ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಅದಾಲತ್‌: 13 ವಸಂತಗಳ ಒಗರು ಮರೆತು ಒಂದಾದ ದಂಪತಿ

ರಾಷ್ಟ್ರೀಯ ಲೋಕ್‌ ಅದಾಲತ್‌: 34.76 ಲಕ್ಷ ‍ಪ್ರಕರಣ ಇತ್ಯರ್ಥ
Published 10 ಜುಲೈ 2023, 23:32 IST
Last Updated 10 ಜುಲೈ 2023, 23:32 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರದುರ್ಗ ಜಿಲ್ಲೆಯೊಂದರ ನಿವಾಸಿಯಾದ ಆತ ಟ್ಯಾಕ್ಸಿ ಚಾಲಕ. ಈಕೆ ಗೃಹಿಣಿ. ಸುದೀರ್ಘ 13 ವರ್ಷಗಳ ಕೌಟುಂಬಿಕ ಕಲಹದಲ್ಲಿ ಪರಸ್ಪರ ಹಾವು ಮುಂಗುಸಿಯಾಗಿದ್ದ ಈ ದಂಪತಿ ಕಡೆಗೂ ಒಡಲೊಳಗಿನ ಒಗರನ್ನು ಮರೆತರು. ಈ ಬಾರಿಯ ಗ್ರೀಷ್ಮ ಋತುವಿನ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪುನರ್ಮಿಲನದ ಭಾವೋತ್ಕರ್ಷದಲ್ಲಿ ಮತ್ತೆ ಹೊಸಬಾಳಿಗೆ ಸಾಕ್ಷಿಯಾದರು...!

‘ರಾಜ್ಯದಾದ್ಯಂತ ಜುಲೈ 8ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 35 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಇವುಗಳಲ್ಲಿ ₹ 1,911 ಕೋಟಿ ಮೊತ್ತವನ್ನು ಪರಿಹಾರ ರೂಪದಲ್ಲಿ ಕೊಡಿಸಲಾಗಿದೆ‘ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಜಿ. ನರೇಂದರ್ ಸೋಮವಾರ ತಿಳಿಸಿದರು.

ಈ ಕುರಿತಂತೆ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿ, ‘ರಾಜ್ಯದಾದ್ಯಂತ ಒಟ್ಟು 1,020 ಪೀಠಗಳು ಕಾರ್ಯ ನಿರ್ವಹಿಸಿದ್ದು, 34,76,231 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಪೈಕಿ 2,50,344 ನ್ಯಾಯಾಲಯದಲ್ಲಿ ಬಾಕಿ ಇರುವ ಮತ್ತು 32,25,887 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ‘ ಎಂದು ವಿವರಿಸಿದರು.

 ’ಅದಾಲತ್‌ನಲ್ಲಿ 1,874 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳ 243 ಜೋಡಿಗಳನ್ನು ಒಂದು ಮಾಡಲಾಗಿದೆ. ಆಸ್ತಿಗೆ ಸಂಬಂಧಿಸಿದ 3,844 ಪಾಲುದಾರಿಕೆ ದಾವೆಗಳನ್ನು ಇತ್ಯರ್ಥಪಡಿಸಲಾಗಿದೆ. ಮೋಟಾರು ವಾಹನ ಅಪರಾಧಕ್ಕೆ ಸಂಬಂಧಿಸಿದ 5,007 ಪ್ರಕರಣಗಳಿಗೆ ಮುಕ್ತಿ ನೀಡಲಾಗಿದ್ದು, ₹ 224 ಕೋಟಿ ಪರಿಹಾರ ಕೊಡಿಸಲಾಗಿದೆ. 11,982 ಚೆಕ್ ಬೌನ್ಸ್ ಪ್ರಕರಣಗಳು ಅಂತ್ಯ ಕಂಡಿವೆ. 615 ಭೂಸ್ವಾಧೀನ ಎಕ್ಸಿಕ್ಯೂಷನ್ ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹ 141 ಕೋಟಿ ಪರಿಹಾರ ಕೊಡಿಸಲಾಗಿದೆ. ಇತರೆ 4,921 ಎಕ್ಸಿಕ್ಯೂಷನ್ ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹ 234 ಕೋಟಿ ಪರಿಹಾರ ಪಾವತಿಸುವಂತೆ ಮಾಡಲಾಗಿದೆ. ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ) ವ್ಯಾಪ್ತಿಗೆ ಒಳಪಡುವ 98 ಪ್ರಕರಣಗಳನ್ನು ಪರಿಹರಿಸಿ, ₹ 14 ಕೋಟಿ ಪರಿಹಾರ ಕೊಡಿಸಲಾಗಿದೆ. 180 ಗ್ರಾಹಕರ ವ್ಯಾಜ್ಯ ಸಂಬಂಧಿ ಪ್ರಕರಣಗಳನ್ನು ಬಗೆಹರಿಸುವ ಮೂಲಕ ₹ 6 ಕೋಟಿ ಪರಿಹಾರ ಕೊಡಿಸಲಾಗಿದೆ‘ ಎಂದು ವಿವರಿಸಿದರು.

ವಿಶೇಷಗಳು: ಶ್ರೀರಾಮ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ವರ್ಸಸ್ ಕೆ. ಪೂಜಾ ಇತರರು ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಕೆ. ಸೋಮಶೇಖರ್ ನೇತೃತ್ವದ ಪೀಠವು ₹ 1.15 ಕೋಟಿ ಪರಿಹಾರದೊಂದಿಗೆ ಇತ್ಯರ್ಥಪಡಿಸಿದೆ.

ಆಸ್ತಿ ಪಾಲುದಾರಿಕೆ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣವನ್ನು ನ್ಯಾಯಮೂರ್ತಿ ಕೆ. ಎಸ್. ಹೇಮಲೇಖಾ ಅವರಿದ್ದ ಪೀಠವು ಇತ್ಯರ್ಥಪಡಿಸಿದ್ದು, ಪಕ್ಷಕಾರರಲ್ಲಿ ಒಬ್ಬರಾದ 74 ವರ್ಷದ ಲಲಿತಮ್ಮ ಎಂಬವರು ಆಂಬುಲೆನ್ಸ್‌ನಲ್ಲೇ ಹೈಕೋರ್ಟ್‌ಗೆ ಬಂದಿದ್ದರು. ಈ ವೇಳೆ ಹೇಮಲೇಖಾ ಅವರು ಖುದ್ದು ಆಂಬುಲೆನ್ಸ್ ಬಳಿ ತೆರಳಿ ಲಲಿತಮ್ಮನವರ ಹೇಳಿಕೆ ದಾಖಲಿಸಿಕೊಂಡು ಪ್ರಕರಣ ಇತ್ಯರ್ಥಪಡಿಸಿದ್ದಾರೆ.

ಹುಬ್ಬಳ್ಳಿ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 63 ವರ್ಷಗಳಷ್ಟು ಹಿಂದಿನ ಸಿವಿಲ್ ದಾವೆಗೆ ಮುಕ್ತಿ ದೊರಕಿಸಲಾಗಿದೆ. ಚಿತ್ರದುರ್ಗದ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಕಳೆದ 30 ವರ್ಷಗಳಿಂದ ಬಾಕಿ ಇದ್ದ ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT