ಲಿ 4,830 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 33,576 ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 2,987 ಮಂದಿ ಉತ್ತೀರ್ಣರಾಗಿದ್ದಾರೆ.

8,293 ಮಂದಿಗೆ ‘ಕೃಪಾಂಕ’ ಬಲ

ಸರ್ಕಾರ 2017ರಲ್ಲಿ ರೂಪಿಸಿದ ಮೌಲ್ಯಮಾಪನ ನಿಯಮಗಳಂತೆ ವಿದ್ಯಾರ್ಥಿ ಮೂರು ವಿಷಯಗಳಲ್ಲಿ 35 ಅಂಕ ಪಡೆದಿದ್ದು, ಉಳಿದ ಮೂರು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೆ ಪ್ರತಿ ವಿಷಯದಲ್ಲೂ ಕನಿಷ್ಠ ಕೃಪಾಂಕ ನೀಡಿ ತೇರ್ಗಡೆ ಮಾಡಲಾಗುತ್ತದೆ. ಈ ವರ್ಷ 8,293 ವಿದ್ಯಾರ್ಥಿಗಳು ಈ ನಿಯಮದಡಿ ತೇರ್ಗಡೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.