ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

KPSC ಪ್ರಶ್ನೆ ಪತ್ರಿಕೆ ಎಡವಟ್ಟು|‘ಗುಟೇಷನ್‌ ಟ್ರಾನ್ಸ್‌ ಫಿರೇಷನ್‌ ಪುಲ್ಗೆ ಕಾರಣ’

Published 28 ಆಗಸ್ಟ್ 2024, 1:07 IST
Last Updated 28 ಆಗಸ್ಟ್ 2024, 1:09 IST
ಅಕ್ಷರ ಗಾತ್ರ

ಬೆಂಗಳೂರು: ‘ನೀರಿನ ಸಾಗಣೆಯ ಒಟ್ಟಾರೆ ಪ್ರಕ್ರಿಯೆಯಲ್ಲಿ ರೂಟ್‌ ಒತ್ತಡವು ಮಧ್ಯಮ ತಳ್ಳುವಿಕೆಯನ್ನು ಒದಗಿಸುತ್ತದೆ’, ‘ಹೆಚ್ಚಿನ ಸಸ್ಯಗಳು ತಮ್ಮ ನೀರಿನ ಅಗತ್ಯವನ್ನು ಟ್ರಾನ್ಸ್‌ ಫಿರೇಷನ್‌ ಪುಲ್‌ ಮೂಲಕ ಪೂರೈಸುತ್ತದೆ’, ‘ಕ್ಸೈಲೆಮ್ ವೆಸಲ್ಸ್‌ನಲ್ಲಿ ನೀರಿನ ಅಣುವಿನ ನಿರಂತರ ಸರಪಳಿಗಳನ್ನು ಮರು ಸ್ಥಾಪಿಸುವುದು ಬೇರಿನ ಒತ್ತಡದ ದೊಡ್ಡ ಕೆಲಸವಾಗಿರುತ್ತದೆ. ಇದು ಆಗಾಗ್ಗೆ ಟ್ರಾನ್ಸಿಫಿರೇಷನ್‌ ಮೂಲಕ ರಚಿಸಲಾದ ಅಗಾಧವಾದ ಒತ್ತಡದಲ್ಲಿ ಒಡೆಯುತ್ತದೆ. ಗುಟೇಶನ್‌ ಟ್ರಾನ್ಸ್‌ ಫಿರೇಷನ್‌ ಪುಲ್ಗೆ ಕಾರಣವಾಗಿದೆ’...

– ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳಿಗೆ ನೇಮಕಾತಿಗೆ ಮಂಗಳವಾರ ನಡೆಸಿದ ಪೂರ್ವಭಾವಿ ಪರೀಕ್ಷೆಯ ಎರಡನೇ ಪತ್ರಿಕೆಯಲ್ಲಿ ಕನ್ನಡದಲ್ಲಿ ಮುದ್ರಿತವಾಗಿದ್ದ ಕೆಲವು ಪ್ರಶ್ನೆಗಳ ಮಾದರಿಗಳಿವು. ಪ್ರಶ್ನೆಪತ್ರಿಕೆಯುದ್ದಕ್ಕೂ ‘ಅರ್ಥ’ವಾಗದ ಇಂತಹ ವಾಕ್ಯಗಳೇ ತುಂಬಿವೆ. ಈ ಪ್ರಶ್ನೆಗಳು ಏನೆಂದೂ ಗೊತ್ತಾಗದೇ ಪರೀಕ್ಷಾರ್ಥಿಗಳು ಕಕ್ಕಾಬಿಕ್ಕಿಯಾದರು.

ಇಂಗ್ಲಿಷ್‌ ಪ್ರಶ್ನೆಗಳನ್ನು ಎಐ ತಂತ್ರಜ್ಞಾನದ ನೆರವಿನಿಂದ ಭಾಷಾಂತರಿಸಿದಂತೆ ಇದೆ. ಕನ್ನಡ ಮಾಧ್ಯಮದ ಅನೇಕ ಅಭ್ಯರ್ಥಿಗಳು ಪ್ರಶ್ನೆಗಳನ್ನು ಓದಿ, ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಕೆಲವರು, ಇಂಗ್ಲಿಷ್‌ನಲ್ಲಿದ್ದ ಪ್ರಶ್ನೆಗಳನ್ನು ಓದಿ ಉತ್ತರವನ್ನು ಬರೆದಿದ್ದೂ ನಡೆದಿದೆ. ಅರ್ಥವಾಗದೇ ಇದ್ದ ಕನ್ನಡದ ಬಳಕೆಯ ವಿಧಾನದಿಂದ ಸಿಟ್ಟಿಗೆದ್ದ ಗ್ರಾಮೀಣ ಭಾಗದ ಅನೇಕ ಅಭ್ಯರ್ಥಿಗಳು ತಮಗೆ ಅನ್ಯಾಯವಾಗಿದೆ ಎಂದು ಅಲವತ್ತುಕೊಂಡರು. 

ಈ ಹಿಂದೆ ನಡೆದ ಪರೀಕ್ಷೆಗಳಲ್ಲಿ ಪಠ್ಯಕ್ರಮದಲ್ಲಿರುವ ಮಾದರಿಯಲ್ಲಿಯೇ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆದರೆ, ಈ ಬಾರಿ ಯುಪಿಎಸ್‌ಸಿ ಮಾದರಿಯಲ್ಲಿ ಪ್ರಶ್ನೆಗಳಿದ್ದವು. ಪ್ರಶ್ನೆಪತ್ರಿಕೆಯ ಸ್ವರೂಪ ಕೂಡಾ ಗೊಂದಲ ಮೂಡಿಸಿತು ಎಂದು ಅಭ್ಯರ್ಥಿಗಳು ಹೇಳಿದರು.

‘ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಾಮುಖ್ಯತೆದ ವಿಷಯಗಳನ್ನು ಒಳಗೊಂಡಂತೆ ಸಾಮಾನ್ಯ ಅಧ್ಯಯನ ಮತ್ತು ಮಾನವಿಕ ಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ಪತ್ರಿಕೆ– 1 ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ರವರೆಗೆ ನಡೆಯಿತು. ಈ ಪತ್ರಿಕೆ ಕ್ಲಿಷ್ಟ–ಕಷ್ಟಕರವಾಗಿತ್ತು. ಪ್ರಶ್ನೆಗಳು ದೀರ್ಘವಾಗಿದ್ದುವು. ಅಲ್ಲದೆ, ಸಂಕೀರ್ಣ, ಗೊಂದಲ ಮೂಡಿಸುವಂಥ ಪ್ರಶ್ನೆಗಳನ್ನು ಕೇಳಿದ್ದರಿಂದ ಕೆಲಹೊತ್ತು ತಬ್ಬಿಬ್ಬಾಗಬೇಕಾಯಿತು. ಕೆಲವು ಪ್ರಶ್ನೆಗಳಲ್ಲಿ ಇಡೀ ಪ್ಯಾರಾ ಒಂದು ವಾಕ್ಯವಾಗಿತ್ತು. ಹೀಗಾಗಿ ಪ್ರಶ್ನೆಗಳನ್ನು ಪೂರ್ತಿಯಾಗಿ ಓದಿ ಅರ್ಥ ಮಾಡಿಕೊಳ್ಳುವುದೇ ದೊಡ್ಡ ಸಾಹಸವಾಯಿತು’ ಎಂದು ಕೆಲವು ಅಭ್ಯರ್ಥಿಗಳು ದೂರಿದರು.

‘ಸಂಕುಚಿತಗೊಳಿಸಲಾಗದ ದ್ರವದ ಯಾವುದೇ ಸ್ಥಿರ ಅರಿವಿನಲ್ಲಿ, ದ್ರವದ ಪರಿಮಾಣದ ಹರಿವಿನ ಪ್ರಮಾಣವು ಸ್ಥಿರವಾಗಿರುತ್ತದೆ. ಗಾರ್ಡನ್‌ ಮೆದುಗೊಳವೆ ಪೈಪ್‌ನಿಂದ ಹೆಚ್ಚಿನ ವೇಗದಲ್ಲಿ ಹರಿಯುವ ನೀರಿನ ಹರಿವು ಲಂಬವಾಗಿ ಮೇಲಕ್ಕೆ ಹಿಡಿದಾಗ ಕಾರಂಜಿಯಂತೆ ಹರಡುತ್ತದೆ’. ‘ಇದು ವಿನಮ್ರ ತೀರ್ಮಾನ, ಆದರೆ ನಾನು ಅದನ್ನು ನಂಬದಿರಲು ಸಾಧ್ಯವಿಲ್ಲ. ಅಸಂತುಷ್ಟ ವ್ಯಾಪಾರಸ್ಥರು ತತ್ವಶಾಸ್ತ್ರದ ಯಾವುದೇ ಕಲ್ಪಿತ ಬದಲಾವಣೆಗಳಿಗಿಂತ ಪ್ರತಿದಿನ ಆರು ಮೈಲುಗಳಷ್ಟು ದೂರ ನಡೆಯುವುದರ ಮೂಲಕ ತಮ್ಮ ಸಂತೋಷಗಳನ್ನು ಹೆಚ್ಚಿಸಿಕೊಳ್ಳಬಹುದೇ’. ‘ಸಂತೋಷದ ಎಲ್ಲಾ ಭೌತಿಕ ಪರಿಸ್ಥಿತಿಗಳು, ಅಂದರೆ ಆರೋಗ್ಯ ಮತ್ತು ಸಾಕಷ್ಟು ಆದಾಯವನ್ನು ಹೊಂದಿರುವ ಅನೇಕ ಜನರಿದ್ದಾರೆ ಮತ್ತು ಅದೇನೇ ಇದ್ದರೂ, ಅವರು ತೀವ್ರವಾಗಿ ಅತೃಪ್ತರಾಗಿದ್ದಾರೆ’– ಪ್ರಶ್ನೆಪತ್ರಿಕೆಯಲ್ಲಿದ್ದ ಇಂತಹ ಕೆಲವು ವಾಕ್ಯಗಳನ್ನು ಕಂಡು ಪರೀಕ್ಷಾರ್ಥಿಗಳು ತಲೆ ಕೆರೆದುಕೊಂಡರು! 

ರಾಜ್ಯದ ಪ್ರಾಮುಖ್ಯತೆಗೆ ಸಂಬಂಧಿಸಿದಂತೆ ಸಾಮಾನ್ಯ ಅಧ್ಯಯನ, ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ ವಿಷಯ ಮತ್ತು ಸಾಮಾನ್ಯ ಮನೋ ಸಾಮರ್ಥ್ಯ ವಿಷಯದ ‌ಪತ್ರಿಕೆ –2 ಪರೀಕ್ಷೆಯು ಮಧ್ಯಾಹ್ನ 2ರಿಂದ 4 ರವರೆಗೆ ನಡೆಯಿತು. ಈ ಪತ್ರಿಕೆಯಲ್ಲಿ ಸುಲಭದಲ್ಲಿ ಉತ್ತರಿಸುವಂತಹ ಪ್ರಶ್ನೆಗಳು ಇದ್ದವಾದರೂ, ಕನ್ನಡ ಮಾಧ್ಯಮದ ಅಭ್ಯರ್ಥಿಗಳು ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳಲು ಕನ್ನಡದಲ್ಲಿ ಮುದ್ರಿತವಾಗಿದ್ದ ಪ್ರಶ್ನೆಗಳ ಬದಲು ‘ಇಂಗ್ಲಿಷ್‌’ ಭಾಷೆಯಲ್ಲಿದ್ದ ಪ್ರಶ್ನೆಗಳನ್ನು ನೋಡಬೇಕಾಯಿತು.

‘ಇಂಗ್ಲಿಷ್‌ನಲ್ಲಿದ್ದ ಪ್ರಶ್ನೆಪತ್ರಿಕೆಯನ್ನು ಗೂಗಲ್‌ ಮೂಲಕ ಕನ್ನಡಕ್ಕೆ ಭಾಷಾಂತರಿಸಿ ಯಥಾವತ್‌ ಬಳಸಲಾಗಿದೆ. ಬಹುತೇಕ ಇಂಗ್ಲಿಷ್‌ ಪದಗಳು ಕನ್ನಡಕ್ಕೆ ಸಂಪೂರ್ಣವಾಗಿ ತರ್ಜುಮೆ ಆಗಿಲ್ಲ. ಭಾಷಾಂತರಿಸಿದ ಬಳಿಕ ಪ್ರಶ್ನೆಪತ್ರಿಕೆಯನ್ನು ಯಾರೂ ಪರಿಶೀಲನೆ ಮಾಡಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ಅಭ್ಯರ್ಥಿಯೊಬ್ಬರು ದೂರಿದರು.

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, 214 ಸರ್ಕಾರಿ, 189 ಅನುದಾನಿತ ಹಾಗೂ 161 ಖಾಸಗಿ ಶಾಲಾ– ಕಾಲೇಜುಗಳು ಸೇರಿ ಒಟ್ಟು 564 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

ಪರೀಕ್ಷಾ ನಿಯಂತ್ರಕರ ಟ್ವೀಟ್‌; ಡಿಲೀಟ್‌

‘ಪ್ರಶ್ನೆಪತ್ರಿಕೆ ಅತ್ಯಂತ ಕ್ಲಿಷ್ಟಕರವಾಗಿತ್ತು’ ಎಂದು ಕನ್ನಡ ತರ್ಜುಮೆಯ ಭಾಗದ ಸಹಿತ ಮತ್ತು ಮೀಮ್‌ಗಳನ್ನೂ ಸೇರಿಸಿ ಕೆಲವು ಅಭ್ಯರ್ಥಿಗಳು ಟ್ವೀಟ್‌ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ
ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ಗ್ಯಾನೇಂದ್ರ ಗಂಗ್ವಾರ, ‘ಅಭ್ಯರ್ಥಿಗಳ ಈ ಪ್ರತಿಕ್ರಿಯೆಗಳು ಮತ್ತು ಈ ರೀತಿಯ ಮೀಮ್‌ಗಳು ವೈಯಕ್ತಿಕವಾಗಿ ನನಗೆ ಇಷ್ಟ. ಕಷ್ಟಪಟ್ಟು ಓದಿದ ಮತ್ತು ಬುದ್ಧಿವಂತ ಅಭ್ಯರ್ಥಿಗಳು ಈ ಪ್ರಶ್ನೆಪತ್ರಿಕೆಯಿಂದ ಸಂತಸಪಟ್ಟಿರಬಹುದು’ ಎಂದು ಟ್ವೀಟ್‌ ಮಾಡಿ, ಕೆಲವೇ ಕ್ಷಣಗಳಲ್ಲಿ ಅದನ್ನು ಡಿಲೀಟ್‌ ಮಾಡಿದ್ದಾರೆ. 

384

ಒಟ್ಟು ಹುದ್ದೆಗಳು

2,10,916

ಒಟ್ಟು ಅಭ್ಯರ್ಥಿಗಳು 

1,31,885 (ಶೇ 62.52)

ಪರೀಕ್ಷೆಗೆ ಹಾಜರು

79,031

ಗೈರಾದವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT