ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ರಾಷ್ಟ್ರೀಯ ಯೋಜನೆಗೆ ಶೀಘ್ರ ಒಪ್ಪಿಗೆ: ಸಚಿವ ಕಾರಜೋಳ

Last Updated 28 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪ್ರಕಟಿಸುವ ಸಂಬಂಧ ಕೇಂದ್ರ ಸರ್ಕಾರ ಮುಂಬರುವ
ಸಚಿವ ಸಂಪುಟ ಸಭೆಯಲ್ಲಿತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದು ಜಲಸಂಪನ್ಮೂಲ ಸಚಿವ ಎಂ.ಗೋವಿಂದ ಕಾರಜೋಳ ಹೇಳಿದ್ದಾರೆ.

ಈಗಾಗಲೇ ಯೋಜನೆಗೆ ಕೇಂದ್ರದ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ರಾಷ್ಟ್ರೀಯ ಯೋಜನೆಯ ಮಾನ್ಯತೆ
ಸಿಕ್ಕಿದ ಬಳಿಕ ಕೇಂದ್ರದಿಂದ ಶೇ 60ರಷ್ಟು ಅನುದಾನ ಸಿಗುತ್ತದೆ. ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದ ಬಳಿಕ ಆದಷ್ಟು ಬೇಗನೇ ಅಧಿಸೂಚನೆಯೂ ಹೊರಬೀಳಲಿದೆ ಎಂದು ಅವರು ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಒಟ್ಟು ₹23 ಸಾವಿರ ಕೋಟಿವೆಚ್ಚವಾಗಲಿದೆ. ಸದ್ಯ ₹16 ಸಾವಿರ ಕೋಟಿ ವೆಚ್ಚದ ಕೆಲಸ ಬಾಕಿ ಇದೆ. ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾದ ಬಳಿಕ ಉಳಿಯುವ ಒಟ್ಟು ಕಾಮಗಾರಿಯ ವೆಚ್ಚದಲ್ಲಿ ಶೇ 60ರಷ್ಟನ್ನು ಕೇಂದ್ರ ಸರ್ಕಾರವೇ ನೀಡುತ್ತದೆ. ಕೇಂದ್ರದಿಂದ ಸುಮಾರು ₹5,300 ಕೋಟಿ ಸಿಗುವ ನಿರೀಕ್ಷೆ ಇದೆ ಎಂದು ಕಾರಜೋಳ
ವಿವರಿಸಿದರು.

ಕೊಪ್ಪಳದ ನವಲಿ ಬಳಿ ತುಂಗಭದ್ರಾ ನದಿಗೆ ಸಮತೋಲನ ಜಲಾಶಯ ನಿರ್ಮಾಣಕ್ಕೆ ₹13 ಸಾವಿರ ಕೋಟಿ ವೆಚ್ಚದ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಈ ಯೋಜನೆಗೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳೂ ಪಾಲುದಾರರಾಗಿವೆ. ಎಲ್ಲ ರಾಜ್ಯಗಳ ಸಮ್ಮತಿಯೊಂದಿಗೆ ಜಾರಿಗೊಳಿಸುವ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದರು.

ನದಿ ಮಾಲಿನ್ಯ ತಡೆಯಲು ಸೂಚನೆ

ರಾಜ್ಯದಲ್ಲಿ ನದಿಗಳ ಮಾಲಿನ್ಯ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ಕಾವೇರಿ ನದಿಯೂ ಸೇರಿ ರಾಜ್ಯದ ಬಹುತೇಕ ನದಿಗಳು ಮಲಿನವಾಗಿವೆ. ಪಟ್ಟಣಗಳು, ಸ್ಥಳೀಯ ಸಂಸ್ಥೆಗಳು ಮತ್ತು ಕೈಗಾರಿಕಾ ತ್ಯಾಜ್ಯಗಳು ನದಿ ನೀರನ್ನು ಸೇರುತ್ತಿವೆ. ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಾಲ ಕಾಲಕ್ಕೆ ತಪಾಸಣೆ ನಡೆಸುತ್ತಾರೆ, ಆದರೆ ಅದನ್ನು ತಡೆಗಟ್ಟಲು ಪ್ರಯತ್ನಿಸುತ್ತಿಲ್ಲ ಎಂದು ಸಚಿವರು ವಿವರಿಸಿದರು.

ಮಲಿನ ನೀರನ್ನು ಸಂಸ್ಕರಿಸಲು ಸಾಕಷ್ಟು ಅನುದಾನ ಮತ್ತು ಕಾರ್ಯಕ್ರಮಗಳು ಇವೆ. ಆದರೆ, ನದಿ ಕಲುಷಿತಗೊಳ್ಳುವುದನ್ನು ತಡೆಯುವ ಪ್ರಯತ್ನ ನಡೆದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ, ನದಿ ಕಲುಷಿತಗೊಳ್ಳುವುದನ್ನು ತಡೆಯಲು ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT