ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆಗೆ ಎಲೆಚುಕ್ಕಿ ರೋಗ: ರಾಜ್ಯದ ಪ್ರಸ್ತಾವನೆ ಒಪ್ಪದ ಕೇಂದ್ರ

Published 9 ಡಿಸೆಂಬರ್ 2023, 15:39 IST
Last Updated 9 ಡಿಸೆಂಬರ್ 2023, 15:39 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದಲ್ಲಿ ಅಡಿಕೆ ತೋಟಗಳಲ್ಲಿ ಹಬ್ಬಿರುವ ಎಲೆ ಚುಕ್ಕಿ ರೋಗ ಹಾಗೂ ಹಳದಿ ಎಲೆ ರೋಗ ನಿಯಂತ್ರಣ ಮತ್ತು ಸಂಶೋಧನೆಗೆ ₹225.73 ಕೋಟಿ ನೆರವು ನೀಡುವಂತೆ ಕರ್ನಾಟಕ ತೋಟಗಾರಿಕೆ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಕೃಷಿ ಸಚಿವಾಲಯ ಒಪ್ಪಿಗೆ ಸೂಚಿಸಿಲ್ಲ. 

ಎಲೆ ಚುಕ್ಕಿ ರೋಗದ ನಿಯಂತ್ರಣಕ್ಕೆ ಅಗತ್ಯವಿರುವ ಸಸ್ಯ ಸಂರಕ್ಷಣಾ ಔಷಧಿಗಳು ಹಾಗೂ ಸಿಂಪಡಣೆ ವೆಚ್ಚ, ತೋಟಗಳ ನೈರ್ಮಲೀಕರಣ ಹಾಗೂ ಪೋಷಕಾಂಶಗಳ ನಿರ್ವಹಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು, ಉತ್ತಮ ತೋಟಗಾರಿಕೆ ಬೇಸಾಯ ಪದ್ಧತಿಗಳ ಅಳವಡಿಕೆ, ಪ್ರಾತ್ಯಕ್ಷಿಕೆಗಳನ್ನು ನಡೆಸಲು ಅನುದಾನ ನೀಡುವಂತೆ ರಾಜ್ಯ ಕೋರಿತ್ತು. ಇದಕ್ಕೆ ಒಪ್ಪದ ಸಚಿವಾಲಯವು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆ, ವರ್ಷವಾರು ಅನುದಾನ ಹಂಚಿಕೆ ಕುರಿತು ಮಾಹಿತಿ ನೀಡುವಂತೆ ಸೂಚಿಸಿದೆ. ಈ ಎಲ್ಲ ಅಂಶಗಳನ್ನು ಒಳಗೊಂಡ ಪರಿಷ್ಕೃತ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ತೋಟಗಾರಿಕಾ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ತಿಳಿಸಿದರು. 

ರಾಜ್ಯದಲ್ಲಿ ಎಲೆಚುಕ್ಕಿ ರೋಗದಿಂದಾಗಿ 20 ಸಾವಿರ ಹೆಕ್ಟೇರ್‌ನಷ್ಟು ಅಡಿಕೆ ತೋಟಕ್ಕೆ ಹಾನಿಯಾಗಿದೆ. ಈ ರೋಗದ ಬಗ್ಗೆ ಅಧ್ಯಯನಕ್ಕೆ ವಿಜ್ಞಾನಿಗಳ ತಂಡ ಕಳುಹಿಸಿಕೊಡಬೇಕು ಎಂದು ಕರ್ನಾಟಕದ ಅಡಿಕೆ ಬೆಳೆಗಾರರ ನಿಯೋಗವು ಕೇಂದ್ರ ಕೃಷಿ ಸಚಿವರಿಗೆ ಮನವಿ ಸಲ್ಲಿಸಿತ್ತು. 

‘ದೇಶದಲ್ಲಿ 12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವಾರ್ಷಿಕ ವಹಿವಾಟು ₹5,400 ಕೋಟಿ ಆಗಿದೆ. ಕರ್ನಾಟಕದಲ್ಲಿ ₹4,300 ಕೋಟಿ ಮೌಲ್ಯದ 9.5 ಲಕ್ಷ ಟನ್‌ ಅಡಿಕೆ ಬೆಳೆಯಲಾಗುತ್ತಿದೆ. ಅಡಿಕೆ ಬೆಳೆಯು 50 ಲಕ್ಷ ಜನರಿಗೆ ಜೀವನೋಪಾಯವನ್ನು ಒದಗಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಅಡಿಕೆಗೆ ಉತ್ತಮ ಬೆಲೆ ದೊರಕುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡಿರುವ ಈ ರೋಗದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ನಿಯೋಗ ಗಮನ ಸೆಳೆದಿತ್ತು. 

ಈ ರೋಗದ ಬಗ್ಗೆ ಅಧ್ಯಯನ ನಡೆಸಲು ಏಳು ತಜ್ಞರನ್ನು ಒಳಗೊಂಡ ಸಮಿತಿಯನ್ನು ಕೇಂದ್ರ ಕೃಷಿ ಸಚಿವಾಲಯವು ಅಕ್ಟೋಬರ್‌ನಲ್ಲಿ ರಚಿಸಿತ್ತು. ಈ ತಜ್ಞರ ತಂಡವು ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿತ್ತು. ತಜ್ಞರ ತಂಡದ ಶಿಫಾರಸಿನಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT