ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಇಎಗೆ ಪಾಸ್‌ಪೋರ್ಟ್‌ ಕಚೇರಿ ಮಾದರಿ ಸ್ಪರ್ಶ

Published 31 ಆಗಸ್ಟ್ 2023, 15:59 IST
Last Updated 31 ಆಗಸ್ಟ್ 2023, 15:59 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿಗಳ ಅನಗತ್ಯ ಪರದಾಟ ತಪ್ಪಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಪಾಸ್‌ಪೋರ್ಟ್‌ ಕಚೇರಿ ಮಾದರಿಯ ಕಾರ್ಯನಿರ್ವಹಣಾ ವ್ಯವಸ್ಥೆ ಅಳವಡಿಸಲಾಗುತ್ತಿದೆ.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಹಾಗೂ ಇತರ ಹಿರಿಯ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೆಇಎ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ದಾಖಲೆಗಳ ಪರಿಶೀಲನೆ, ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕೌನ್ಸೆಲಿಂಗ್‌, ಮಾಹಿತಿ ವಿನಿಮಯ ಮತ್ತಿತರ ಕಾರ್ಯಗಳಿಗಾಗಿ ಕೆಇಎ ಪ್ರತಿಯೊಬ್ಬರಿಗೂ ಪಾಸ್‌ಪೋರ್ಟ್‌ ಕಚೇರಿ ಮಾದರಿಯಲ್ಲಿ ದಿನಾಂಕ, ಸಮಯ ನೀಡಲಾಗುತ್ತದೆ. ನಿಗದಿಯಾದ ದಿನ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ, ಡಿಜಿಟಲ್‌ ಬೋರ್ಡ್‌ ಮೂಲಕ ಸೂಕ್ತ ಮಾಹಿತಿ  ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. 

‘ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆನ್‌ಲೈನ್‌ ಮೂಲಕ ಮುಂಗಡವಾಗಿ ದಿನಾಂಕ, ಸಮಯ ನಿಗದಿ ಮಾಡುವ ವ್ಯವಸ್ಥೆಯನ್ನು  ಪರಿಚಯಿಸುತ್ತಿದ್ದೇವೆ. ಯಾವುದೇ ಅನಾನುಕೂಲಕ್ಕೆ ಅವಕಾಶವಿಲ್ಲದಂತೆ ಅಧಿಕಾರಿಗಳ ಭೇಟಿಗೆ ಅವಕಾಶ ಕಲ್ಪಿಸಲಾಗುತ್ತದೆ’ ಎಂದು ಸಚಿವ ಸುಧಾಕರ್‌ ಮಾಹಿತಿ ನೀಡಿದರು.

ಈಗಿರುವ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ಬಂದು ಅಧಿಕಾರಿಗಳನ್ನು ಭೇಟಿ ಮಾಡಬೇಕಿದೆ. ದೂರದ ಊರಿನಿಂದ ಬಂದರೂ ಅಧಿಕಾರಿಗಳನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಪಾಸ್‌ಪೋರ್ಟ್‌ ಕಚೇರಿ ಮಾದರಿ ವ್ಯವಸ್ಥೆ ಅಳವಡಿಕೆಯಿಂದ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎನ್ನುತ್ತಾರೆ ಕೆಇಎ ಅಧಿಕಾರಿಗಳು.

ಮುಂದಿನ ಶೈಕ್ಷಣಿಕ ವರ್ಷದ ಒಳಗೆ ವ್ಯವಸ್ಥೆ ಜಾರಿಯಾಗಲಿದೆ. ವಿದ್ಯಾರ್ಥಿಗಳು, ಪೋಷಕರು ಬೆಂಗಳೂರಿನ ಕೇಂದ್ರ ಕಚೇರಿಗೆ ತೆರಳುವ ಮೊದಲು ಆನ್‌ಲೈನ್‌ನಲ್ಲೇ ಬೇಡಿಕೆ, ದೂರು ಸಲ್ಲಿಸಿ, ಸಮಯ ತೆಗೆದುಕೊಳ್ಳಬಹುದು. ಇದರಿಂದ ಕೆಇಎ ಆವರಣದ ಜನಸಂದಣಿ ಸಮಸ್ಯೆಗೂ ಪರಿಹಾರ ದೊರೆಯುತ್ತದೆ.

‘ಕೆಇಎ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸೂಕ್ತ ಕಾಯುವ ಸ್ಥಳದ ಕೊರತೆ ಇದೆ. ಅದಕ್ಕಾಗಿ ₹ 38 ಕೋಟಿ ವೆಚ್ಚದಲ್ಲಿ ಅಗತ್ಯ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಆವರಣದಲ್ಲಿ ಭದ್ರತೆ ಒದಗಿಸಲು, ಸರ್ವರ್ ಸಮಸ್ಯೆಗಳ ನಿವಾರಣೆಗೆ ಹೊಸ ಸಾಫ್ಟ್‌ವೇರ್‌ ಅಳವಡಿಸಲಾಗುವುದು’ ಎಂದು ಸುಧಾಕರ್ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT