ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಿಕ್ ಬಸ್‌ ಖರೀದಿ: ಅಧಿಕಾರಿಗಳ ವಿರುದ್ಧ ಸಚಿವ ಡಿ.ಸಿ.ತಮ್ಮಣ್ಣ ಆರೋಪ

ಬಿಎಂಟಿಸಿ ಅಧಿಕಾರಿಗಳಿಂದ ಒತ್ತಡ: ಡಿ.ಸಿ.ತಮ್ಮಣ್ಣ
Last Updated 9 ಅಕ್ಟೋಬರ್ 2018, 20:17 IST
ಅಕ್ಷರ ಗಾತ್ರ

ಬೆಂಗಳೂರು:‘ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಬಸ್‌ ಕಂಪನಿ ಜತೆಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಬಿಎಂಟಿಸಿ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಈ ಅಧಿಕಾರಿಗಳು ಲಂಚ ಪಡೆದಿರಬಹುದು’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಮ್ಮ ಇಲಾಖೆಯ
ಅಧಿಕಾರಿಗಳ ವಿರುದ್ಧವೇ ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ನಗರದಲ್ಲಿ ಓಡಿಸಲು 80 ಬಸ್‌ಗಳ ಖರೀದಿಗೆ ಕಳೆದ ಸರ್ಕಾರ ಟೆಂಡರ್ ಕರೆದಿತ್ತು. ಹೈದರಾಬಾದ್‌ ಕಂಪನಿಗೆ ಟೆಂಡರ್‌ ಕೊಟ್ಟಿದ್ದರು. ಈ ಕಂಪನಿ 80 ಬಸ್‌ಗಳನ್ನು ನಿರ್ಮಿಸಿದೆ. ಈ ಬಸ್‌ಗಳನ್ನು ಖರೀದಿಸುವಂತೆ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ. ಲಂಚ ತೆಗೆದುಕೊಂಡಿದ್ದೀರಾ ಎಂದು ಅಧಿಕಾರಿಗಳ ಬಳಿ ಕೇಳಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಒಪ್ಪಂದ ಮಾಡಿಕೊಂಡರೆ ನಮಗೆ ನಷ್ಟ. ಬಸ್‌ ಕಂಪನಿಗೆ ನಾವೇ ಸಿಬ್ಬಂದಿ ಒದಗಿಸಬೇಕಿದೆ. ಹೈದರಾಬಾದ್ ಕಂಪನಿಗೆ ಅವಕಾಶ ನೀಡಿದರೆ ಶಾಂತಿನಗರದ ಬಸ್ ಡಿಪೊವನ್ನು ಅವರಿಗೆ ನೀಡಬೇಕಾಗುತ್ತದೆ. ಸರ್ಕಾರದ ಅತ್ಯಮೂಲ್ಯ ಜಮೀನು ಖಾಸಗಿ ಪಾಲಾಗುತ್ತದೆ. ಹಾಗಾಗಿ, ಬಸ್‌ ಕಂಪನಿ ಜತೆಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ‘ಸರ್ಕಾರದಿಂದಲೇ ಎಲೆಕ್ಟ್ರಿಕ್‌ ಬಸ್‌ ಓಡಿಸಲು ಚಿಂತನೆ ನಡೆಸಲಾಗಿದೆ’ ಎಂದು ಹೇಳಿದರು.

ಸಭೆ ಮುಂದೂಡಿಕೆ: ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯಬೇಕಿದ್ದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಯಿತು. ಈ ಸಭೆಯಲ್ಲಿ ದರ ಏರಿಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದರು. ಉಪಚುನಾವಣೆ ವೇಳೆ ದರ ಏರಿಕೆ ಮಾಡಿದರೆ ಕಷ್ಟ ಎಂಬ ಕಾರಣಕ್ಕೆ ಕುಮಾರಸ್ವಾಮಿ ಸಭೆ ಮುಂದೂಡುವಂತೆ ಸೂಚಿಸಿದರು ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT