ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಮಾರಸ್ವಾಮಿ ಪಂಚಿಂಗ್‌ ಬ್ಯಾಗ್‌’; ಪ್ರಧಾನಿ ಮೋದಿ

ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
Last Updated 10 ಫೆಬ್ರುವರಿ 2019, 20:20 IST
ಅಕ್ಷರ ಗಾತ್ರ

ಹುಬ್ಬಳ್ಳಿ:ರಾಜ್ಯದ ಜೆಡಿಎಸ್‌– ಕಾಂಗ್ರೆಸ್‌ ನೇತೃತ್ವದ ದುರ್ಬಲ (ವೀಕ್‌) ಮಾದರಿ ಸರ್ಕಾರ ಬೇಕೋ ಅಥವಾ ನವಭಾರತ ಕಟ್ಟುವ ಸುಸ್ಥಿರ ಮಾದರಿಯ ಸರ್ಕಾರ ಬೇಕೋ ನೀವೇ ತೀರ್ಮಾನಿಸಿ ಎಂಬ ಪ್ರಶ್ನೆಯನ್ನುಪ್ರಧಾನಿ ನರೇಂದ್ರ ಮೋದಿ ಅವರು ಜನರ ಮುಂದಿಟ್ಟಿದ್ದಾರೆ.

ಇಲ್ಲಿನ ಗಬ್ಬೂರು ಬೈಪಾಸ್‌ ಬಳಿ ಬಿಜೆಪಿ ಭಾನುವಾರ ಏರ್ಪಡಿಸಿದ್ದ ಲೋಕಸಭಾ ಚುನಾವಣಾ ಪೂರ್ವ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ ಮೊದಲ ಚುನಾವಣಾ ಪ್ರಚಾರ ಸಭೆ ಇದು.

‘ಕರ್ನಾಟಕದ ಉಸ್ತುವಾರಿ ಯಾರು? ಹೋದಲ್ಲೆಲ್ಲ ತಮ್ಮ ಅಸಹಾಯಕತೆಯನ್ನು ಹೇಳಿಕೊಂಡು ಅಳುವ ಮುಖ್ಯಮಂತ್ರಿ ಒಂದು ಕಡೆ ಇದ್ದಾರೆ. ಮತ್ತೊಂದೆಡೆ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ನಾಮಧಾರ್‌ (ರಾಹುಲ್‌ ಗಾಂಧಿ) ಇದ್ದಾರೆ, ಮುಖ್ಯಮಂತ್ರಿಯನ್ನು ಒಂದು ರೀತಿ ‘ಪಂಚಿಂಗ್‌ ಬ್ಯಾಗ್‌’ ಮಾಡಿಕೊಂಡಿದ್ದಾರೆ. ಹೋದ
ವರು ಬಂದವರು ಎಲ್ಲ ಒಂದೊಂದು ಪಂಚ್‌ ಕೊಡುತ್ತಿದ್ದಾರೆ. ಇಂತಹ ಅಸಹಾಯಕ ಮಾದರಿಯನ್ನು ರಾಷ್ಟ್ರರಾಜಕಾರಣದಲ್ಲಿ ಪ್ರಯೋಗಿಸುವ ಹವಣಿಕೆಯಲ್ಲಿದ್ದಾರೆ’ ಎಂದು ಮಹಾಮೈತ್ರಿಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

‘ಈ ಸರ್ಕಾರದ ನಿಯಂತ್ರಣ ಯಾರು ಮಾಡುತ್ತಾರೆ ಎಂಬುದು ಗೊತ್ತೇ ಆಗುತ್ತಿಲ್ಲ. ಜನರಿಗೆ ಸಂಬಂಧಿಸಿದ ನಿರ್ಧಾರಗಳು ನಾಯಕರ ಮಹಲುಗಳಲ್ಲಿ ಆಗುತ್ತವೆ’ ಎಂದು ಟೀಕಿಸಿದರು.

ಸಿದ್ಧಪಡಿಸಿದ ಭಾಷಣವನ್ನುಟೆಲಿ ಪ್ರಾಂಪ್ಟರ್ ಮೂಲಕ ಓದಿದ ಅವರು, ತಮ್ಮ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು. ಬಜೆಟ್‌ನಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳನ್ನೇ ಪುನರುಚ್ಚರಿಸಿದರು.

ಇಷ್ಟು ವರ್ಷ ಯಾರ ಬಗ್ಗೆ ಪ್ರಶ್ನೆ ಮಾಡಲು ಹೆದರುತ್ತಿದ್ದರೋ ಅಂತಹವರು ಈಗ ಕೋರ್ಟ್‌, ಏಜೆನ್ಸಿಗಳ ಮುಂದೆ ಹಾಜರಾಗಿ ಉತ್ತರ ನೀಡುವ ಕಾಲ ಬಂದಿದೆ ಎಂದು ಪರೋಕ್ಷವಾಗಿ ರಾಬರ್ಟ್ ವಾದ್ರಾ ಅವರ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.

ಸಾಲ ಮನ್ನಾ ವಿಚಾರದಲ್ಲಿ ಮೊದಲಿನಿಂದಲೂ ಸುಳ್ಳು ಹೇಳುತ್ತಾ ಬಂದಿರುವ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದ ಬಳಿಕವೂ ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ವಿಫಲವಾಗಿದೆ. 43 ಲಕ್ಷ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು. ಈಗ ಬರೀ 60 ಸಾವಿರ ರೈತರ ಸಾಲವನ್ನು ಮನ್ನಾ ಮಾಡಿದೆ. ಇಂತಹ ಸುಳ್ಳುಗಳು ಮೂಲಕವೇ ಅವರು ಅಧಿಕಾರ ಹಿಡಿಯುತ್ತಿದ್ದಾರೆ. ಆದರೆ, ಈ ನಿಮ್ಮ ಪ್ರಧಾನ ಸೇವಕ, ಚೌಕೀದಾರ ನೀಡಿದ ಭರವಸೆಗಳನ್ನು ಈಡೇರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾನೆ ಎಂದು ತಮ್ಮ ಸರ್ಕಾರ ಮಂಡಿಸಿದ ಬಜೆಟ್‌ನ ಅಂಶಗಳನ್ನು ವಿವರಿಸಿದರು.

ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರ ನೆರವಿಗೆ ಬರುವ ನಿಟ್ಟಿನಲ್ಲಿ ನಾವು ಆಯಾ ರೈತರ ಖಾತೆಗಳಿಗೇ ₹6 ಸಾವಿರ ಜಮಾ ಮಾಡುತ್ತಿದ್ದೇವೆ. ರಿಕ್ಷಾ ಚಾಲಕರು ಸೇರಿದಂತೆ ಶ್ರಮಿಕ ವರ್ಗದವರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರತಿ ತಿಂಗಳೂ ₹3 ಸಾವಿರ ಮಾಸಾಶನ ನೀಡಲು ಯೋಜನೆ ರೂಪಿಸಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT