ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಧಿಕಾರಕ್ಕೆ ಬಂದರೆ 'ಶ್ರಮಿಕ್ ನ್ಯಾಯ್', 'ಹಿಸ್ಸೇದಾರಿ ನ್ಯಾಯ್' ಗ್ಯಾರಂಟಿ: ಖರ್ಗೆ

Published 16 ಮಾರ್ಚ್ 2024, 7:24 IST
Last Updated 16 ಮಾರ್ಚ್ 2024, 7:24 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ ಸೆಳೆಯಲು ಕಾಂಗ್ರೆಸ್ ಪಕ್ಷವು 'ಶ್ರಮಿಕ್ ನ್ಯಾಯ್' ಹಾಗೂ 'ಹಿಸ್ಸೇದಾರಿ ನ್ಯಾಯ್' ಎಂಬ ಎರಡು ಹೊಸ ಗ್ಯಾರಂಟಿಗಳನ್ನು ಶನಿವಾರ ಘೋಷಿಸಿದೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಚುನಾವಣಾ ಆಯೋಗ ಇಂದು ಸಂಜೆ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆ ಮಾಡಲಿರುವುದರಿಂದ, ದೆಹಲಿಯಿಂದ ಈ ಘೋಷಣೆಗಳನ್ನು ಮಾಡುವ ಬದಲು ಬೆಂಗಳೂರಿನಿಂದ ಮಾಡುತ್ತಿದ್ದೇನೆ’ ಎಂದರು.

‘ನಾವು 15 ಅಂಶಗಳ ಕಾರ್ಯಕ್ರಮ ರೂಪಿಸಿದ್ದೇವೆ. ಕಿಸಾನ್ ನ್ಯಾಯ್, ಯುವ ನ್ಯಾಯ್ ಗ್ಯಾರಂಟಿಗಳನ್ನು ಈಗಾಗಲೇ ಘೋಷಿಸಿದ್ದೇವೆ. ಶ್ರಮಿಕ್ ನ್ಯಾಯ್, ಹಿಸ್ಸೇದಾರ್ ನ್ಯಾಯ್ ಘೋಷಣೆಗಳು ಹಿಂದುಳಿದ ವರ್ಗಗಳು, ಬಡವರಿಗೆ ಅನುಕೂಲ ಆಗುವಂತವು. ಎಲ್ಲರಿಗೂ ಸಮಾನ ನ್ಯಾಯ ಸಿಗಬೇಕು. ಸಾಮಾಜಿಕ, ರಾಜಕೀಯ ಸಮಾನತೆ ಎಲ್ಲರಿಗೆ ಸಿಗಬೇಕು. ಸಂಘಟಿತ, ಅಸಂಘಟಿತ ಕಾರ್ಮಿಕರಿಗೆ ಕಾರ್ಯಕ್ರಮ, ಸಾಮಾಜಿಕ ನ್ಯಾಯ, ಕನಿಷ್ಠ ವೇತನ ಕಾಯ್ದೆ. ಭವಿಷ್ಯ ನಿಧಿ ಕಾಯ್ದೆ, ವಿಮೆ ಕಾಯ್ದೆ ಹೊಸ ಗ್ಯಾರಂಟಿಯಲ್ಲಿ ಇರಲಿದೆ. ನಮ್ಮ ಸರ್ಕಾರ ಬಂದರೆ ಇವುಗಳನ್ನು ಜಾರಿಗೆ ತರಲಿದೆ’ ಎಂದು ಭರವಸೆ ನೀಡಿದರು.

‘ದುರದೃಷ್ಟವೆಂದರೆ, ನಾವು (ಕಾಂಗ್ರೆಸ್‌) ಜಾರಿಗೆ ತಂದ ಅನೇಕ ಕಾನೂನುಗಳನ್ನು ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ದುರ್ಬಲ ಮಾಡಿದೆ. ನರೇಗಾ ಯೋಜನೆ ಅಡಿ ಕಾರ್ಮಿಕ ಹಣ ಪಾವತಿ ಆಗುತ್ತಿಲ್ಲ. ನಮ್ಮ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುತ್ತದೆ. ಕೇಂದ್ರ ಸರಿಯಾದ ಸಮಯಕ್ಕೆ ಅನುದಾನ ನೀಡಿದರೆ ಯೋಜನೆಗಳು ಸರಿಯಾದ ಸಮಯಕ್ಕೆ ಆರಂಭವಾಗುತ್ತದೆ. ಆದರೆ, ತನ್ನ ಪಾಲು ಕೇಳಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಅನೇಕ ಪತ್ರ ಬರೆದಿದೆ. ಆದರೆ, ಕೇಂದ್ರ ಸ್ಪಂದಿಸಿಲ್ಲ’ ಎಂದು ದೂರಿದರು.

‘ನರೇಗಾ ಯೋಜನೆಗಳ ಬಗ್ಗೆ ಮೋದಿಗೆ ಆಸಕ್ತಿ ಇಲ್ಲ. ಇಂತಹ ಯೋಜನೆಗಳ ಬಗ್ಗೆ ಮೋದಿ ಸರ್ಕಾರ ನಿರ್ಲಕ್ಷ ವಹಿಸುತ್ತಿದೆ. ಮೋದಿಗೆ ಬಡವರ ಮೇಲೆ ಕಾಳಜಿ ಇಲ್ಲ’ ಎಂದರು.

‘ಬಡ ಮತ್ತು ಶ್ರೀಮಂತರ ನಡುವೆ ಇರುವ ಅಂತರ ಕಡಿಮೆ ಮಾಡುವುದು ಜಾತಿಗಣತಿ ಮಾಡುವ ನಮ್ಮ ಗ್ಯಾರಂಟಿಯ ಉದ್ದೇಶ. ಇದರಿಂದ ಸಮುದಾಯಗಳ ಅಭಿವೃದ್ಧಿ ವಿಚಾರಕ್ಕೆ ಅನುಕೂಲ ಆಗಲಿದೆ. ಶಿಕ್ಷಣ ಮತ್ತು ಸಾಮಾಜಿಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗಲಿದೆ. ಕರ್ನಾಟಕ ಈಗಾಗಲೇ ಜಾತಿ ಗಣತಿ ವರದಿ ಸ್ವೀಕರಿಸಿದೆ. ಆದರೆ ಮೋದಿ ಮಾತ್ರ ಜಾತಿಗಣತಿಗೆ ವಿರೋಧ ಮಾಡುತ್ತಿದ್ದಾರೆ. ಜಾತಿಯಿಂದ ಹೊರಬರುವುದು ಮೋದಿಗೆ ಇಷ್ಟವಿಲ್ಲ. ಮೋದಿ ಒಬ್ಬ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದರೂ  ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ಜಾತಿಗಣತಿ ಮಾಡುವುದು ಗ್ಯಾರಂಟಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT