ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಅಗ್ರಸ್ಥಾನದತ್ತ ಕರ್ನಾಟಕ: ಸಿಎಂ ಬೊಮ್ಮಾಯಿ

Last Updated 3 ಡಿಸೆಂಬರ್ 2022, 15:53 IST
ಅಕ್ಷರ ಗಾತ್ರ

ಬೆಂಗಳೂರು: ಗಣಿಗಾರಿಕೆ ಕ್ಷೇತ್ರದಲ್ಲಿ ರಾಜ್ಯಕ್ಕೆ ಹೆಚ್ಚಿನ ಹೂಡಿಕೆ ಹರಿದು ಬರುತ್ತಿದ್ದು, ಮುಂದಿನ ನಾಲ್ಕೈದು ವರ್ಷಗಳಲ್ಲಿ ಕರ್ನಾಟಕವು ವಿಶ್ವದಲ್ಲಿ ಅತಿಹೆಚ್ಚು ಕಬ್ಬಿಣದ ಅದಿರು ಉತ್ಪಾದಿಸುವ ರಾಜ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯವು ನಗರದಲ್ಲಿ ಶನಿವಾರ ಹಮ್ಮಿಕೊಂಡಿರುವ ಕಲ್ಲಿದ್ದಲು ಗಣಿ ಹರಾಜು ಹಾಗೂ ಗಣಿಗಾರಿಕೆ ವಲಯದಲ್ಲಿನ ಅವಕಾಶಗಳಿಗೆ ಸಂಬಂಧಿಸಿದ ಹೂಡಿಕೆದಾರರ ಸಮಾವೇಶದಲ್ಲಿ ಅವರು ಮಾತನಾಡಿದರು.

ಕರ್ನಾಟಕವು ಅತ್ಯುತ್ತಮವಾದ ಗಣಿಗಾರಿಕೆ ನೀತಿಯನ್ನು ಜಾರಿಗೊಳಿಸಿದೆ. ರಾಜ್ಯ ಸರ್ಕಾರವು ಉದ್ಯಮಿಗಳಿಗೆ ಸಂಪೂರ್ಣ ಸಹಕಾರ ನೀಡಲಿದೆ. ಗಣಿಗಾರಿಕೆಗೆ ಸಂಬಂಧಿಸಿದ ಹಲವು ನಿಯಮಗಳನ್ನು ಸರಳೀಕರಣ ಮಾಡಲಾಗಿದೆ. ಉದ್ಯಮಿಗಳು ಕರ್ನಾಟಕದಲ್ಲಿ ಗಣಿಗಾರಿಕೆ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಬೇಕು ಎಂದು ಮನವಿ ಮಾಡಿದರು.

ಒಡಿಶಾದಲ್ಲಿ ಗಣಿಗಾರಿಕೆಯೇ ಪ್ರಮುಖ ಉದ್ಯಮವಾಗಿದೆ. ಅಲ್ಲಿನ ಸ್ಥಿತಿಯನ್ನು ಇತರ ರಾಜ್ಯಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಗಣಿಗಾರಿಕೆಗೆ ಸಂಬಂಧಿಸಿದಂತೆ ಒಂದು ರಾಜ್ಯದ ನೀತಿಯನ್ನೇ ಎಲ್ಲ ರಾಜ್ಯಗಳಲ್ಲೂ ಜಾರಿಗೊಳಿಸುವುದು ಸೂಕ್ತವಲ್ಲ. ಆಯಾ ರಾಜ್ಯಗಳಲ್ಲಿರುವ ಗುಣಮಟ್ಟದ ಗಣಿಗಳಿಂದ ಮಾತ್ರವೇ ಅದಿರು ತೆಗೆಯಬೇಕು. ಕರ್ನಾಟಕ ಕೂಡ ಅದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ ಎಂದರು.

ಎಚ್ಚರಿಕೆ ಅಗತ್ಯ: ಗಣಿಗಾರಿಕೆಯು ಹೆಚ್ಚಿನ ಉದ್ಯೋಗ ಸೃಷ್ಟಿಗೆ ಅವಕಾಶ ಇರುವ ಕ್ಷೇತ್ರ. ಸರ್ಕಾರದ ವರಮಾನವೂ ಹೆಚ್ಚಲಿದೆ. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಮಾನಗಳನ್ನು ಕೈಗೊಳ್ಳುವ ಮುನ್ನ ಎಚ್ಚರಿಕೆ ಅಗತ್ಯ ಎಂದು ಬೊಮ್ಮಾಯಿ ಹೇಳಿದರು.

ಖನಿಜ ಲಭ್ಯತೆಯ ಶೋಧ ಮತ್ತು ಅವುಗಳನ್ನು ಹೊರ ತೆಗೆಯುವ ಕೆಲಸದಲ್ಲಿ ಎಚ್ಚರಿಕೆ ಅಗತ್ಯ. ಅವಕಾಶ ಸಿಕ್ಕಿದಾಗ ಶೋಷಣೆ ಮಾಡಬಾರದು. ಸುಸ್ಥಿರ ಗಣಿಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು. ರಾಜ್ಯದಲ್ಲಿ ಗಣಿ ಕ್ಷೇತ್ರದಲ್ಲಿ 5,000 ಹೊಸ ಉದ್ಯೋಗಗಳ ಸೃಷ್ಟಿಗೆ ಅವಕಾಶವಿದೆ ಎಂದರು.

ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವಾಲಯ ಅತ್ಯುತ್ತಮ ಕೆಲಸ ಮಾಡುತ್ತಿದೆ. ಮೂರರಿಂದ ನಾಲ್ಕು ವರ್ಷಗಳಲ್ಲಿ ದೇಶವು 500 ದಶಲಕ್ಷ ಟನ್‌ ಕಲ್ಲಿದ್ದಲು ಉತ್ಪಾದಿಸಲಿದೆ. ಕಲ್ಲಿದ್ದಲು ಉತ್ಪಾದನೆಯಲ್ಲಿ ದೇಶವು ದಾಖಲೆ ನಿರ್ಮಿಸಲಿದೆ ಎಂದು ಹೇಳಿದರು.

ಪ್ರಲ್ಹಾದ ಜೋಶಿ, ರಾಜ್ಯದ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಇಲಾಖೆ ಕಾರ್ಯದರ್ಶಿ ಅಮೃತ್ ಲಾಲ್ ಮೀನಾ, ಸಂಜಯ್ ಉಪಸ್ಥಿತರಿದ್ದರು.

‘ಇನ್ನೂ 25 ಗಣಿ ಬ್ಲಾಕ್ ಹರಾಜು’

ರಾಜ್ಯದಲ್ಲಿ ಈಗ 16 ಕಬ್ಬಿಣದ ಅದಿರಿನ ಗಣಿ ಬ್ಲಾಕ್‌ಗಳ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ 25 ಬ್ಲಾಕ್‌ಗಳ ಹರಾಜಿಗೆ ಸಿದ್ಧತೆ ನಡೆದಿದೆ. ಹೂಡಿಕೆದಾರರು ರಾಜ್ಯದಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಇಲ್ಲಿ ಅತ್ಯುತ್ತಮವಾದ ಗಣಿ ನೀತಿ ಜಾರಿಯಲ್ಲಿದ್ದು, ಉದ್ಯಮಿಗಳಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಬೊಮ್ಮಾಯಿ ಹೇಳಿದರು.

ಕೆಜಿಎಫ್‌ನಲ್ಲಿ ಚಿನ್ನದ ಗಣಿ ಪುನರಾರಂಭಕ್ಕೆ ಒಂದು ಕಂಪನಿ ಆಸಕ್ತಿ ವ್ಯಕ್ತಪಡಿಸಿದೆ. ಈ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಅದು ಕಾರ್ಯ ಗತವಾದರೆ 5,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT