ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಸಾಗಣೆ: ಮೂವರ ಬಂಧನ

ಲಾಕ್‌ಡೌನ್‌ ಸಮಯದಲ್ಲಿ ಸರ್ಕಾರಿ ಜೀಪಿನಲ್ಲಿ ಬಾಟಲಿಗಳು‌ ಸಿಕ್ಕ ಪ್ರಕರಣ
Last Updated 13 ಜೂನ್ 2020, 21:00 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಸಮಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಜೀಪಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸಿದ ಪ್ರಕರಣ ಸಂಬಂಧ ಪೊಲೀಸರು ಕೊನೆಗೂ ಗುರುವಾರ ಮೂವರನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಈ ಪ್ರಕರಣ ಸಂಬಂಧ ಎಲೆಕ್ಟ್ರಾನಿಕ್‌ ಸಿಟಿಯ ಎಸಿಪಿ ವಾಸು ಮತ್ತು ಸಿಬ್ಬಂದಿ ಏಪ್ರಿಲ್‌ 11ರಂದು ವಿಶೇಷ್‌ ಗುಪ್ತಾ ಹಾಗೂ ಜೀಪಿನ ಚಾಲಕ ಗೋಪಿ ಎಂಬುವವರನ್ನು ಬಂಧಿಸಿ, ಮರುದಿನ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

ಆರೋಪಿಗಳ ಬಿಡುಗಡೆಗೆ ₹ 2.5 ಲಕ್ಷ ಲಂಚ ಪಡೆಯಲಾಗಿದೆ ಎಂಬ ಆರೋಪ ಇಲಾಖೆಯಲ್ಲಿ ಭಾರಿ ಸದ್ದು ಮಾಡಿತ್ತು. ಅಕ್ರಮ ಮದ್ಯ ಸಾಗಣೆ ಪ್ರಕರಣದ ತನಿಖೆಯನ್ನು ಮಾರತ್ತಹಳ್ಳಿ ಎಸಿಪಿ ಎಂ.ಜಿ. ಪಂಪಾಪತಿ ನಡೆಸುತ್ತಿದ್ದಾರೆ.

‘ವಿಶೇಷ್ ಗುಪ್ತಾ ಅವರಿಗೆ ಮದ್ಯ ಕೊಡಿಸಿದ ಭಾಸ್ಕರ್‌, ಮದ್ಯದ ಪೆಟ್ಟಿಗೆಗಳನ್ನು ಜೀಪಿಗೆ ಹಾಕಿದ್ದ ಬಾರ್‌ ಕೆಲಸಗಾರ ಸೋಮ, ಈ ಪೆಟ್ಟಿಗೆಗಳನ್ನು ಅಕ್ರಮವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಗೋವಿಂದರೆಡ್ಡಿ ಅವರನ್ನು ಎರಡು ತಿಂಗಳಬಳಿಕ ಬಂಧಿಸಿ ಬಳಿಕ ಬಿಡುಗಡೆ
ಮಾಡಲಾಯಿತು’ ಎಂದು ಮೂಲಗಳು ತಿಳಿಸಿವೆ.

ಭಾಸ್ಕರ್‌ ಮತ್ತು ಗೋವಿಂದರೆಡ್ಡಿ ವಿರುದ್ಧ ಮದ್ಯದ ಅಕ್ರಮ ದಾಸ್ತಾನು ಮತ್ತು ಸೋಮನ ವಿರುದ್ಧ ಸಾಕ್ಷ್ಯಾಧಾರ ನಾಶಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

‘ಜೀಪಿನಲ್ಲಿ ಸಾಗಿಸುತ್ತಿದ್ದ ಎಂಟು ಪೆಟ್ಟಿಗೆಗಳಲ್ಲಿ 100ಕ್ಕೂ ಹೆಚ್ಚು ಮದ್ಯದ ಬಾಟಲಿಗಳಿದ್ದವು. ಅವುಗಳನ್ನು ಬೇರೆ ಬೇರೆ ಅಂಗಡಿ ಮತ್ತು ಬಾರ್‌ಗಳಿಂದ ತರಲಾಗಿತ್ತು‍‍‍‍‍’ ಎಂದು ಆರೋಪಿಗಳು ವಿಚಾರಣೆ ವೇಳೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

‘ವಿಶೇಷ್‌ ಅವರ ತಾಯಿ ಒಡವೆಗಳನ್ನು ₹ 5 ಲಕ್ಷಕ್ಕೆ ಅಡವಿಟ್ಟು, ಎಸಿಪಿ ಮತ್ತು ಸಿಬ್ಬಂದಿಗೆ ₹ 2.5 ಲಕ್ಷ ಕೊಟ್ಟು ಮಗನನ್ನು ಬಿಡಿಸಿದರು’ ಎಂಬಸಂಗತಿ ವಿಚಾರಣೆಯಿಂದ ಬಯಲಾಗಿತ್ತು.

ಮೃದು ಧೋರಣೆ: ಆಕ್ಷೇಪ

‘ಸಿಗರೇಟ್‌ ವಿತರಕರು ಮತ್ತು ನಕಲಿ ಮಾಸ್ಕ್‌ ತಯಾರಕರಿಂದ ಸಿಸಿಬಿ ಎಸಿಪಿ ಪ್ರಭುಶಂಕರ್‌, ಇನ್‌ಸ್ಪೆಕ್ಟರ್‌ ಅಜಯ್‌, ನಿರಂಜನ್‌ ಕುಮಾರ್‌ ಲಂಚ ಪಡೆದಿದ್ದಾರೆಂಬ ಆರೋಪ ಸಂಬಂಧ ತ್ವರಿತವಾಗಿ ವಿಚಾರಣೆ ನಡೆಸಿ ಕ್ರಮ ಕೈಗೊಂಡನಗರದ ಹಿರಿಯ ಪೊಲೀಸ್‌ ಅಧಿಕಾರಿಗಳು ಎಸಿಪಿ ವಾಸು ವಿರುದ್ಧ ಮೃದುಧೋರಣೆ ತಳೆದಿದ್ದಾರೆ’ ಎಂಬ ಆಕ್ಷೇಪ ಪೊಲೀಸ್‌ ಇಲಾಖೆಯಲ್ಲಿ ಕೇಳಿಬರುತ್ತಿದೆ.

‘ಸಿಸಿಬಿ ಅಧಿಕಾರಿಗಳ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸಲು ಎಸಿಬಿಗೂ ಪ್ರಕರಣ ವರ್ಗಾಯಿಸಲಾಗಿದೆ. ಆದರೆ, ಅಕ್ರಮ ಮದ್ಯ ಸಾಗಣೆ ಪ್ರಕರಣದಲ್ಲಿ ಸರ್ಕಾರಕ್ಕೆ ವರದಿ ನೀಡಿ ಕೈತೊಳೆದುಕೊಳ್ಳಲಾಗಿದೆ’ ಎಂಬ ಚರ್ಚೆಗಳು ನಡೆಯುತ್ತಿವೆ.

‘ಮೂರೂ ಪ್ರಕರಣಗಳು ಬೇರೆ ಬೇರೆ. ಸಿಗರೇಟ್‌ ಮತ್ತು ಮಾಸ್ಕ್‌ ಪ್ರಕರಣ ಗಂಭೀರ ಸ್ವರೂಪದ್ದು. ಅಕ್ರಮ ಮದ್ಯ ಸಾಗಣೆ ಪ್ರಕರಣದಲ್ಲೂ ತನಿಖೆ ನಡೆಯುತ್ತಿದೆ’ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT