ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲೂರು ಶಾಸಕ ನಂಜೇಗೌಡ ಆಯ್ಕೆ ಪ್ರಶ್ನಿಸಿದ ಅರ್ಜಿ: ಸಿ.ಡಿ ಸಲ್ಲಿಕೆಗೆ ನಿರ್ದೇಶನ

Published 14 ಆಗಸ್ಟ್ 2024, 16:19 IST
Last Updated 14 ಆಗಸ್ಟ್ 2024, 16:19 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ವೇಳೆ ವಿ.ವಿ ಪ್ಯಾಟ್‌ ಪೇಪರ್‌ ಟ್ರಯಲ್‌ ಅನ್ನು ಇವಿಎಂ ಜೊತೆಗೆ ಹೊಂದಾಣಿಕೆ ಮಾಡುವ ಚಿತ್ರೀಕರಣದ ದೃಶ್ಯಾವಳಿಯನ್ನು ಇದೇ 19ರಂದು ಕೋರ್ಟ್‌ಗೆ ಸಲ್ಲಿಸಿ’ ಎಂದು ಹೈಕೋರ್ಟ್‌, ಕೋಲಾರ ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ.‌

‘ಮತ ಎಣಿಕೆ ಪ್ರಕ್ರಿಯೆಯಲ್ಲಿ ಹಲವು ಲೋಪ ದೋಷಗಳು ಕಂಡುಬಂದಿವೆ. ಹಾಗಾಗಿ, ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕೆ.ವೈ.ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು’ ಎಂದು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೇಂದ್ರ ಚುನಾವಣಾ ಆಯೋಗದ ಪರವಾಗಿ ವಕೀಲ ಶರತ್‌ ಆರ್‌.ದೊಡವಾಡ ಅವರು ಹಾಜರಾಗಿ, ‘ಮತ ಎಣಿಕೆ ವೇಳೆ ವಿ.ವಿ ಪ್ಯಾಟ್‌ ಪೇಪರ್‌ ಟ್ರಯಲ್‌ ಅನ್ನು ಇವಿಎಂ ಜೊತೆಗೆ ಹೊಂದಾಣಿಕೆ ಮಾಡುವ ಕಾರ್ಯದ ಚಿತ್ರೀಕರಣ ಮಾಡಲಾಗಿತ್ತು. ಆ ದೃಶ್ಯಾವಳಿಯನ್ನು ಒಳಗೊಂಡ ಒಂದು ಸಿ.ಡಿಯನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ’ ಎಂದರು.

‘ನ್ಯಾಯಾಲಯದ ಅನುಮತಿ ಮೇರೆಗೆ ಇವಿಎಂ ಇರಿಸಲಾಗಿದ್ದ ಸ್ಟ್ರಾಂಗ್‌ ರೂಂ ಅನ್ನು ತೆರೆದು ಪರಿಶೀಲಿಸಲಾಗಿದೆ. ಅಲ್ಲಿ ವಿ.ವಿ ಪ್ಯಾಟ್‌ ಪೇಪರ್‌ ಟ್ರಯಲ್‌ ಮತ್ತು ಇವಿಎಂ ಯಂತ್ರ ಹೊಂದಾಣಿಕೆ ಕಾರ್ಯದ ಚಿತ್ರೀಕರಣ ನಡೆಸಿದ ದೃಶ್ಯಾವಳಿಗಳನ್ನು ಒಳಗೊಂಡ ಮೂರು ಸಿ.ಡಿಗಳು ಲಭ್ಯವಾಗಿವೆ. ಮತ ಎಣಿಕೆ ವೇಳೆ ಅಭ್ಯರ್ಥಿಗಳ ಏಜೆಂಟರಿಗೆ ನೀಡಲಾಗಿದ್ದ ಫಾರಂ ನಂ.17(ಸಿ) ನಕಲು ಪ್ರತಿಯೂ ಲಭ್ಯವಾಗಿದೆ. ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಇನ್ನಷ್ಟು ಸಮಯ ನೀಡಬೇಕು’ ಎಂದು ಕೋರಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಸಿ.ಡಿ ಹಾಗೂ ಫಾರಂ ನಂ.17(ಸಿ) ನಕಲು ಪ್ರತಿಯನ್ನು ಇದೇ 19ರಂದು ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT