ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದ ಭದ್ರತಾ ಚೀಟಿ ವೆಚ್ಚವೂ ಗ್ರಾಹಕರಿಗೆ: ಬಾಟಲಿಗೆ 31.74 ಪೈಸೆ ಹೆಚ್ಚುವರಿ ಪಾವತಿ

Published 23 ಜೂನ್ 2023, 23:31 IST
Last Updated 23 ಜೂನ್ 2023, 23:31 IST
ಅಕ್ಷರ ಗಾತ್ರ

ಬೆಂಗಳೂರು: ಮದ್ಯದ ಬಾಟಲಿಗಳ ಮುಚ್ಚಳದ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿ (ಇಎಎಲ್‌) ವೆಚ್ಚವನ್ನು ಮದ್ಯ ತಯಾರಕರ ಬದಲಿಗೆ ಗ್ರಾಹಕರಿಗೆ ವರ್ಗಾಯಿಸಲಾಗಿದೆ. ಇದರಿಂದಾಗಿ ಗ್ರಾಹಕರು ಪ್ರತಿ ಬಾಟಲಿ ಮದ್ಯಕ್ಕೆ 31.74 ಪೈಸೆಯಷ್ಟು ಹೆಚ್ಚುವರಿ ದರ ಪಾವತಿಸಬೇಕಾಗಿದೆ.

ಈ ಹಿಂದೆ ಇಎಎಲ್‌ ವೆಚ್ಚವೂ ಸೇರಿ ಮದ್ಯದ ಬಾಟಲಿಯ ಗರಿಷ್ಠ ಮಾರಾಟ ದರ ನಿಗದಿಯಾಗುತ್ತಿತ್ತು.
ಅದರಲ್ಲಿ ಮದ್ಯ ತಯಾರಕರೇ ಇಎಎಲ್‌ ವೆಚ್ಚ ಭರಿಸಬೇಕಿತ್ತು. ಕರ್ನಾಟಕ ಮದ್ಯ ತಯಾರಕರ ಸಂಘದ ಮನವಿ ಆಧರಿಸಿ ಮೇ 22ರಂದು ಆದೇಶ ಹೊರಡಿಸಿರುವ ಅಬಕಾರಿ ಆಯುಕ್ತರು, ಮದ್ಯದ ಬಾಟಲಿಯ ಮೇಲಿನ ಮುದ್ರಿತ ದರದಿಂದ ಇಎಎಲ್‌ ವೆಚ್ಚವನ್ನು ಹೊರಗೆ ಇರಿಸಿದ್ದಾರೆ.

‘ಮದ್ಯ ಮತ್ತು ವೈನ್‌ ಉತ್ಪನ್ನಗಳ ಗರಿಷ್ಠ ಮಾರಾಟ ದರ (ಎಂಆರ್‌ಪಿ) ಲೆಕ್ಕ ಹಾಕುವಾಗ ಅಬಕಾರಿ ಭದ್ರತಾ ಚೀಟಿಗಳ ವೆಚ್ಚವನ್ನು ಘೋಷಿತ ಬೆಲೆಯಲ್ಲಿ ತೋರಿಸದೇ ಪ್ರತ್ಯೇಕ ಭಾಗವಾಗಿ ತೋರಿಸಬೇಕು’ ಎಂದು ಅಬಕಾರಿ ಆಯುಕ್ತ ಜೆ. ರವಿಶಂಕರ್‌ ಆದೇಶದಲ್ಲಿ ತಿಳಿಸಿದ್ದಾರೆ.

60 ಎಂ.ಎಲ್‌. ಮದ್ಯದ ಬಾಟಲಿ, 180 ಎಂ.ಎಲ್‌. ಮದ್ಯದ ಬಾಟಲಿ ಸೇರಿದಂತೆ ಎಲ್ಲ ಅಳತೆಯ ಬಾಟಲಿಗಳಿಗೂ ಒಂದು ಭದ್ರತಾ ಚೀಟಿ ಅಂಟಿಸಬೇಕಾಗುತ್ತದೆ. ಅದರ ಜತೆಗೆ, ಪ್ರತಿಯೊಂದು ಮದ್ಯದ ಪೆಟ್ಟಿಗೆಗೆ ತಲಾ ಎರಡು ಚೀಟಿಗಳನ್ನು ಅಂಟಿಸಬೇಕಾಗುತ್ತದೆ. ಈ ಎಲ್ಲ ವೆಚ್ಚವನ್ನೂ ಈಗ ಗ್ರಾಹಕರ ಮೇಲೆ ಹೊರಿಸಲಾಗಿದೆ.

ಎರಡೂವರೆ ವರ್ಷದ ಹಿಂದಿನ ಬೇಡಿಕೆ: ಇಎಎಲ್‌ ವೆಚ್ಚವನ್ನು ಮದ್ಯ ತಯಾರಕರ ಬದಲಿಗೆ ಗ್ರಾಹಕರಿಂದ ಸಂಗ್ರಹಿಸುವಂತೆ ಕರ್ನಾಟಕ ಮದ್ಯ ತಯಾರಕರ ಸಂಘದ ಅಧ್ಯಕ್ಷರು 2020ರ ಆಗಸ್ಟ್‌ 12ರದು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ಆಧರಿಸಿ, ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ಅಂದರೆ, 2023ರ ಮಾರ್ಚ್‌ 28ರಂದು ಅಬಕಾರಿ ಆಯುಕ್ತರು ಆದೇಶವೊಂದನ್ನು ಹೊರಡಿಸಿದ್ದರು. ಆ ಆದೇಶದಲ್ಲೇ ಜುಲೈ 1ರಿಂದ ಅನ್ವಯವಾಗುವಂತೆ ಇಎಎಲ್‌ ವೆಚ್ಚವನ್ನು ಮದ್ಯದ ಬಾಟಲಿಯ ಘೋಷಿತ ಬೆಲೆಯಿಂದ ಹೊರಗಿಡುವಂತೆ ತಿಳಿಸಲಾಗಿತ್ತು.

ಮೇ 22ರಂದು ಮತ್ತೊಂದು ಆದೇಶ ಹೊರಡಿಸಿರುವ ಅಬಕಾರಿ ಆಯುಕ್ತರು, ಮಾರ್ಚ್‌ 28ರ ಆದೇಶದಂತೆ ಮದ್ಯದ ದರ ನಿಗದಿಗೆ ಆದೇಶಿಸಿದ್ದಾರೆ. ಎಲ್ಲ ಮದ್ಯ ತಯಾರಕರು ಹಾಗೂ ಮದ್ಯ ಮಾರಾಟಗಾರರು ಮದ್ಯದ ಬಾಟಲಿಗಳ ಪರಿಷ್ಕೃತ ದರ ಪಟ್ಟಿಯನ್ನು ಅಬಕಾರಿ ಇಲಾಖೆಯಿಂದ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.

ಅಕ್ರಮ: ಆರೋಪ ಅಲ್ಲಗಳೆದ ಹಣಕಾಸು ಇಲಾಖೆ ಅಧಿಕಾರಿ

ಅಬಕಾರಿ ಭದ್ರತಾ ಚೀಟಿಗಳ ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸಿರುವ ಪ್ರಕರಣದಲ್ಲಿ ಅಬಕಾರಿ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳು
ಬೃಹತ್‌ ಪ್ರಮಾಣದ ಅವ್ಯವಹಾರ ನಡೆಸಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ, ಚಾಮರಾಜಪೇಟೆಯ ವಕೀಲ ಗಿರೀಶ್‌ ಆರೋಪಿಸಿದ್ದಾರೆ.

ಆರೋಪದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹಣಕಾಸು ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್‌, ‘ಇದು ಕ್ಷುಲ್ಲಕ ಆರೋಪ. ಅದರಲ್ಲಿ ಹುರುಳಿಲ್ಲ’ ಎಂದರು.

₹1,000 ಕೋಟಿ ಹೊರೆ?

ಅಬಕಾರಿ ಭದ್ರತಾ ಚೀಟಿಗಳ ಮುದ್ರಣ ದರ ಪ್ರತಿ ಚೀಟಿಗೆ 27 ಪೈಸೆ ಇತ್ತು. ಅದನ್ನು 31.74 ಪೈಸೆಗೆ ಹೆಚ್ಚಿಸಲಾಗಿದೆ. ಗ್ರಾಹಕರು ಪ್ರತಿ ಬಾಟಲಿ ಮದ್ಯ ಖರೀದಿಗೆ ₹31.10 ಇಎಎಲ್‌ ವೆಚ್ಚ ನೀಡಬೇಕು. ಇದರಿಂದಾಗಿ ಮದ್ಯ ಕುಡಿಯುವ ಗ್ರಾಹಕರಿಗೆ ವರ್ಷಕ್ಕೆ ₹1,000 ಕೋಟಿಯಷ್ಟು ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಈ ಮೊತ್ತವನ್ನು ಇದುವರೆಗೂ ಮದ್ಯ ತಯಾರಕರೇ ಭರಿಸುತ್ತಿದ್ದರು. ಗ್ರಾಹಕರಿಗೆ ಈ ಮೊತ್ತ ವರ್ಗಾವಣೆಯಾಗಿರುವುದರಿಂದ ಮದ್ಯ ತಯಾರಕರಿಗೆ ಇಷ್ಟು ಬೃಹತ್ ಮೊತ್ತ ಉಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT