ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಕಾಲೇಜು: ಒಬ್ಬರಿಗೆ ಒಂದೇ ಹುದ್ದೆ–ಹೈಕೋರ್ಟ್‌

Published 28 ಮಾರ್ಚ್ 2024, 15:33 IST
Last Updated 28 ಮಾರ್ಚ್ 2024, 15:33 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಾಯತ್ತ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕರಿಗೆ ಆಸ್ಪತ್ರೆಯ ಬೇರೆ ವಿಭಾಗದ ಮುಖ್ಯಸ್ಥರು ಎಂದು ಹೆಚ್ಚುವರಿ ಹೊಣೆ ನೀಡುವಂತಿಲ್ಲ’ ಎಂದು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಶಿವಮೊಗ್ಗದ ಡಾ.ಎಸ್‌.ಶ್ರೀಧರ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್‌ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದ್ದು, ಶಿವಮೊಗ್ಗ ವೈದ್ಯಕೀಯ ಕಾಲೇಜಿನ ಟಿ.ಡಿ.ತಿಮ್ಮಪ್ಪ ಅವರನ್ನು ಒಂದು ವಿಭಾಗದ ಮುಖ್ಯಸ್ಥರನ್ನಾಗಿ(ಎಚ್ಒಡಿ) ನೇಮಕ ಮಾಡಿರುವುದನ್ನು, ‘ಅಕ್ರಮ ಹಾಗೂ ಕಾನೂನು ಬಾಹಿರ’ ಎಂದು ಸಾರಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್, ‘ಒಬ್ಬ ವ್ಯಕ್ತಿ ಎರಡು ಹುದ್ದೆಗಳನ್ನು ನಿರ್ವಹಿಸುವುದು ರಾಷ್ಟ್ರಿಯ ವೈದ್ಯಕೀಯ ಆಯೋಗದ ನಿಯಮಗಳಿಗೆ ವಿರುದ್ಧವಾದುದು ಮತ್ತು ಎರಡೂ ವಿಭಾಗಗಳಲ್ಲೂ ಪರಿಣಾಮಕಾರಿ ಹಾಗೂ ನಿಷ್ಪಕ್ಷಪಾತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಪ್ರತಿಪಾದಿಸಿದ್ದರು.

ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠ, ‘ರಾಷ್ಟ್ರೀಯ ವೈದ್ಯಕೀಯ ನಿಯಮಗಳಿಗೆ ವಿರುದ್ಧವಾಗಿ ಟಿ.ಡಿ.ತಿಮ್ಮಪ್ಪ ಅವರು ಇಎನ್‌ಟಿ ವಿಭಾಗದ ಎಚ್‌ಒಡಿಯ ಹೆಚ್ಚುವರಿ ಹೊಣೆಗಾರಿಕೆ ನಿರ್ವಹಿಸುವಂತಿಲ್ಲ’ ಎಂದು ಆದೇಶಿಸಿದೆ. ಅಂತೆಯೇ, ‘ವೈದ್ಯಕೀಯ ಕಾಲೇಜು ಎನ್‌ಎಂಸಿ ನಿಯಮಗಳಿಗೆ ಅನುಗುಣವಾಗಿ ಆಡಳಿತಾತ್ಮಕ ಮತ್ತು ಕ್ಲಿನಿಕಲ್ ಪಾತ್ರಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದೆ.

‘ವೈದ್ಯಕೀಯ ಅಧೀಕ್ಷಕರಾಗಿ ಆಸ್ಪತ್ರೆಯ ಆಡಳಿತಾತ್ಮಕ ಕೆಲಸಗಳ ಜೊತೆಗೆ ಬಜೆಟ್, ಸಿಬ್ಬಂದಿ, ಸೌಕರ್ಯಗಳೂ ಸೇರಿದಂತೆ ಆಸ್ಪತ್ರೆಯ ಸಮಗ್ರ ಕೆಲಸ ಕಾರ್ಯಗಳ ಮೇಲ್ವಿಚಾರಣೆ ನಡೆಸಬೇಕಾಗುತ್ತದೆ. ಅಂತಹವರಿಗೆ ಇಎನ್‌ಟಿ ವಿಭಾಗದ ಹೆಚ್ಚುವರಿ ಹೊಣೆ ವಹಿಸಿದರೆ ಆಗ ಶಸ್ತ್ರಚಿಕಿತ್ಸೆ, ವೈದ್ಯಕೀಯ ಚಿಕಿತ್ಸೆ ಸೇರಿದ ಇನ್ನಿತರ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿ ಬರುತ್ತದೆ. ಹೀಗಾದರೆ, ಎರಡೂ ಹುದ್ದೆಗಳನ್ನು ಒಬ್ಬರೇ ಸಮರ್ಪಕವಾಗಿ ನಿರ್ವಹಿಸಲಾಗದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಕಾಲೇಜಿನ ವೈದ್ಯಕೀಯ ಅಧೀಕ್ಷಕ ತಿಮ್ಮಪ್ಪ ಅವರಿಗೆ ಇಎನ್‌ಟಿ ವಿಭಾಗದ ಎಚ್‌ಒಡಿ ಆಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಿ 2024ರ ಜನವರಿ 31ರಂದು ಅದೇಶಿಸಲಾಗಿತ್ತು. ಅರ್ಜಿದಾರರು ಇದನ್ನು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT