ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಖ್ಯಿಕ ನಿರ್ದೇಶನಾಲಯ: ಅಕ್ರಮ ಬಡ್ತಿ ಸಕ್ರಮಕ್ಕೆ ಪ್ರಯತ್ನ

ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿದ್ದವರ ಒತ್ತಡ
Last Updated 8 ಜನವರಿ 2023, 19:46 IST
ಅಕ್ಷರ ಗಾತ್ರ

ಬೆಂಗಳೂರು: ವೃಂದ ಮತ್ತು ನೇಮಕಾತಿ ನಿಯಮದ ಪ್ರಕಾರ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಯಿಂದ ಸಹಾಯಕ ನಿರ್ದೇಶಕ ಹುದ್ದೆಗೆ ಬಡ್ತಿ ಪಡೆಯಲು ಪದವಿ ಕಡ್ಡಾಯ. ಆದರೆ, ಆ ನಿಯಮವನ್ನು ಸಡಿಲಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

‘ನಕಲಿ ಪದವಿ ಪ್ರಮಾಣಪತ್ರ ನೀಡಿ ಈಗಾಗಲೇ ಸಹಾಯಕ ನಿರ್ದೇಶಕ ಹುದ್ದೆಗೆ ಬಡ್ತಿ ಪಡೆದವರಿಗೆ ನೆರವಾಗಲು ಈ ಮಾರ್ಗೋಪಾಯ ಅನುಸರಿಸಲಾಗುತ್ತಿದೆ’ ಎಂದು ಕೆಪಿಎಸ್‌ಸಿ ಮೂಲಕ ನೇಮಕವಾಗಿರುವ ಇಲಾಖೆ ಸಿಬ್ಬಂದಿ ದೂರಿದ್ದಾರೆ.

‘ಸಹಾಯಕ ಸಾಂಖ್ಯಿಕ ಅಧಿಕಾರಿಗೆ ನಿಗದಿಪಡಿಸಿರುವ ಪದವಿ ಅರ್ಹತೆಯನ್ನು ತೆಗೆದು, ಪದವಿ ಇಲ್ಲದ ಅಧಿಕಾರಿಗಳಿಗೆ ಸಹಾಯಕ ನಿರ್ದೇಶಕ ಹುದ್ದೆಗೆ ಮುಂಬಡ್ತಿ ನೀಡಲು ವಿನಾಯಿತಿ ನೀಡುವಂತೆ ವೃಂದ ಹಾಗೂ ನೇಮಕಾತಿ ನಿಯಮಾವಳಿಗೆ ಬದಲಾವಣೆ ತರಲು ಪ್ರಯತ್ನಗಳು ನಡೆಯುತ್ತಿವೆ. ಸಚಿವ ಸಂಪುಟ ಸಭೆಗೆ ಟಿಪ್ಪಣಿ ಸಿದ್ಧಪಡಿಸಲಾಗಿದೆ’ ಎಂದು ‘ಪ್ರಜಾವಾಣಿ’ಗೆ ಮೂಲಗಳು ತಿಳಿಸಿವೆ.

‘ಕಾರಣವಿಲ್ಲದೆ ಕೇವಲ ಬಡ್ತಿ ಉದ್ದೇಶಕ್ಕೆ ನಿಯಮ ಸಡಿಲಿಕೆ ಮಾಡುವುದು ಆಡಳಿತದ ಹಿತದೃಷ್ಟಿಯಿಂದ ಸರಿಯಲ್ಲ. ಅರ್ಹ ಹಾಗೂ ವಿದ್ಯಾರ್ಹತೆಯುಳ್ಳ ಸಿಬ್ಬಂದಿಗೆ ಬಡ್ತಿಯ ಅವಕಾಶಕ್ಕೆ ಧಕ್ಕೆಯಾಗಲಿದೆ. ಈ ರೀತಿಯ ತಿದ್ದುಪಡಿಯಿಂದ ನೌಕರರ ಹಕ್ಕುಗಳಿಗೆ ಚ್ಯುತಿಯಾಗಲಿದೆ. ಇಂತಹ ತಿದ್ದುಪಡಿ ಕೂಡಾ ಪ್ರಶ್ನಾರ್ಹ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಈ ಹಿಂದೆಯೇ ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಆದರೆ, ಅದೇ ಪ್ರಸ್ತಾವವನ್ನೇ ಸಚಿವ ಸಂಪುಟದಲ್ಲಿ ಮತ್ತೆ ಮಂಡಿಸಿ ಒಪ್ಪಿಗೆ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

‘ಸಹಾಯಕ ನಿರ್ದೇಶಕ ಹುದ್ದೆಗೆ ಬಡ್ತಿ ಪಡೆಯಲು ಪದವಿಯಲ್ಲಿ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಗಣಿತ, ಕಂಪ್ಯೂಟರ್‌ ಸೈನ್ಸ್‌ ಇವುಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಕಡ್ಡಾಯವಾಗಿ ಕಲಿತಿರಬೇಕು ಎಂಬ ನಿಯಮವಿದೆ. ಈ ವಿಷಯಗಳಲ್ಲಿ ಪದವಿ ಕೈಬಿಡುವ ವಿಷಯವನ್ನು ಸಂಪುಟದ ಟಿಪ್ಪಣಿಯಲ್ಲಿ ಸೇರಿಸಲಾಗಿದೆ. ಇಲಾಖೆಯ ಸಚಿವರ ಲಾಗಿನ್‌ಗೂ ಇದು ಅಪ್‌ಲೋಡ್‌ ಆಗಿದೆ. ಅವರು ಅಲ್ಲೇ ಒಪ್ಪಿಗೆ ಸೂಚಿಸಬಹುದು. ಇಲ್ಲವೇ ನೇರವಾಗಿ ಕಡತವನ್ನು ಸಭೆಗೆ ಕೊಂಡೊಯ್ದು ಅನುಮತಿ ಪಡೆಯುವ ಸಾಧ್ಯತೆಯಿದೆ’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

150 ಅಧಿಕಾರಿಗಳಿಗೆ ಅನ್ಯಾಯ?
ಕಡಿಮೆ ವಿದ್ಯಾರ್ಹತೆ ಹೊಂದಿದ್ದ ಇಲಾಖೆಯ 140 ಮಂದಿ ರಾಜ್ಯ, ಹೊರರಾಜ್ಯಗಳಲ್ಲಿರುವ ವಿಶ್ವವಿದ್ಯಾಲಯಗಳ ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿ ಉಪ ನಿರ್ದೇಶಕರು, ಜಂಟಿ ನಿರ್ದೇಶಕರು, ಹೆಚ್ಚುವರಿ ನಿರ್ದೇಶಕರ ಹುದ್ದೆಗೆ ಬಡ್ತಿ ಪಡೆದಿದ್ದರು. ಈ ವಿಷಯ ಗೊತ್ತಾದ ನಂತರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಅವರಿಗೆ ಪತ್ರ ಬರೆದಿದ್ದು, ಪ್ರಮಾಣಪತ್ರದ ನೈಜತೆ ಪರಿಶೀಲನೆ ನಡೆಯುತ್ತಿದೆ. ಅದರಲ್ಲಿ ಕೆಲವರ ಪ್ರಮಾಣಪತ್ರಗಳು ನಕಲಿ ಎಂಬುದು ಸಾಬೀತಾಗಿದ್ದು, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

‘ನಕಲಿ ಪದವಿ ಪಡೆದ 40 ಸಿಬ್ಬಂದಿ ಕಾನೂನು ಕುಣಿಕೆಯಲ್ಲಿ ಸಿಲುಕಿ ಹಾಕಿಕೊಳ್ಳುವ ಭಯದಿಂದ ಮುಂಬಡ್ತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಅವರೆಲ್ಲರೂ ಈಗ ಸಚಿವರ ಮೇಲೆ ಒತ್ತಡ ತಂದು ಪದವಿ ಅರ್ಹತೆ ತೆಗೆಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದರಿಂದ ಅರ್ಹ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದಿರುವ 150 ಸಾಂಖ್ಯಿಕ ಸಹಾಯಕ ಅಧಿಕಾರಿಗಳಿಗೆ ಮೋಸವಾಗಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಬ್ಬಂದಿಯೊಬ್ಬರು ಹೇಳಿದರು.

**

ಸಿಬ್ಬಂದಿ ಕಾರ್ಯಕ್ಷಮತೆ ಹೆಚ್ಚಿಸಲು ಸಣ್ಣ ಬದಲಾವಣೆ ತರಲಾಗುತ್ತಿದೆ. ವಿದ್ಯಾರ್ಹತೆ ಕಡಿತ ಮಾಡುತ್ತಿದ್ದೇವೆ ಎಂಬುದು ಸುಳ್ಳು.
–ಶಾಲಿನಿ ರಜನೀಶ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT