ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ: ಲಿಂಗಾಯತ–ವೀರಶೈವ ಪ್ರಸ್ತಾವ ವಾಪಸು ಬಂದಿಲ್ಲ

ರಾಜ್ಯ ಅಲ್ಪಸಂಖ್ಯಾತ ಇಲಾಖೆ ಸ್ಪಷ್ಟನೆ
Last Updated 19 ನವೆಂಬರ್ 2018, 17:22 IST
ಅಕ್ಷರ ಗಾತ್ರ

ಬೆಂಗಳೂರು: ‘ಲಿಂಗಾಯತ, ವೀರಶೈವ ಲಿಂಗಾಯತರಿಗೆ (ಬಸವತತ್ವ ಒಪ್ಪುವವರು) ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರ ಕಳುಹಿಸಿರುವ ಶಿಫಾರಸನ್ನು ಕೇಂದ್ರ ಸರ್ಕಾರ ವಾಪಸು ಕಳುಹಿಸಿಲ್ಲ’ ಎಂದು ರಾಜ್ಯ ಅಲ್ಪಸಂಖ್ಯಾತ ಇಲಾಖೆ ಮತ್ತು ಅಲ್ಪಸಂಖ್ಯಾತ ಆಯೋಗ ತಿಳಿಸಿದೆ.

ಈ ಕುರಿತಂತೆ ರಾಜ್ಯ ಅಲ್ಪಸಂಖ್ಯಾತ ಇಲಾಖೆಯ ಅಧೀನ ಕಾರ್ಯದರ್ಶಿ ಅಕ್ರಂ ಬಾಷಾ ಹಾಗೂ ಆಯೋಗದ ನಿರ್ದೇಶಕ ಅನೀಸ್‌ ಸಿರಾಜ್‌ ಸೋಮವಾರ ಸ್ಪಷ್ಟಡಿಸಿದ್ದಾರೆ.

‘ರಾಜ್ಯ ಸರ್ಕಾರದ ಶಿಫಾರಸು ವಾಪಸು ಬಂದಿದೆ’ ಎಂದು ಕೆಲವು ವೀರಶೈವ ಸ್ವಾಮೀಜಿಗಳು ಮಾಧ್ಯಮಗಳಲ್ಲಿ ನೀಡಿರುವ ಹೇಳಿಕೆ ಕುರಿತಂತೆ ‘ಜಾಗತಿಕ ಲಿಂಗಾಯತ ಮಹಾಸಭಾ’ ಕೋರಿದ ಸ್ಪಷ್ಟನೆಗೆ ಅಧಿಕಾರಿಗಳು ಈ ಉತ್ತರ ನೀಡಿದ್ದಾರೆ.

ನಾಲ್ಕು ಪಿಐಎಲ್‌ಗಳು: ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತ ಆಯೋಗವು ತಜ್ಞರ ಸಮಿತಿ ರಚನೆಗೆ ಆದೇಶ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್‌) ಈಗಾಗಲೇ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆ ಹಂತದಲ್ಲಿವೆ.

2018ರ ಆರಂಭದಲ್ಲಿ ಸಲ್ಲಿಸಲಾಗಿರುವ ಈ ನಾಲ್ಕೂ ಅರ್ಜಿಗಳ ಕೊನೆಯ ವಿಚಾರಣೆ ಸೆಪ್ಟೆಂಬರ್‌ 9ರಂದು ನಡೆದಿತ್ತು. ಈ ವೇಳೆ ನ್ಯಾಯಪೀಠ, ‘ಈ ಬಗ್ಗೆ ನಿಮ್ಮ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿ’ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಇದಕ್ಕೆ ಉತ್ತರಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ‘ಇದೊಂದು ಅತಿ ಸೂಕ್ಷ್ಮ ವಿಚಾರ. ಈ ಕುರಿತಂತೆ ಉನ್ನತ ಮಟ್ಟದ ತೀರ್ಮಾನ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಹೀಗಾಗಿ ಸಮಯಾವಕಾಶ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಕೋರಿದ್ದರು.

ನ್ಯಾಯಪೀಠ ಇದನ್ನು ಮಾನ್ಯ ಮಾಡಿತ್ತು. ವಿಚಾರಣೆಯನ್ನು ಡಿಸೆಂಬರ್ 10ಕ್ಕೆ ಮುಂದೂಡಿತ್ತು.

ರಾಜ್ಯ ಸರ್ಕಾರ 2018ರ ಮಾರ್ಚ್ 23ರಂದು ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT