ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಾಕ್’ ಹಾರಾಟಕ್ಕೆ ಹೊರಟು ನಿಂತ ಮೇಘನಾ ಮನದಾಳ

ಐಎಎಫ್‌ ಯುದ್ಧ ವಿಮಾನದ ‘ಸಾರಥಿ’ಯಾದ ಅನುಭವ ಬಿಚ್ಚಿಟ್ಟ ಮೇಘನಾ
Last Updated 19 ಜೂನ್ 2018, 20:46 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವಾಯು ಸೇನೆಯ (ಐಎಎಫ್‌) ಯುದ್ಧ ವಿಮಾನಗಳನ್ನು ಹಾರಾಟ ನಡೆಸುವ ‘ಫ್ಲೈಯಿಂಗ್‌ ಆಫೀಸರ್‌’ ರ‍್ಯಾಂಕ್‌ ಪಡೆದಿರುವ ಚಿಕ್ಕಮಗಳೂರಿನ ಮೇಘನಾ ಶಾನುಭೋಗ್‌, ಬೀದರ್‌ನಲ್ಲಿರುವ ವಾಯುಸೇನೆ ಅಕಾಡೆಮಿಯಲ್ಲಿ ಜುಲೈ 1ರಿಂದ ಇಂಗ್ಲೆಂಡ್‌ ನಿರ್ಮಿತ ಸುಧಾರಿತ ಯುದ್ಧ ವಿಮಾನ ‘ಹಾಕ್‌’ನಲ್ಲಿ ಹಾರಾಟ ತರಬೇತಿ ಪಡೆಯಲು ಹೊರಟು ನಿಂತಿದ್ದಾರೆ.

ಆಂಧ್ರಪ್ರದೇಶದ ದಿಂಡಿಗಲ್‌ ಏರ್‌ಫೋರ್ಸ್‌ ಅಕಾಡೆಮಿಯಲ್ಲಿ (ಎಎಫ್ಎ) ‘ಫೈಟರ್‌ ಫ್ಲೈಟ್‌’ ತರಬೇತಿ ಮುಗಿಸಿರುವ 23ರ ಹರೆಯದ ಮೇಘನಾ, ಭಾರತೀಯ ವಾಯುಸೇನೆ ಸೇರಿದ ಆರನೇ ಮಹಿಳಾ ಫೈಟರ್‌ ಪೈಲಟ್‌. ದಕ್ಷಿಣ ಭಾರತದಿಂದ ಈ ಸಾಧನೆ ಮಾಡಿದ ಮೊದಲಿಗರು. ಯುದ್ಧ ವಿಮಾನದ ‘ಸಾರಥಿ’ಯಾದ ಅನುಭವಗಳನ್ನು ಅವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

* ಪೈಲಟ್ ಆಗಬೇಕೆಂಬ ಕನಸು ಸರಿ. ಆದರೆ, ‘ಫೈಟರ್‌ ಪೈಲಟ್‌’ ಬಯಕೆ ಮೂಡಿದ್ದು ಹೇಗೆ?

ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳಿಗೆ ಮಹಿಳಾ ಪೈಲಟ್‌ ನೇಮಕಾತಿ ಎರಡು ವರ್ಷದ ಹಿಂದೆಯಷ್ಟೆ ಆರಂಭವಾಗಿದೆ. ಮೊದಲ ಮಹಿಳಾ ಪೈಲಟ್‌ಗಳಾಗಿ ತರಬೇತಿ ಪಡೆದು ವಾಯು ಸೇನೆ ಸೇರಿರುವ ಮೂವರು (2016ರ ಜೂನ್‌ನಲ್ಲಿ ತರಬೇತಿ ಮುಗಿಸಿದ ಮೋಹನಾ ಸಿಂಗ್‌, ಭಾವನಾ ಕಾಂತ್‌, ಅವನಿ ಚತುರ್ವೇದಿ) ನನಗೆ ಆ ನಿಟ್ಟಿನಲ್ಲಿ ಆಸಕ್ತಿ ಮೂಡಲು ಪ್ರೇರಣೆ. ಯುದ್ಧ ವಿಮಾನದ ಪೈಲಟ್‌ ಆಗಬೇಕೆಂಬ ಕನಸು, ಗುರಿ ಸ್ಪಷ್ಟವಾಗಲು ಅವರೇ ಕಾರಣ.

* ಫ್ಲೈಟ್ ಕೆಡೆಟ್‌ ತರಬೇತಿ ಪಡೆದ ಅನುಭವ ಹೇಗಿತ್ತು?

2017 ಜನವರಿಯಲ್ಲಿ ದಿಂಡಿಗಲ್‌ ಏರ್‌ಫೋರ್ಸ್ ಅಕಾಡೆಮಿ ಸೇರಿದ ನಾನು, ಅಲ್ಲಿ ಒಂದೂವರೆ ವರ್ಷ ತರಬೇತಿ ಪಡೆದೆ. ಅದು ತಲಾ ಆರು ತಿಂಗಳ ಅವಧಿಯ, ಮೂರು ಹಂತದ ತರಬೇತಿ. ಮೊದಲ ಹಂತ ಪಾಠ ಹಾಗೂ ಓದಿಗೆ ಸೀಮಿತ. ನಂತರ ಆರು ತಿಂಗಳು ಸ್ವಿಸ್ ನಿರ್ಮಿತ ಯುದ್ದ ವಿಮಾನ ‘ಪಿಲಂಟಸ್’ನಲ್ಲಿ ಹಾರಾಟ ತರಬೇತಿ. 60 ಗಂಟೆ ಆ ವಿಮಾನದ ಹಾರಾಟ ನಡೆಸಿದ್ದೇನೆ. 15ನೇ ಬಾರಿಯ ಹಾರಾಟದಲ್ಲಿ ಹಿರಿಯ ಇನ್‌ಸ್ಪೆಕ್ಟರ್‌ ಜೊತೆಗಿರುತ್ತಾರೆ. ಆ ಪರೀಕ್ಷೆಯಲ್ಲಿ ತೇರ್ಗಡೆಯಾದರೆ 16ನೇ ಬಾರಿಯ ಹಾರಾಟವನ್ನು ಏಕಾಂಗಿಯಾಗಿ ಮಾಡಬೇಕು. 20 ನಿಮಿಷ ಅವಧಿಯ ಆ ಯಾನ, ನನ್ನ ಜೀವನದ ಮೊದಲ ಏಕಾಂಗಿ ಹಾರಾಟ. ಕೊನೆಯ ಆರು ತಿಂಗಳು ಭಾರತ ನಿರ್ಮಿತ ‘ಕಿರಣ್‌’ ಯುದ್ಧ ವಿಮಾನ ಹಾರಾಟ ತರಬೇತಿ. ಅದರಲ್ಲೂ 16ನೇ ಹಾರಾಟ ಏಕಾಂಗಿಯಾಗಿ ಮಾಡಬೇಕು. ಆ ವಿಮಾನದಲ್ಲಿ 90 ಗಂಟೆ ಹಾರಾಟ ಮಾಡಿದ್ದೇನೆ.

ರಸ್ತೆ ದಾಟುವುದರಲ್ಲಿಯೂ ಅಪಾಯ ಇದೆ!

* ಪೈಲಟ್‌ ಕೆಲಸ ಅಪಾಯಕಾರಿ ಅನಿಸಿಲ್ಲವೇ?

ಅಪಾಯ ಯಾವುದರಲ್ಲಿ ಇಲ್ಲ ಹೇಳಿ. ರಸ್ತೆ ದಾಟುವುದರಲ್ಲೂ ಇದೆ. ಧೈರ್ಯ ಇದ್ದರಷ್ಟೆ ಸಾಧನೆ ಸಾಧ್ಯ. ವಾಯು ಸೇನೆಯಲ್ಲೇ ಮುಂದುವರಿದು ಸಾಧಿಸಬೇಕು ಎಂಬುವುದು ನನ್ನ ಆಸೆ ಇದೆ. ಗುರಿ ತಲುಪುವ ವಿಶ್ವಾಸವೂ ಇದೆ. ನನ್ನ ಈ ಸಾಧನೆಗೆ ತಂದೆ (ವಕೀಲ ಎಂ.ಕೆ. ರಮೇಶ್‌) ಮತ್ತು ತಾಯಿ (ಉಡುಪಿ ಜಿಲ್ಲಾ ಗ್ರಾಹಕರ ‌ನ್ಯಾಯಾಲಯದ ನ್ಯಾಯಾಧೀಶೆ ಸಿ.ವಿ. ಶೋಭಾ) ಕಾರಣ. ಅವರಿಬ್ಬರೂ ಸಂಪೂರ್ಣ ಬೆಂಬಲ ನೀಡಿದ್ದರು.

* ತರಬೇತಿಯಲ್ಲಿ ನಿಮ್ಮ ಜೊತೆ ಎಷ್ಟು ಮಂದಿ ಇದ್ದರು?

ದಿಂಡಿಗಲ್‌ ವಾಯುದಳ ಅಕಾಡೆಮಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಹೊಸ ತಂಡ ತರಬೇತಿ ಪಡೆಯುತ್ತದೆ. ನಮ್ಮ ತಂಡದಲ್ಲಿ ಒಟ್ಟು 113 ಮಂದಿಯಲ್ಲಿ 13 ಜನ ಮಹಿಳೆಯರಿದ್ದೆವು. ಎಲ್ಲರೂ ‘ಫ್ಲೈಯಿಂಗ್‌ ಆಫೀಸರ್‌’ ರ‍್ಯಾಂಕ್‌ ಪಡೆ
ದಿದ್ದೇವೆ. ಆದರೆ, ನಾನು ಮಾತ್ರ ಪೈಲಟ್‌ ಆದೆ. ಜೊತೆಗಿದ್ದ ಇತರ 12 ಮಹಿಳೆಯರು ವಾಯುದಳದಲ್ಲಿ ಇತರ ವಿಭಾಗಗಳಲ್ಲಿ ಕೆಲಸ ಮಾಡಲಿದ್ದಾರೆ. ಈ ತರಬೇತಿ ತಂಡದಲ್ಲಿ ದಕ್ಷಿಣ ಭಾರತ ದಿಂದ ಆಯ್ಕೆಯಾದವಳು ನಾನು ಮಾತ್ರ.

* ಗಗನದ ಕಡೆಗಿನ ಒಲವು ಮೂಡಲು ಕಾರಣ?

ಚಿಕ್ಕಂದಿನಿಂದಲೇ ಅಡ್ವೆಂಚರ್‌ ಕ್ಷೇತ್ರದ ಕಡೆಗೆ ಒಲವು ಇತ್ತು. ಎಂಜಿನಿಯರಿಂಗ್‌ ಓದುತ್ತಿದ್ದಾಗ ಕಾಲೇಜಿನಲ್ಲಿ ‘ಸಾಹಸ್‌’ ಎಂಬ ಪರ್ವತಾರೋಹಣ ಕ್ಲಬ್‌ ಸ್ಥಾಪಿಸಿದ್ದೆ. ಗೋವಾಕ್ಕೆ ತೆರಳಿ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದೆ. ನರೇಂದ್ರ ಎಂಬುವರ ಮಾರ್ಗದರ್ಶನದಲ್ಲಿ ಪ್ಯಾರಾ ಗ್ಲೈಡಿಂಗ್‌ ಅನುಭವ ಪಡೆದೆ. ಆ ಸಾಹಸ ನನ್ನಲ್ಲಿ ಆಕಾಶಕ್ಕೆ ಹಾರುವ ಧೈರ್ಯ ತುಂಬಿತು.

* ನಿಮ್ಮ ಬಾಲ್ಯದ ದಿನಗಳು, ತರಬೇತಿಗೆ ಆಯ್ಕೆಯಾದ ಬಗ್ಗೆ...

ಚಿಕ್ಕಮಗಳೂರು ನಗರದ ಮರ್ಲೆ ಗ್ರಾಮ ಹುಟ್ಟೂರು. ಸ್ಥಳೀಯ ಮಹರ್ಷಿ ವಿದ್ಯಾಮಂದಿರ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಉಡುಪಿಯ ಜಿಲ್ಲೆ ಬ್ರಹ್ಮಾವರದ ‘ಲಿಟಲ್ ರಾಕ್‌ ಇಂಡಿಯನ್‌ ಸ್ಕೂಲ್‌’ನಲ್ಲಿ 12ನೇ ತರಗತಿವರೆಗೆ ಓದಿದೆ. ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜು ಆಫ್‌ ಎಂಜಿನಿಯರಿಂಗ್‌ ಸಂಸ್ಥೆಯಲ್ಲಿ ಮಾಹಿತಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದೆ. ಆನಂತರ ಏರ್‌ ಫೋರ್ಸ್‌ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದ ಮೊದಲ ಯತ್ನದಲ್ಲೇ ಆಯ್ಕೆಯಾಗಿ, ಫ್ಲೈಟ್ ಕೆಡೆಟ್‌ ತರಬೇತಿ ಪಡೆದೆ.

* ಇತರ ಹವ್ಯಾಸಗಳು...

ನಾನು ಸಂಗೀತ ಪ್ರೇಮಿ. ತರಗತಿಗೂ ಹೋಗಿದ್ದೇನೆ. ಸಾಹಸ ಕ್ರೀಡೆ, ಚಟುವಟಿಕೆ ಕಡೆಗೆ ಆಸಕ್ತಿ– ಕುತೂಹಲ. ಅದರಲ್ಲೂ ಪರ್ವತಾರೋಹಣ, ಟ್ರಕ್ಕಿಂಗ್‌ ಬಲು ಇಷ್ಟ.

* ಯುದ್ಧ ವಿಮಾನದ ಪೈಲಟ್‌ ಆಗಬೇಕೆಂದು ಕನಸು ಕಾಣುವವರಿಗೆ ನಿಮ್ಮ ಸಲಹೆ?

ಪೋಷಕರಾದವರು ಮೊದಲು ಬೆನ್ನು ತಟ್ಟಬೇಕು. ಅವರು ಪ್ರೇರಣೆ ಆಗಬೇಕು. ಜೊತೆಗೆ ಈ ಕನಸು ಇರುವ ವರಲ್ಲಿ ಗುರಿಯೂ ಸ್ಪಷ್ಟ ಇರಬೇಕು, ಛಲವೂ ಬೇಕು. ಪರಿಶ್ರಮದಿಂದ ಸಾಧಿಸುವುದು ಕಷ್ಟವೇನೂ ಅಲ್ಲ. ಧೈರ್ಯ ತಾನಾಗಿ ತುಂಬಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT