ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಣತಿ: ಉಪಜಾತಿಗಳನ್ನು ಒಂದೇ ಹೆಸರಿನಡಿ ತರಬೇಕು ಎಂಬುದು ಬೇಡಿಕೆ –ಎಂ.ಬಿ.ಪಾಟೀಲ

Published 18 ಡಿಸೆಂಬರ್ 2023, 8:17 IST
Last Updated 18 ಡಿಸೆಂಬರ್ 2023, 8:17 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು (ವೀರಶೈವ– ಲಿಂಗಾಯತ ಸಮುದಾಯ) ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸಿಲ್ಲ. ಲಿಂಗಾಯತ ಸಮುದಾಯದ ಎಲ್ಲ ಉಪಜಾತಿಗಳನ್ನು ಒಂದೇ ಕಡೆ ತರಬೇಕು ಎನ್ನುವುದು ನಮ್ಮ ಬೇಡಿಕೆ. ಈ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇಲ್ಲ’ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಜಾತಿ ಗಣತಿ ವಿರೋಧಿಸುವ ಮನವಿಗೆ ಸಹಿ ಹಾಕಿದ ಕುರಿತು ಕೇಳಿದ ಪ್ರಶ್ನೆಗೆ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ನಮಗೆ ಕೆಲವು ಆತಂಕಗಳಿವೆ. ಲಿಂಗಾಯತ ಸಮುದಾಯದಲ್ಲಿ 40 ಪ್ರಮುಖ ಉಪ ಜಾತಿಗಳಿವೆ. ಲಿಂಗಾಯತ ಗಾಣಿಗ ಎಂದು ಇದ್ದರೆ, ಹಿಂದೂ ಗಾಣಿಗ ಎಂದು ಬರೆಸಿರುತ್ತಾರೆ. ಸಾದರ ಸಮುದಾಯ, ಹಿಂದೂ ಸಾದರ ಎಂದು ಬರೆಸಿದ್ದಾರೆ. ಹೀಗೆ ಉಪಜಾತಿಗಳನ್ನು ಅವರ ಉಪ ಜಾತಿಯ ಹೆಸರಿನಲ್ಲಿ ಬರೆಸಿರುತ್ತಾರೆ’ ಎಂದರು. 

‘ನಾವು ಕೇಳಿರುವುದರಲ್ಲಿ ತಪ್ಪೇನಿದೆ? ಉಪ ಜಾತಿಗಳನ್ನು ಪ್ರತ್ಯೇಕವಾಗಿ ಬರೆದಿರುವುದನ್ನು ಸರಿಪಡಿಸಿ ಎಂದು ಹೇಳಿದ್ದೇವೆ. ಒಕ್ಕಲಿಗ ಸಮುದಾಯದಲ್ಲೂ ಇದೇ ಸಮಸ್ಯೆ ಇದೆ. ಅವರದ್ದನ್ನೂ ಸರಿಪಡಿಸಲಿ’ ಎಂದರು.

‘ಇದು ಸಮೀಕ್ಷೆ. ಜನಗಣತಿ ಅಲ್ಲ. ಜನಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಇದೊಂದು ಸಮೀಕ್ಷೆ. ಇದಕ್ಕೆ ನಮ್ಮ ವಿರೋಧ ಇಲ್ಲ. ಎಲ್ಲ ಉಪ ಸಮುದಾಯಗಳನ್ನು ಗಣತಿ ಮಾಡಿ ಒಂದೇ ಹೆಸರಿನಡಿ ತರಬೇಕು. ವರದಿ ಕೊಡುವ ಮೊದಲೇ ಇದನ್ನು ಸರಿಪಡಿಸಬೇಕು ಎನ್ನುವುದು ನಮ್ಮ ಬೇಡಿಕೆ’ ಎಂದರು.

ಜಾತಿಗಣತಿಗೆ ಆಗ್ರಹಿಸಿ ಹಿಂದುಳಿದ ಸಮುದಾಯಗಳು ‘ಅಹಿಂದ’ ಸಮಾವೇಶಕ್ಕೆ ಮುಂದಾಗಿರುವ ಬಗ್ಗೆ ಕೇಳಿದಾಗ, ‘ಅಹಿಂದದವರು ಮಾಡಲಿ. ದಲಿತ ಸಮುದಾಯ ಮಾಡಲಿ. ಲಂಬಾಣಿ ಸಮುದಾಯ ಮಾಡಲಿ. ಪರಿಶಿಷ್ಟ ಪಂಗಡ ಹೀಗೆ ಎಲ್ಲ ಸಮುದಾಯದವರು ಮಾಡಲಿ. ಅದರಲ್ಲಿ ತಪ್ಪೇನಿಲ್ಲ’ ಎಂದರು.

ಜಾತಿಗಣತಿ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ, ‘ಸಮಸ್ಯೆ ಸರಿಪಡಿಸಿದರೆ ಯಾಕೆ ಪರಿಣಾಮ ಬೀರುತ್ತದೆ’ ಎಂದು ಮರು ಪ್ರಶ್ನೆ ಕೇಳಿದರು. ‘ಮುಖ್ಯಮಂತ್ರಿ ಸಮಸ್ಯೆಗಳನ್ನು ಸರಿಪಡಿಸುತ್ತಾರೆಂಬ ವಿಶ್ವಾಸ ಇದೆ’ ಎಂದೂ ಹೇಳಿದರು. 

ಲೋಕಸಭೆ ಚುನಾವಣೆಯಲ್ಲಿ ಸಚಿವರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಪಕ್ಷ ನಿರ್ಧಾರ ಮಾಡಿದರೆ ಸಚಿವರು ಸ್ಪರ್ಧೆ ಮಾಡಬೇಕಾಗುತ್ತದೆ. ಸಚಿವರು ಸ್ಪರ್ಧೆ ಮಾಡುವುದರಲ್ಲಿ ತಪ್ಪೇನಿದೆ’ ಎಂದೂ ಕೇಳಿದರು.

ಯಾವ ಪ್ರಧಾನಿಯೂ ಈ ರೀತಿ ನಡೆಸಿಕೊಂಡಿಲ್ಲ: ಮುಖ್ಯಮಂತ್ರಿ ಭೇಟಿಗೆ ಪ್ರಧಾನಿ ಕಾಲಾವಕಾಶ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ರಾಜ್ಯದ ಸಮಸ್ಯೆಗಳು, ಅನುದಾನದ ಬಗ್ಗೆ ಚರ್ಚಿಸಲು ಸಮಯ ಕೇಳಿದಾಗ ಪ್ರಧಾನಿ ಸಮಯ ಕೊಟ್ಟಿರಲಿಲ್ಲ. ಈಗ ಕೊನೆ ಕ್ಷಣದಲ್ಲಿ ಅವಕಾಶ ಕೊಟ್ಟಿದ್ದಾರೆ. ಇನ್ನೂ ಸ್ವಲ್ಪ ದಿನ ಬಿಟ್ಟು ಅವಕಾಶ ಕೊಟ್ಟಿದ್ದರೆ ಚುನಾವಣಾ ನೀತಿ ಸಂಹಿತೆ ಬರುತ್ತಿತ್ತು. ವಿರೋಧ ಪಕ್ಷದ ಮುಖ್ಯಮಂತ್ರಿ ಇರಬಹುದು, ಸ್ವಪಕ್ಷದ ಮುಖ್ಯಮಂತ್ರಿಯೇ ಇರಬಹುದು. ಈ ರೀತಿ ಕಡೆಗಣಿಸಿರುವ ಇತಿಹಾಸ ಇಲ್ಲ. ಹಿಂದೆ ವಾಜಪೇಯಿ, ಮನಮೋಹನ್ ಸಿಂಗ್, ರಾಜೀವ್ ಗಾಂಧಿ ಯಾರೂ ಮುಖ್ಯಮಂತ್ರಿಗಳನ್ನು ಈ ರೀತಿ ನಡೆಸಿಕೊಂಡಿಲ್ಲ. ವಿರೋಧ ಪಕ್ಷಗಳ ಮುಖ್ಯಮಂತ್ರಿಗಳನ್ನು ಪ್ರಧಾನಿ ಮೋದಿ ಕಡೆಗಣಿಸುತ್ತಿದ್ದಾರೆ. ಅವರಿಗೆ ರಾಜ್ಯಗಳು ಅಭಿವೃದ್ಧಿ ಹೊಂದಬಾರದು, ಅನುದಾನ ಕೊಡಬಾರದು ಎಂಬ ಮನಸ್ಥಿತಿ ಇದ್ದಂತೆ ಕಾಣುತ್ತಿದೆ’ ಎಂದು ದೂರಿದರು.

ಎಲ್ಲರಿಗೂ ಅಧಿಕಾರ ಹಂಚಬೇಕು: ‘ನಿಗಮ– ಮಂಡಳಿಗಳಿಗೆ ನೇಮಕ ಮಾಡುವ ಕುರಿತು ಚರ್ಚಿಸಲು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ದೆಹಲಿಗೆ ಹೋಗುತ್ತಿದ್ದಾರೆ.  ಶಾಸಕರನ್ನು ನೇಮಕಾತಿ ಮಾಡಬೇಕೆಂಬ ಚಿಂತನೆ ನಡೆದಿದೆ. ಲೋಕಸಭಾ ಚುನಾವಣೆ ನಂತರ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ಮಾಹಿತಿಯೂ ಇದೆ. ಅಧಿಕಾರ ಕೆಲವೇ ಜನರ ಬಳಿ ಇರಬಾರದು. ನನ್ನ ಇಲಾಖೆಯಲ್ಲೂ ಮೂರು ನಿಗಮಗಳು ಬರುತ್ತವೆ. ಯಾರನ್ನಾದರೂ ನೇಮಕ ಮಾಡಬಹುದು. ನನ್ನ ಅಭ್ಯಂತರ ಇಲ್ಲ. ಎಲ್ಲರಿಗೂ ಅಧಿಕಾರ ಹಂಚಬೇಕು. ಮೂರು ಬಾರಿ, ನಾಲ್ಕು ಬಾರಿ ಶಾಸಕರಾದವರೂ ಇದ್ದಾರೆ. ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು, ಎಸಿಸಿ ಪ್ರಧಾನ ಕಾರ್ಯದರ್ಶಿ ಅಂತಿಮವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದರು.

‘ಕೆಪಿಸಿಸಿ ಪದಾಧಿಕಾರಿಗಳ ನೇಮಕ ಅಂತಿಮ ಮಾಡಬಹುದೇ’ ಎಂಬ ಪ್ರಶ್ನೆಗೆ, ‘ನಾನು ಸಚಿವನಾಗಿದ್ದೇನೆ. ಪ್ರಚಾರ ಸಮಿತಿ ಅಧ್ಯಕ್ಷನೂ ಆಗಿದ್ದೇನೆ. ನನ್ನನ್ನು ಕೇಳಿದರೆ ನಾನೇ ಹೇಳುತ್ತೇನೆ, ಮತ್ತೊಬ್ಬರಿಗೆ ಅವಕಾಶ ಕೊಡಿ ಎಂದು. ಎಲ್ಲ ಕಡೆ ನಾನೇ ಇರಬೇಕು ಎಂಬ ದುರಾಸೆ ನನಗಿಲ್ಲ. ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಬೇರೆ ಯಾರನ್ನಾದರು ಮಾಡುವುದಾದರೆ ಮಾಡಿಕೊಳ್ಳಿ ಎಂದು ಹೇಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT