ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈವರೆಗೆ ಶೇ 12ರಷ್ಟು ಮುಂಗಾರು ಮಳೆ ಕೊರತೆ: ಆಗಸ್ಟ್‌ನಲ್ಲಿರಲಿದೆ ಬಿಸಿಲ ವಾತಾವರಣ!

ಆಗಸ್ಟ್‌ನಲ್ಲಿ ಬೇಸಿಗೆಯ ಬಿಸಿಲ ವಾತಾವರಣ, ಮಲೆನಾಡಿನಲ್ಲೂ ಅಭಾವ
Published 6 ಆಗಸ್ಟ್ 2023, 0:12 IST
Last Updated 6 ಆಗಸ್ಟ್ 2023, 0:12 IST
ಅಕ್ಷರ ಗಾತ್ರ

ಆದಿತ್ಯ ಕೆ.ಎ.

ಬೆಂಗಳೂರು: ರಾಜ್ಯದಲ್ಲಿ ಜುಲೈ ತಿಂಗಳಲ್ಲಿ ಅಬ್ಬರಿಸಿದ್ದ ಮುಂಗಾರು ಮತ್ತೆ ಕೈಕೊಡುವ ಲಕ್ಷಣಗಳು ಕಾಣಿಸುತ್ತಿವೆ. ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಆಗಸ್ಟ್‌ ತಿಂಗಳಲ್ಲಿ ವಿಪರೀತ ಮಳೆ, ಚಳಿ ವಾತಾವರಣದ ಬದಲಿಗೆ ಸುಡು ಬಿಸಿಲಿದೆ.

ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಈವರೆಗೆ ಶೇ 12ರಷ್ಟು ಮಳೆ ಕೊರತೆಯಾಗಿದೆ. ಕಳೆದ ಏಳು ದಿನಗಳ ಅವಧಿಯಲ್ಲೇ ಶೇ 63ರಷ್ಟು ಮಳೆಯ ಅಭಾವ ಸೃಷ್ಟಿಯಾಗಿದ್ದು, ತಡವಾಗಿ ಬಿತ್ತನೆ ಕಾರ್ಯ ನಡೆಸಿದ ರೈತರು ಕಂಗಾಲಾಗಿದ್ದಾರೆ. ಇದೇ ವಾತಾವರಣ ಮುಂದುವರಿದರೆ ಬಿತ್ತನೆ ಬೀಜಗಳು ಮೊಳಕೆ ಒಡೆಯುವುದು ಕಷ್ಟ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ. 

ಜುಲೈ ಮಧ್ಯದಲ್ಲಿ ನಿರಂತರ ಮಳೆಯಿಂದ ಪ್ರಮುಖ ನದಿಗಳು ಉಕ್ಕೇರಿದ್ದವು. ಈಗ ನದಿಯಲ್ಲಿ ನೀರಿನಮಟ್ಟ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆಗಸ್ಟ್‌ ಮೊದಲ ವಾರದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳುತ್ತಿಲ್ಲ. ಕಳೆದ ಒಂದು ವಾರದಲ್ಲಿ ವಾಡಿಕೆ ಮಳೆ ಪ್ರಮಾಣವು 66 ಮಿ.ಮೀ ಆಗಿತ್ತು. ಆದರೆ, 22.3 ಮಿ.ಮೀನಷ್ಟು ಮಾತ್ರ ಮಳೆ ಸುರಿದಿದೆ. ಆಗಸ್ಟ್‌ನಲ್ಲಿ ಶೇ 63ರಷ್ಟು ಮಳೆ ಕೊರತೆ ಎದುರಾಗಿದ್ದು, ರೈತರ ಆತಂಕವನ್ನು ಹೆಚ್ಚಿಸಿದೆ.

ಮುಂಗಾರು ಅನಿಶ್ಚಿತತೆ:

ಈ ವರ್ಷ ಆರಂಭದಿಂದಲೂ ನೈರುತ್ಯ ಮುಂಗಾರು ಅನಿಶ್ಚಿತವಾಗಿದೆ. ಜೂನ್‌ 1ರಿಂದ ಆಗಸ್ಟ್‌ 5ರ ತನಕ ವಾಡಿಕೆ ಮಳೆ ಪ್ರಮಾಣವು 514 ಮಿ.ಮೀ ಆಗಿತ್ತು. ಬದಲಿಗೆ 452 ಮಿ.ಮೀನಷ್ಟು ಸುರಿದಿದ್ದು ಮುಂಗಾರು ಅಭಾವ ಸೃಷ್ಟಿಸಿದೆ. ಪ್ರಮುಖ ನದಿಗಳ ಉಗಮ ಸ್ಥಳವಾದ ಮಲೆನಾಡು ಜಿಲ್ಲೆಗಳಲ್ಲೂ ಒಂದು ವಾರದಿಂದ ಬಿಸಿಲಿನ ತಾಪ ಕಾಣಿಸಿಕೊಂಡಿದೆ. ವಾಡಿಕೆಯಷ್ಟು ಮಳೆ ಸುರಿದಿದ್ದರೆ, ಅಂತರ್ಜಲ ವೃದ್ಧಿಯಾಗಬೇಕಿತ್ತು. ಜತೆಗೆ, ನದಿಗಳಲ್ಲಿ ಸಮೃದ್ಧವಾಗಿ ನೀರು ಹರಿಯಬೇಕಿತ್ತು. ಜಲಾಶಯಗಳ ಒಳಹರಿವೂ ದಿಢೀರ್‌ ತಗ್ಗಿದೆ.

ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗದಲ್ಲಿ ಶೇ 25, ಹಾಸನದಲ್ಲಿ ಶೇ 19, ಚಿಕ್ಕಮಗಳೂರಿನಲ್ಲಿ ಶೇ 31, ಕೊಡಗಿನಲ್ಲಿ ಶೇ 38ರಷ್ಟು ಮಳೆ ಕೊರತೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಉತ್ತರ ಒಳನಾಡಿನ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ ಸೇರಿದಂತೆ 13 ಜಿಲ್ಲೆಗಳಲ್ಲಿ ಜುಲೈನಲ್ಲಿ ವಾಡಿಕೆಗಿಂತ ಶೇ 5ರಷ್ಟು ಅಧಿಕ ಮಳೆಯಾಗಿತ್ತು. ಈಗ ಜಿಲ್ಲೆಯಲ್ಲೂ ಮಳೆ ಕೈಕೊಟ್ಟಿದೆ’ ಎಂದು  ಅಧಿಕಾರಿಗಳು ಹೇಳಿದರು. 

‘ಇನ್ನೆರಡು ತಿಂಗಳು ನೈರುತ್ಯ ಮುಂಗಾರು ಸಾಮಾನ್ಯಕ್ಕಿಂತ ಕಡಿಮೆ ಆಗಲಿದೆ’ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ರಾಜ್ಯದ ಪ್ರಮುಖ 14 ಜಲಾಶಯಗಳ ನೀರಿನ ಸಂಗ್ರಹ ಸಾಮರ್ಥ್ಯವು 895.45 ಟಿಎಂಸಿ ಅಡಿಯಾಗಿದೆ. ಪ್ರಸ್ತುತ 622.08 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಿದೆ. ಕಳೆದ ವರ್ಷ ಈ ಅವಧಿಯಲ್ಲಿ 693.73 ಟಿಎಂಸಿ ಅಡಿಗಳಷ್ಟು ನೀರಿನ ಸಂಗ್ರಹವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT