ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಶೋಧ: ‘ಕುಬೇರ ಅಧಿಕಾರಿಗಳ’ ಬಳಿ ಭಾರಿ ಅಕ್ರಮ ಆಸ್ತಿ ದಾಖಲೆ, ಆಭರಣ ಪತ್ತೆ

ರಾಜ್ಯದ 57 ಸ್ಥಳಗಳಲ್ಲಿ ಲೋಕಾಯುಕ್ತ ಶೋಧ
Published 1 ಜೂನ್ 2023, 0:03 IST
Last Updated 1 ಜೂನ್ 2023, 0:03 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಬೆಸ್ಕಾಂನ ಮುಖ್ಯ ಎಂಜಿನಿಯರ್‌ ಹಾಗೂ ಕಾರ್ಮಿಕ ಭವನದ ಕಾರ್ಖಾನೆಗಳ ಉಪ ನಿರ್ದೇಶಕ ಸೇರಿದಂತೆ ರಾಜ್ಯದ ಒಟ್ಟು 15 ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಲೋಕಾಯುಕ್ತ ಪೊಲೀಸರು, 11 ಜಿಲ್ಲೆಗಳಲ್ಲಿ ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.

ಅಲ್ಲದೇ ಈ ಅಧಿಕಾರಿಗಳು ಹೊಂದಿರುವ ಆಸ್ತಿಗಳ 57 ಸ್ಥಳಗಳಲ್ಲಿ ಪ್ರತ್ಯೇಕ ತಂಡಗಳು ದಾಳಿ ನಡೆಸಿ, ಶೋಧ ನಡೆಸಿದರು.

‘ಕುಬೇರ ಅಧಿಕಾರಿಗಳ’ ಮನೆಗಳಲ್ಲಿ ಚಿನ್ನಾಭರಣ, ಆಸ್ತಿ ಖರೀದಿ ಪತ್ರಗಳು, ಅಪಾರ ಪ್ರಮಾಣದ ನಗದು, ಜಿಂಕೆ ಕೊಂಬುಗಳು, ಹಣ ಎಣಿಕೆ ಯಂತ್ರಗಳು,  ಬ್ರ್ಯಾಂಡೆಡ್‌ ಶೂಗಳು, ಬೆಲೆಬಾಳುವ ವಾಚ್‌ಗಳು ಪತ್ತೆಯಾಗಿವೆ. ಜತೆಗೆ, ಬೇರೆ ಬೇರೆ ಸ್ಥಳಗಳಲ್ಲಿರುವ ನಿವೇಶನಗಳು, ನಿರ್ಮಾಣ ಹಂತದ ಕಟ್ಟಡ, ಕೃಷಿ ಜಮೀನು ಖರೀದಿಸಿರುವುದು ಶೋಧದ ವೇಳೆ ಗೊತ್ತಾಗಿದೆ.


ಬೆಸ್ಕಾಂ ಮುಖ್ಯ ಎಂಜಿನಿಯರ್ ಎಚ್‌.ಜೆ.ರಮೇಶ್‌ಗೆ ಸೇರಿದ 10 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. 

ಬಸವೇಶ್ವರ ನಗರದ ಬಿಇಎಂಎಲ್ ಲೇಔಟ್‌ನಲ್ಲಿ ನಿರ್ಮಾಣ ಹಂತದ ₹ 4.20 ಕೋಟಿ ಮೌಲ್ಯದ ಮನೆ, ₹ 1.4 ಕೊಟಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಗ್ರಿ, ಗೃಹೋಪಯೋಗಿ ಉಪಕರಣಗಳು, ಷೇರು, 1 ದ್ವಿಚಕ್ರ ವಾಹನ, 1 ಕಾರು ಅವರ ಬಳಿ ಇದೆ. ದೇವನಹಳ್ಳಿಯ ಹೈಟೆಕ್ ಡಿಫೆನ್ಸ್‌ ಪಾರ್ಕ್ ಇಂಡಸ್ಟ್ರಿಯಲ್ ಪ್ರದೇಶದಲ್ಲಿ 1 ನಿವೇಶನ, ದಾಬಸ್‌ಪೇಟೆಯ ಸೋಂಪುರದ 2ನೇ ಹಂತದಲ್ಲಿ ಇವರ ಹೆಸರಿನಲ್ಲಿರುವ ಅಪಾರ್ಟ್‌ಮೆಂಟ್‌ ಪತ್ತೆಯಾಗಿದೆ. ಇದರ ಒಟ್ಟು ಮೌಲ್ಯ ₹ 5.6 ಕೋಟಿ ಎಂದು ಅಂದಾಜಿಸಲಾಗಿದೆ.

ಕಾರ್ಖಾನೆ ವಿಭಾಗದ ಉಪ ನಿರ್ದೇಶಕ ಟಿ.ವಿ.ನಾರಾಯಣಪ್ಪಗೆ ಸೇರಿದ ನಾಲ್ಕು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಹೆಜ್ಜಾಲ ಲೇಔಟ್‌ನಲ್ಲಿ 1 ನಿವೇಶನ, ವಿಜಯನಗರದಲ್ಲಿ 1 ಮನೆ, ಕೆ.ಆರ್‌.ಪುರದಲ್ಲಿ 2 ಮನೆ, ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 10 ಎಕರೆ ಕೃಷಿ ಜಮೀನಿರುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ. ಇದರ ಮೌಲ್ಯ ₹ 2.58 ಕೋಟಿ ಎಂದು ಅಂದಾಜಿಸಲಾಗಿದೆ. ಅವರ ಮನೆಯಲ್ಲೂ ₹ 22.50 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣ, ಪೀಠೋಪಕರಣ, ಎರಡು ಬೈಕ್‌ಗಳು ಪತ್ತೆಯಾಗಿವೆ ಎಂದು ಮೂಲಗಳು ಹೇಳಿವೆ.

ಬೆಂಗಳೂರಿನ ಕೆ.ಆರ್‌.ವೃತ್ತದ ಬೆಸ್ಕಾಂ ಕಚೇರಿಯ (ತಾಂತ್ರಿಕ ವಿಭಾಗ) ಮುಖ್ಯ ಎಂಜಿನಿಯರ್‌ ಎಚ್‌.ಜೆ.ರಮೇಶ್‌ ಅವರ ಮನೆಯಲ್ಲಿ ಪತ್ತೆಯಾಗಿರುವ ನಗದು ಹಾಗೂ ಚಿನ್ನಾಭರಣ.
ಬೆಂಗಳೂರಿನ ಕೆ.ಆರ್‌.ವೃತ್ತದ ಬೆಸ್ಕಾಂ ಕಚೇರಿಯ (ತಾಂತ್ರಿಕ ವಿಭಾಗ) ಮುಖ್ಯ ಎಂಜಿನಿಯರ್‌ ಎಚ್‌.ಜೆ.ರಮೇಶ್‌ ಅವರ ಮನೆಯಲ್ಲಿ ಪತ್ತೆಯಾಗಿರುವ ನಗದು ಹಾಗೂ ಚಿನ್ನಾಭರಣ.
ವಿ.ನಾರಾಯಣ
ವಿ.ನಾರಾಯಣ

ಟಿ.ಸಿ ಕೊಡಲು ಲಂಚ: ಪ್ರಾಂಶುಪಾಲ ಬಂಧನ

ಬೆಂಗಳೂರು: ವಿದ್ಯಾರ್ಥಿಗೆ ವರ್ಗಾವಣೆ ಪ್ರಮಾಣ ಪತ್ರ ನೀಡಲು ₹ 5 ಸಾವಿರ ಲಂಚ ಪಡೆಯುತ್ತಿದ್ದಾಗ ರಾಜಾಜಿನಗರ 2ನೇ ಬ್ಲಾಕ್‌ನ ಬಸವೇಶ್ವರ ಪ್ರೌಢಶಾಲೆಯ ಪ್ರಾಂಶುಪಾಲ ವಿ.ನಾರಾಯಣ ಅವರನ್ನು ಬುಧವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿ ನಂದೀಶ್‌ ಫಲಿತಾಂಶವನ್ನು ತಡೆ ಹಿಡಿದು ಹಣಕ್ಕೆ ಬೇಡಿಕೆ ಇಡಲಾಗಿತ್ತು. ವಿದ್ಯಾರ್ಥಿ ತಾಯಿ ದಿವ್ಯಾ ದೂರು ನೀಡಿದ್ದರು. ‌ ‘ಶಾಲೆಯಲ್ಲಿ ವಿದ್ಯಾರ್ಥಿ 9ನೇ ತರಗತಿ ಕಲಿಯುತ್ತಿದ್ದ. ಆತನನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಬುಧವಾರ ₹ 5 ಸಾವಿರ ಲಂಚದ ಹಣ ಪಡೆಯುತ್ತಿದ್ದಾಗ ಪೋಷಕರ ಎದುರೇ ಬಂಧಿಸಲಾಯಿತು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಯಾವ ಅಧಿಕಾರಿಗಳ ಮೇಲೆ ದಾಳಿ?

ಬೆಂಗಳೂರಿನ ಕೆ.ಆರ್‌.ವೃತ್ತದ ಬೆಸ್ಕಾಂ ಕಚೇರಿಯ (ತಾಂತ್ರಿಕ ವಿಭಾಗ) ಮುಖ್ಯ ಎಂಜಿನಿಯರ್‌ ಎಚ್‌.ಜೆ.ರಮೇಶ್‌ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಕಾರ್ಮಿಕ ಭವನದಲ್ಲಿನ ಕಾರ್ಖಾನೆ ವಿಭಾಗದ ಉಪ ನಿರ್ದೇಶಕ ಟಿ.ವಿ.ನಾರಾಯಣಪ್ಪ ಬೆಂಗಳೂರು ಗ್ರಾಮಾಂತರದ ಕಿಟ್ಟನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್‌.ಡಿ.ರಮೇಶ್‌ ಬಿಬಿಎಂಪಿ ದಕ್ಷಿಣ ವಲಯದ ಇಇ ಎನ್‌.ಜಿ.ಪ್ರಮೋದ್ ಕುಮಾರ್‌ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಲೆಕ್ಕಾಧಿಕಾರಿ ಎನ್‌.ಮುತ್ತು ಹಾಗೂ ಎಇಇ ಎಂಜಿನಿಯರ್ ಎ.ನಾಗೇಶ್ ಮೈಸೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ವಿಭಾಗದ ಉಪ ಆಯುಕ್ತ ಜೆ.ಮಹೇಶ್ ನಂಜನಗೂಡಿನ ಹಿರಿಯ ನೋಂದಣಾಧಿಕಾರಿ ಎಂ.ಶಿವಶಂಕರಮೂರ್ತಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಪಂಚಾಯತ್‌ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಉಪ ವಿಭಾಗದ ಕಿರಿಯ ಎಂಜಿನಿಯರ್‌ ಶಂಕರ್‌ನಾಯಕ್‌ ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಎಂಜಿನಿಯರ್‌ ಕೆ.ಪ್ರಶಾಂತ್‌ ಉಡುಪಿ ಜಿಲ್ಲೆ ಮಣಿಪಾಲದ ಕಾರ್ಮಿಕ ಅಧಿಕಾರಿ ಬಿ.ಆರ್‌.ಕುಮಾರ್ ಬೆಂಗಳೂರಿನ ವಿಕಾಸಸೌಧದ ಹಿರಿಯ ಭೂವಿಜ್ಞಾನಿ ಎ.ಎಂ.ನಿರಂಜನ್‌ ಹಾವೇರಿ ಉಪ ವಿಭಾಗದ ನಿರ್ಮಿತಿ ಕೇಂದ್ರದ ಯೋಜನಾ ಎಂಜಿನಿಯರ್ ವಾಗೀಶ್‌ ಕೊಪ್ಪಳದ ಕೆಆರ್‌ಐಡಿಎಲ್‌ನ ಇಇ ಜರಣಪ್ಪ ಎಂ.ಚಿಂಚೋಳಿಕರ್‌ ಮೈಸೂರು ಕೆಐಎಡಿಬಿ ಇಇ ಸಿ.ಎನ್‌.ಮೂರ್ತಿ ಅವರ ಮನೆಗಳಲ್ಲಿ ಶೋಧ ನಡೆಸಿದರು. ಇವರ ವಿರುದ್ಧ ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT