ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಂಥಾಲಯ ಇಲಾಖೆ: ಕಾಯ್ದೆಗೆ ತಿದ್ದುಪಡಿ ಮಾಡದೇ ಸರ್ಕಾರದಿಂದ ಆದೇಶ

Published 1 ಜುಲೈ 2024, 1:32 IST
Last Updated 1 ಜುಲೈ 2024, 1:32 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರ ಅಧಿಕಾರ ಮೊಟಕುಗೊಳಿಸಿ, ಹೊಸದಾಗಿ ಆಯುಕ್ತಾಲಯ ಸೃಷ್ಟಿಸಲು  ರಾಜ್ಯ ಸರ್ಕಾರ ಮುಂದಾಗಿರುವುದು ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇಲಾಖೆಗೆ ಆಯುಕ್ತರನ್ನು ನೇಮಿಸುವ ಸಂಬಂಧ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಆದರೆ, ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆಗೆ ತಿದ್ದುಪಡಿ ಮಾಡದೇ ಈ ಆದೇಶ ಹೊರಡಿಸಲಾಗಿದ್ದು, ಇದು ನಿಯಮಬಾಹಿರ ಎಂದು ಗ್ರಂಥಾಲಯ ಇಲಾಖೆ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರ್ಕಾರ ನೀಡಿರುವ ಕಾರಣ: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಕಾರ್ಯವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ. ನಿರ್ದೇಶಕರ ಹಂತದ ಹುದ್ದೆಯು ತಾಂತ್ರಿಕ ಸ್ವರೂಪದ್ದಾಗಿದೆ. ಇವರಿಂದ ಆಡಳಿತ ನಿರ್ವಹಣೆ ಕಷ್ಟ. ಆದ್ದರಿಂದ, ಇಲಾಖೆಯ ಕಾರ್ಯ ಚಟುವಟಿಕೆಯ ಗುಣಮಟ್ಟ ಹೆಚ್ಚಿಸಲು, ಸರ್ಕಾರ ಹಾಗೂ ಇಲಾಖೆ ಮಟ್ಟದಲ್ಲಿ ಸಮನ್ವಯ ಸಾಧಿಸಲು, ಆಡಳಿತದಲ್ಲಿ ಪಾರದರ್ಶಕತೆ, ಕಾರ್ಯಕ್ಷಮತೆ ವೃದ್ಧಿಸಲು ನಿರ್ದೇಶಕರ ಮೇಲೆ ಆಯುಕ್ತರ ಹುದ್ದೆ ಸೃಜಿಸುವುದು ಅಗತ್ಯ. ಐಎಎಸ್‌ ದರ್ಜೆಯ ಅಧಿಕಾರಿಯನ್ನೇ ಆಯುಕ್ತರ ಹುದ್ದೆಗೆ ನೇಮಿಸಲಾಗುವುದು ಎಂದು ಆದೇಶದಲ್ಲಿ ಸರ್ಕಾರ ಹೇಳಿದೆ.

ಈಗಾಗಲೇ ಗ್ರಂಥಾಲಯ ಇಲಾಖೆ ವ್ಯಾಪ್ತಿಯನ್ನು ಕುಗ್ಗಿಸಲಾಗಿದೆ. ಗ್ರಾಮಾಂತರ ಪ್ರದೇಶದ ಗ್ರಂಥಾಲಯ ಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸುರ್ಪದಿಗೆ ಒಪ್ಪಿಸಲಾಗಿದೆ. 1965ರಿಂದಲೂ ನಿರ್ದೇಶಕರೇ ಗ್ರಂಥಾಲಯ ಇಲಾಖೆಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಹಿಂದಿನ ನಿರ್ದೇಶಕರ ಅವಧಿಯಲ್ಲಿ ಒಂದಷ್ಟು ಸಮಸ್ಯೆಗಳು ಆಗಿತ್ತು. ಆ ಬಳಿಕ ಇಲಾಖೆಯ ಸ್ವಾಯತ್ತತೆಯನ್ನು ಕ್ರಮೇಣ ಕಸಿದುಕೊಳ್ಳಲಾಯಿತು. ಹಿಂದೆ ಬಹುತೇಕ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳಲಾಗುತ್ತಿತ್ತು ಎಂದು ಮೂಲಗಳು ಹೇಳಿವೆ.

ಹಿಂದೆ ಆಯ್ಕೆ ಸಮಿತಿ ಆಯ್ಕೆ ಮಾಡುತ್ತಿದ್ದ ಪುಸ್ತಕಗಳು ಅಂತಿಮ ವಾಗಿರುತ್ತಿದ್ದವು. ಈಗ ಸರ್ಕಾರದ ಮಟ್ಟದಲ್ಲಿ ಹಸ್ತಕ್ಷೇಪ ನಡೆಯುತ್ತಿದೆ. ಕೆಲವು ಪುಸ್ತಕಗಳನ್ನು ಕೈಬಿಡುವ ಮತ್ತು ಸೇರಿಸುವ ನಿರ್ಧಾರ ಸಚಿವರ ಹಂತದಲ್ಲಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಗ್ರಂಥಾಲಯ ಇಲಾಖೆ ಮಾಜಿ ನಿರ್ದೇಶಕ ಮಲ್ಲೇಶಪ್ಪ, ‘ಸರ್ಕಾರ ಆಯುಕ್ತರನ್ನಾಗಲಿ, ಯಾರನ್ನೇ ಆಗಲಿ ನೇಮಕ ಮಾಡುವುದರಲ್ಲಿ ತಪ್ಪಿಲ್ಲ. ಆದರೆ, ಗ್ರಂಥಾಲಯ ಇಲಾಖೆ ಕಾಯ್ದೆಗೆ ತಿದ್ದುಪಡಿ ಮಾಡದೆ ಹೇಗೆ ನೇಮಿಸಲು ಸಾಧ್ಯ? ಇದು ಸ್ಪಷ್ಟವಾಗಿ ನಿಯಮದ ಉಲ್ಲಂಘನೆ. ಇಲಾಖೆಯನ್ನು ಸೂಪರ್‌ಸೀಡ್‌ ಮಾಡಿದಂತಾಗುತ್ತದೆ’ ಎಂದರು.

‘ಆಯುಕ್ತರ ನೇಮಕದಿಂದ ಅನುಕೂಲ ಆಗಬಹುದು ಎಂದು ಸರ್ಕಾರ ಭಾವಿಸಿರಬಹುದು. ಅದರಲ್ಲಿ ತಪ್ಪೇನಿಲ್ಲ’ ಎಂದರು.

‘ಕನ್ನಡದ ಅರಿವು ಮತ್ತು ಸಾಹಿತ್ಯದ ಬಗ್ಗೆ ಒಲವು ಇಲ್ಲದ ಐಎಎಸ್‌ ಅಧಿಕಾರಿ ಗಳನ್ನು ಆಯುಕ್ತರನ್ನಾಗಿ ಮಾಡಿದರೆ, ಗ್ರಂಥಾಲಯ ಇಲಾಖೆಗೆ ಯಾವುದೇ ಪ್ರಯೋಜನ ಆಗದು. ಸಾಹಿತ್ಯದ ಬಗ್ಗೆ ಒಲವು ಇರುವ ಅಧಿಕಾರಿಗಳನ್ನು ನೇಮಿಸಿದರೆ ಇಲಾಖೆಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಪ್ರಕಾಶಕರ ಸಂಘದ ಪದಾಧಿಕಾರಿ ಸೃಷ್ಟಿ ನಾಗೇಶ್‌.

‘ಸಮಿತಿ ರಚಿಸಿ, ಚರ್ಚೆ ನಡೆಸಬೇಕಿತ್ತು’

‘ಆಯುಕ್ತರನ್ನು ನೇಮಿಸುವ ಆದೇಶ ಹೊರಡಿಸುವ ಮೊದಲು ಸಮಿತಿಯೊಂದನ್ನು ರಚಿಸಿ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಗಳ ಸಲಹೆ, ಸೂಚನೆಗಳನ್ನು ಪಡೆಯಬಹುದಿತ್ತು’ ಎಂದು ಗ್ರಂಥಾಲಯ ಇಲಾಖೆ ಮಾಜಿ ನಿರ್ದೇಶಕ ಕೆ.ಜಿ.ವೆಂಕಟೇಶ್‌ ಹೇಳುತ್ತಾರೆ.

ಗ್ರಂಥಾಲಯ ಇಲಾಖೆಯನ್ನು ಓದುಗ ಕೇಂದ್ರಿತವಾಗಿ ಅಭಿವೃದ್ಧಿಪಡಿಸುವ ದಿಸೆಯಲ್ಲಿ ಯಾರೂ ಯೋಚಿಸುತ್ತಿಲ್ಲ. ಇದು ನಿಜಕ್ಕೂ ದುರಾದೃಷ್ಟಕರ. ವಿವಿಧ ಲಾಬಿಗಳ ಕೈಗೆ ಇಲಾಖೆ ಸಿಕ್ಕಿಬಿದ್ದಿದೆ. ಬೆಂಗಳೂರು ನಗರದಲ್ಲಿ ಗ್ರಂಥಾಲಯ ಸೆಸ್‌ ಮೂಲಕ ನೂರಾರು ಕೋಟಿ ರೂಪಾಯಿ ಸಂಗ್ರಹ ಆಗುತ್ತಿದೆ. ಆದರೆ, ನಗರದಲ್ಲಿ ಒಂದು ಗ್ರಂಥಾಲಯವೂ ಅಭಿವೃದ್ಧಿ ಆಗಿಲ್ಲ. ಪ್ರತಿ ವಾರ್ಡ್‌ಗೊಂದು ಗ್ರಂಥಾಲಯ ಆರಂಭಿಸಬಹುದು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT