ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲಾಘಾತವೇ ದೊಡ್ಡ ಹಂತಕ: 2011ರಿಂದ 2021ರವರೆಗೆ 812 ಮಂದಿ ಮೃತ

ರಾಜ್ಯದಲ್ಲಿ 2011ರಿಂದ 2021ರವರೆಗೆ 812 ಮಂದಿ ಮೃತ; ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ
Published 11 ಜೂನ್ 2023, 20:57 IST
Last Updated 11 ಜೂನ್ 2023, 20:57 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದಲ್ಲಿ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪಗಳಲ್ಲಿ ಸಿಡಿಲು ಹೆಚ್ಚಿನ ಪ್ರಾಣಗಳನ್ನು ಬಲಿ ಪಡೆಯುತ್ತಿದೆ. 2011ರಿಂದ 2021ರವರೆಗಿನ ಅವಧಿಯಲ್ಲಿ 812 ಜನರು ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ (ಕೆಎಸ್‌ಡಿಎಂಎ) ದತ್ತಾಂಶಗಳು ತಿಳಿಸುತ್ತದೆ. ಈ ವರ್ಷದ ಜನವರಿಯಿಂದ ಜೂನ್‌ ಮೊದಲ ವಾರದವರೆಗೆ 33 ಮಂದಿ ಮೃತಪಟ್ಟಿದ್ದಾರೆ. ಜಾನುವಾರುಗಳು ಕೂಡ ಸಾವಿಗೀಡಾಗುತ್ತಿರುವುದು ವರದಿಯಾಗುತ್ತಲೇ ಇದೆ.

ಕೆಎಸ್‌ಡಿಎಂಎ ಸಿದ್ಧಪಡಿಸಿರುವ ಕ್ರಿಯಾಯೋಜನೆಯ ಮಾಹಿತಿಯ ಪ್ರಕಾರ, ಸಿಡಿಲು ದೊಡ್ಡ ‘ಹಂತಕ’ ಆಗಿ ಕಾಡುತ್ತಿದೆ. ಸಿಡಿಲಾಘಾತದ ಬಗ್ಗೆ ಜನರಲ್ಲಿ ಜಾಗೃತಿ ಕೊರತೆ ಇರುವುದೂ ಕಂಡುಬಂದಿದೆ. ಮುಂಗಾರು ಹಂಗಾಮು ನಿರ್ವಹಣೆಯ ಸಿದ್ಧತೆ ಜೊತೆಗೆ, ರಕ್ಷಿಸಿಕೊಳ್ಳುವುದು ಹೇಗೆ ಎಂಬ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಕೆಎಸ್‌ಡಿಎಂಎ ಜಿಲ್ಲಾಡಳಿತಗಳಿಗೆ ಸಲಹೆ ನೀಡಿದೆ. 

‘ದೇಶದಲ್ಲಿ ಪ್ರತಿ ವರ್ಷ ಸರಾಸರಿ 2,500 ಮಂದಿ ಸಿಡಿಲು ಬಡಿದು ಸಾವಿಗೀಡಾಗುತ್ತಿರುವುದು ವರದಿಯಾಗುತ್ತಿದೆ. ಇದನ್ನು ತಡೆಯುವುದಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಜಿಲ್ಲಾಡಳಿತಗಳಿಗೆ ನೀಡಲಾಗಿದೆ. ಏನು ಮಾಡಬೇಕು ಹಾಗೂ ಏನು ಮಾಡಬಾರದು ಎನ್ನುವುದನ್ನು ಪಟ್ಟಿ ಮಾಡಿ ತಿಳಿಸಲಾಗಿದೆ. ಸಿಡಿಲಿನಿಂದ ಪ್ರಾಣ ಹಾನಿಯನ್ನು ಶೂನ್ಯಕ್ಕೆ ತರುವುದಕ್ಕೆ ಎಲ್ಲರಲ್ಲೂ ಜಾಗೃತಿ ಮೂಡಬೇಕಾಗುತ್ತದೆ. ಮಾಹಿತಿ, ಸಂವಹನ ಹಾಗೂ ಶಿಕ್ಷಣ ಕಾರ್ಯಕ್ರಮಗಳು ಹೆಚ್ಚಾಗಬೇಕಾಗುತ್ತದೆ’ ಎಂದು ಕೆಎಸ್‌ಡಿಎಂಎ ಆಯುಕ್ತ ಡಾ.ಮನೋಜ್‌ ರಾಜನ್‌ ‘ಪ್ರಜಾವಾಣಿ’ಗೆ ತಿಳಿಸಿದರು.‌

‘ಅಂಕಿ–ಅಂಶಗಳನ್ನು ಗಮನಿಸಿದಾಗ, 2018, 2019 ಹಾಗೂ 2021ರಲ್ಲಿ ಜಾಸ್ತಿ ಸಾವು ವರದಿಯಾಗಿದೆ. ಅತಿವೃಷ್ಟಿ ಹಾಗೂ ನೆರೆ ಹೆಚ್ಚಾಗಿರುವ ಮತ್ತು ಸಿಡಿಲು ಹೆಚ್ಚಾಗಿ ಉಂಟಾಗಿರುವ 2 ಸಾವಿರ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆ ತಯಾರಿಸಲಾಗಿದೆ. ಅದರಂತೆ ಕಾರ್ಯನಿರ್ವಹಿಸುವಂತೆಯೂ ತಿಳಿಸಲಾಗಿದೆ. ಹವಾಮಾನ ಮುನ್ಸೂಚನೆಯನ್ನು ಮಾಧ್ಯಮ, ಸಾಮಾಜಿಕ ಮಾಧ್ಯಮದ ಮೂಲಕ ನೀಡುವ ಕೆಸಲವನ್ನೂ ಮಾಡಲಾಗುತ್ತಿದೆ. 2021ಕ್ಕೆ ಹೋಲಿಸಿದರೆ 2022ರಲ್ಲಿ ಸಾವಿನ ಪ್ರಮಾಣ ಕೊಂಚ ಕಡಿಮೆಯಾಗಿದೆ’ ಎನ್ನುತ್ತಾರೆ ಅವರು.

ಪ್ರಾಧಿಕಾರವು ಸಿದ್ಧಪಡಿಸಿರುವ ಕ್ರಿಯಾಯೋಜನೆಯಲ್ಲಿ, 2011ರಿಂದ 2021ರವರೆಗೆ 812 ಮಂದಿ ಸಿಡಿಲು ಬಡಿದು ಸಾವಿಗೀಡಾಗಿರುವ ಮಾಹಿತಿ ನೀಡಲಾಗಿದೆ. ಈ ಅವಧಿಯಲ್ಲಿ ಅತಿ ಹೆಚ್ಚಿನ ಸಾವು (85) ವರದಿಯಾಗಿರುವುದು ಬೆಳಗಾವಿ ಜಿಲ್ಲೆಯಲ್ಲಿ. ನಂತರದ ಸ್ಥಾನದಲ್ಲಿ ವಿಜಯಪುರ (69), ಗದಗ (56), ಚಿತ್ರದುರ್ಗ (48), ತುಮಕೂರು (48), ಬೀದರ್ (44), ಕೊಪ್ಪಳ (43), ಹಾವೇರಿ (43), ಯಾದಗಿರಿ (37), ಧಾರವಾಡ (37), ಬಳ್ಳಾರಿ (35), ಬಾಗಲಕೋಟೆ (31 ಇವೆ. ಈ 11 ವರ್ಷಗಳಲ್ಲಿ ರಾಮನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಮಾನವ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿಸಲಾಗಿದೆ.

‘ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಅವರು ಸಾವಿಗೀಡಾಗುತ್ತಿರುವುದು ವರದಿಯಾಗುತ್ತಲೇ ಇದೆ. ಸಿಡಿಲನ್ನು ತಪ್ಪಿಸಲಾಗದು. ಆದರೆ. ಅದರಿಂದಾಗುವ ಸಾವು–ನೋವುಗಳನ್ನು ತಪ್ಪಿಸಬಹುದು. ಇದಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು’ ಎನ್ನುತ್ತದೆ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ.

ಮುನ್ನೆಚ್ಚರಿಕೆ, ರಕ್ಷಣೆ ಹೇಗೆ?

l ಗುಡುಗು-ಮಿಂಚು ಬರುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ನೀವು ಬಯಲಿನಲ್ಲಿದ್ದರೆ ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ, ನಿಲ್ಲಬೇಡಿ

l ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೇ ಇರಬೇಕಾದರೆ ತಲೆಯನ್ನು ಮೊಣಕಾಲುಗಳ ನಡುವೆ ಇಟ್ಟುಕೊಳ್ಳಿ, ಇದು ಮಿಂಚಿನಿಂದ ಮಿದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ

l ಮರಗಳಿದ್ದ ಪ್ರದೇಶದಲ್ಲಿ ನೀವಿದ್ದರೆ ಬೇಗನೆ ಹೊರಬರುವುದು ಒಳ್ಳೆಯದು. ಏಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ ಅಥವಾ ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ

l ಎತ್ತರದ ಗುಡ್ಡದ ಮೇಲಿದ್ದರೆ ತಗ್ಗಿಗೆ ಇಳಿಯಿರಿ. ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ

l ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ.

l ವಿದ್ಯುತ್ ಕಂಬ, ಟವರ್‌ಗಳು ಹಾಗೂ ಟ್ರಾನ್ಸ್‌ಫಾರ್ಮರ್ ಮುಂತಾದವುಗಳ ಬಳಿ ಇರಬೇಡಿ

l ತಂತಿಬೇಲಿ, ಬಟ್ಟೆ ಒಣಹಾಕುವ ತಂತಿಗಳಿಂದಲೂ ದೊರವಿರಿ.

l ಮನೆಯ ಕಿಟಕಿಯ ಬಳಿಗಿಂತ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ

l ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್‌ನಲ್ಲಿ ಮಾತನಾಡಬೇಡಿ. ಚಾರ್ಜ್‌ಗೆ ಹಾಕುವುದೂ ಬೇಡ

l ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ

l ಗುಡುಗು– ಸಿಡಿಲಿನ ವೇಳೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳಿಂದ ದೂರವಿರಿ

(ಆಧಾರ: ಕೆಎಸ್‌ಡಿಎಂಎ)

ಮುನ್ನೆಚ್ಚರಿಕೆ, ರಕ್ಷಣೆ ಹೇಗೆ?

* ಗುಡುಗು-ಮಿಂಚು ಬರುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ನೀವು ಬಯಲಿನಲ್ಲಿದ್ದರೆ ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ, ನಿಲ್ಲಬೇಡಿ

* ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೇ ಇರಬೇಕಾದರೆ ತಲೆಯನ್ನು ಮೊಣಕಾಲುಗಳ ನಡುವೆ ಇಟ್ಟುಕೊಳ್ಳಿ, ಇದು ಮಿಂಚಿನಿಂದ ಮಿದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ

* ಮರಗಳಿದ್ದ ಪ್ರದೇಶದಲ್ಲಿ ನೀವಿದ್ದರೆ ಬೇಗನೆ ಹೊರಬರುವುದು ಒಳ್ಳೆಯದು. ಏಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ ಅಥವಾ ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ

* ಎತ್ತರದ ಗುಡ್ಡದ ಮೇಲಿದ್ದರೆ ತಗ್ಗಿಗೆ ಇಳಿಯಿರಿ. ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ

* ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ.

* ವಿದ್ಯುತ್ ಕಂಬ, ಟವರ್‌ಗಳು ಹಾಗೂ ಟ್ರಾನ್ಸ್‌ಫಾರ್ಮರ್ ಮುಂತಾದವುಗಳ ಬಳಿ ಇರಬೇಡಿ

* ತಂತಿಬೇಲಿ, ಬಟ್ಟೆ ಒಣಹಾಕುವ ತಂತಿಗಳಿಂದಲೂ ದೊರವಿರಿ.

* ಮನೆಯ ಕಿಟಕಿಯ ಬಳಿಗಿಂತ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ

* ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್‌ನಲ್ಲಿ ಮಾತನಾಡಬೇಡಿ. ಚಾರ್ಜ್‌ಗೆ ಹಾಕುವುದೂ ಬೇಡ

* ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ

* ಗುಡುಗು– ಸಿಡಿಲಿನ ವೇಳೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳಿಂದ ದೂರವಿರಿ

(ಆಧಾರ: ಕೆಎಸ್‌ಡಿಎಂಎ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT