ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆದಷ್ಟೂ ವಿಸ್ತರಿಸುತ್ತಿರುವ ಅಜಿತ್‌ ರೈ ಸಾಮ್ರಾಜ್ಯ: ಪೊಲೀಸರಿಂದ ದಿನವಿಡೀ ವಿಚಾರಣೆ

Published 1 ಜುಲೈ 2023, 23:44 IST
Last Updated 1 ಜುಲೈ 2023, 23:44 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಕೆ.ಆರ್‌.ಪುರ ತಾಲ್ಲೂಕಿನ ಹಿಂದಿನ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಅವರ ಆರ್ಥಿಕ ವಹಿವಾಟಿನ ಕುರಿತು ಲೋಕಾಯುಕ್ತ ಪೊಲೀಸರಿಗೆ ಮಾಹಿತಿಗಳ ಮಹಾಪೂರವೇ ಹರಿದು ಬರುತ್ತಿದೆ. ತನಿಖೆಯ ಆಳ–ಅಗಲ ಹಿಗ್ಗುತ್ತಲೇ ಇದೆ.

ತನಿಖಾ ತಂಡದ ವಶದಲ್ಲಿರುವ ಅಜಿತ್‌ ರೈ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಇಡೀ ದಿನ ವಿಚಾರಣೆ ನಡೆಸಿದ್ದಾರೆ. ಅವರ ಅಣ್ಣ ಆಶಿತ್‌ ರೈ, ಬೇನಾಮಿ ಹರ್ಷವರ್ಧನ ಅವರನ್ನೂ ದಿನವಿಡೀ ಪ್ರಶ್ನಿಸಲಾಗಿದೆ. ಮೂವರಿಂದಲೂ ಮತ್ತಷ್ಟು ಮಾಹಿತಿಗಳನ್ನು ಹೊರ ತೆಗೆಯಲಾಗಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಆರೋಪಿ ಅಧಿಕಾರಿಯು ಪತ್ನಿಯ ಹೆಸರಿನಲ್ಲಿ ಮಂಗಳೂರಿನಲ್ಲಿ ಹೂಡಿಕೆ ಮಾಡಿರುವ ಕುರಿತು ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರಿನ ಕೆಲವು ಕಂಪನಿಗಳಲ್ಲಿ ಅಜಿತ್‌ ರೈ ಬೇನಾಮಿಯಾಗಿ ಹೂಡಿಕೆ ಮಾಡಿರುವ ಸುಳಿವು ಲಭಿಸಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಬಸವೇಶ್ವರ ನಗರ ನಿವಾಸಿ ಗೌರವ್‌ ಶೆಟ್ಟಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಕೃಷ್ಣಪ್ಪ ಹೆಸರಿನಲ್ಲಿ ಹೆಚ್ಚಿನ ಬೇನಾಮಿ ಆಸ್ತಿಗಳಿರುವುದು ತನಿಖೆ ವೇಳೆ ಕಂಡುಬಂದಿದೆ. ಈ ದಾಖಲೆಗಳನ್ನು ಪ್ರತ್ಯೇಕಿಸುತ್ತಿರುವ ತನಿಖಾ ತಂಡ, ಅವರನ್ನೂ ವಿಚಾರಣೆಗೆ ಕರೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ದೂರುಗಳ ಮಹಾಪೂರ: ‘ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಕೆ.ಆರ್‌. ಪುರ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಅಜಿತ್‌ ರೈ ಅವರಿಂದ ತೊಂದರೆಗೊಳಗಾದ ಹಲವರು ಲೋಕಾಯುಕ್ತ ಕಚೇರಿಗೆ ಬಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಲಿಖಿತ ದೂರುಗಳನ್ನೂ ಸಲ್ಲಿಸಿದ್ದಾರೆ. ಎಲ್ಲವನ್ನೂ ತನಿಖೆಯ ವ್ಯಾಪ್ತಿಗೆ ತರಲಾಗುವುದು’ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ದೇವನಹಳ್ಳಿ ವಿಮಾನ ನಿಲ್ದಾಣದ ಸಮೀಪದಲ್ಲಿ ಫಾರ್ಮುಲಾ–1 ರೇಸಿಂಗ್‌ ಟ್ರ್ಯಾಕ್‌ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದ ಕುರಿತು ಆರೋಪಿಯು ತನಿಖಾ ತಂಡದ ಎದುರು ಒಪ್ಪಿಕೊಂಡಿದ್ದಾರೆ. ಈ ಯೋಜನೆಯ ಹಿಂದೆ ಇರುವ ವ್ಯಕ್ತಿಗಳು, ಹೂಡಿಕೆ ಯೋಜನೆ, ಈವರೆಗೆ ನಡೆದಿರುವ ಪ್ರಯತ್ನದ ಬಗ್ಗೆಯೂ ತನಿಖಾ ತಂಡ ಮಾಹಿತಿ ಕಲೆಹಾಕುತ್ತಿದೆ.

ಸೇವೆಯಿಂದ ಅಮಾನತುಗೊಳಿಸಿ ಆದೇಶ

ಅಜಿತ್‌ ಕುಮಾರ್‌ ರೈ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಅಜಿತ್‌ ರೈ ಹಾಗೂ ಅವರ ಬೇನಾಮಿಗಳೆಂದು ಶಂಕಿಸಲಾಗಿರುವ ವ್ಯಕ್ತಿಗಳ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ನಡೆಸಿದ್ದರು. ಶುಕ್ರವಾರ ಅವರನ್ನು ಬಂಧಿಸಲಾಗಿತ್ತು. ಸೇವೆಯಿಂದ ಅಮಾನತು ಮಾಡುವಂತೆ ಶುಕ್ರವಾರವೇ ಲೋಕಾಯುಕ್ತದ ಪೊಲೀಸ್‌ ಮಹಾನಿರ್ದೇಶಕರು ಶಿಫಾರಸು ಮಾಡಿದ್ದರು. ಅದೇ ದಿನ ಅಮಾನತು ಆದೇಶವನ್ನೂ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT