ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾ‌ಲ್ಮೀಕಿ ನಿಗಮದಲ್ಲಿ ₹87 ಕೋಟಿ ಅವ್ಯವಹಾರ: ಅಕ್ರಮ ಒಪ್ಪಿದ ನಾಗೇಂದ್ರ

Published 28 ಮೇ 2024, 23:07 IST
Last Updated 28 ಮೇ 2024, 23:07 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ನಡೆದಿರುವುದನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರು ಒಪ್ಪಿಕೊಂಡಿದ್ದಾರೆ. ಆದರೆ, ‘ಈ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ಆದ್ದರಿಂದ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ’ ಎಂದು ಅವರು ಹೇಳಿದ್ದಾರೆ. 

ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಅವರ ಅತ್ಮಹತ್ಯೆಯ ಬೆನ್ನಲ್ಲೇ ವಿರೋಧ ಪಕ್ಷಗಳು ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿದ್ದು, ಪ್ರಕರಣದ ಬಗ್ಗೆ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.

‘ನಿಗಮದ ಮುಖ್ಯ ಖಾತೆಯಿಂದ ಯೂನಿಯನ್‌ ಬ್ಯಾಂಕ್‌ನ ಎಂ.ಜಿ. ರಸ್ತೆ ಶಾಖೆಯ ಅನಧಿಕೃತ ಖಾತೆಗೆ ಮೂರು ಬಾರಿ ಹಣವನ್ನು ವರ್ಗಾವಣೆ ಮಾಡಲಾಗಿದೆ. ನಿಗಮದ ಮುಖ್ಯ ಖಾತೆಯಲ್ಲಿ 2023–24 ಹಾಗೂ 2024-25ನೇ ಸಾಲಿನ ಯೋಜನೆಗಳಿಗೆ ಮೀಸಲಿಟ್ಟ ₹187 ಕೋಟಿ ಮೊತ್ತದಲ್ಲಿ ₹87 ಕೋಟಿ ವರ್ಗಾವಣೆ ಮಾಡಿದ ವಿಷಯ ನನ್ನ ಹಾಗೂ ನಿಗಮದ ಅಧ್ಯಕ್ಷರ ಗಮನಕ್ಕೂ ಬಂದಿಲ್ಲ’ ಎಂದು ಅವರು ಹೇಳಿದರು.

‘ದೊಡ್ಡ ಮೊತ್ತದ ಹಣವನ್ನು ಮುಖ್ಯ ಖಾತೆಯಿಂದ ಬೇರೆ ಖಾತೆಗೆ ವರ್ಗಾವಣೆ ಮಾಡಲು ಆಡಳಿತ ಮಂಡಳಿಯ ಅನುಮೋದನೆ ಪಡೆಯಬೇಕು. ನೀತಿ ಸಂಹಿತೆಯ ಕಾರಣ ಸರ್ಕಾರವೂ ಆದೇಶ ಮಾಡಲು ಸಾಧ್ಯವಿಲ್ಲ. ಸಹಿ ನಕಲು ಮಾಡಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರೇ ದೂರು ನೀಡಿದ್ದಾರೆ. ಕೆಳ ಹಂತದ ಅಧಿಕಾರಿಗೆ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡುವ ಅಧಿಕಾರ ಹೇಗೆ ನೀಡಲಾಯಿತು? ಯಾರದ್ದಾದರೂ ಒತ್ತಡವಿತ್ತೇ ಎನ್ನುವ ಕುರಿತೂ ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದರು.

‘ಅಧಿಕಾರಿಗಳ ಗಮನಕ್ಕೆ ತಾರದೇ ಸಹಿ ನಕಲು ಮಾಡಿ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡಿರುವ ಕುರಿತು ಆರ್ಥಿಕ ಇಲಾಖೆಯ ಅಧಿಕಾರಿಗಳ ತಂಡ ನಡೆಸಿದ ಪರಿಶೀಲನೆಯಲ್ಲೂ ಬೆಳಕಿಗೆ ಬಂದಿದೆ. ಆದರೆ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಸಹಿಯ ಸತ್ಯಾಸತ್ಯತೆಯೂ ಗೊತ್ತಾಗಲಿದೆ’ ಎಂದು ಅಭಿಪ್ರಾಯಪಟ್ಟರು. 

‘ನಿಗಮದ ಕೇಂದ್ರ ಕಚೇರಿಯ ಅಧೀಕ್ಷಕ ಚಂದ್ರಶೇಖರನ್‌ ಅವರ ಆತ್ಮಹತ್ಯೆ ನೋವು ತಂದಿದೆ. ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜೆ. ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್‌ ಹಾಗೂ ಬ್ಯಾಂಕ್ ವ್ಯವಸ್ಥಾಪಕಿ ಶುಚಿಸ್ಮಿತಾ ರವುಲ್‌ ನನ್ನ ಸಾವಿಗೆ ನೇರ ಕಾರಣ ಎಂದು ಆತ್ಮಹತ್ಯೆಗೂ ಮೊದಲು ಬರೆದ ಪತ್ರದಲ್ಲಿ ಚಂದ್ರಶೇಖರನ್‌ ಉಲ್ಲೇಖಿಸಿದ್ದಾರೆ. ಘಟನೆ ಬೆಳಕಿಗೆ ಬಂದ ತಕ್ಷಣವೇ ಮುಖ್ಯಮಂತ್ರಿ ವರದಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್‌ ವಿರುದ್ಧವೂ ದೂರು ದಾಖಲಾಗಿದೆ. ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕ, ಬ್ಯಾಂಕ್‌ ಅಧಿಕಾರಿ ಸೇರಿದಂತೆ ಯಾರೇ ಭಾಗಿಗಳಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ನಾಗೇಂದ್ರ ಹೇಳಿದರು.


ಹಣ ಮರಳಿಸಲು ಅಂತಿಮ ಗಡುವು  

ವರ್ಗಾವಣೆಯಾಗಿರುವ ಹಣವನ್ನು ನಿಗಮದ ಮುಖ್ಯ ಖಾತೆಗೆ ತಕ್ಷಣ ಮರಳಿಸುವಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ₹28 ಕೋಟಿ ಬಂದಿದೆ. ಉಳಿದ ಹಣ ಮರಳಿಸಲು ಗಡುವು ನೀಡಲಾಗಿದೆ ಎಂದು ವಿವರಿಸಿದರು.

ಸಿಐಡಿ ತಂಡ ಭೇಟಿ: ಮಾಹಿತಿ ಸಂಗ್ರಹ

ಶಿವಮೊಗ್ಗ: ಇಲ್ಲಿನ ವಿನೋಬನಗರದ ಕೆಂಚಪ್ಪ ಲೇಔಟ್‌ನಲ್ಲಿರುವ ಚಂದ್ರಶೇಖರನ್‌ ನಿವಾಸಕ್ಕೆ ಡಿವೈಎಸ್‌ಪಿ ರಫೀಕ್ ನೇತೃತ್ವದಲ್ಲಿ ಸಿಐಡಿ ಅಧಿಕಾರಿಗಳ ತಂಡ ಮಂಗಳವಾರ ಸಂಜೆ ಭೇಟಿ ನೀಡಿತು.

ಚಂದ್ರಶೇಖರನ್‌ ಪತ್ನಿ ಕವಿತಾ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಚರ್ಚಿಸಿದ ಅಧಿಕಾರಿಗಳು ಅವರ ಪತಿಯ ಸಾವಿನ ಕುರಿತು, ಅದಕ್ಕೂ ಹಿಂದಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದರು. ನಂತರ ವಿನೋಬನಗರ ಪೊಲೀಸ್ ಠಾಣೆಯ ಅಧಿಕಾರಿಗಳಿಂದಲೂ ಮಾಹಿತಿ ಕಲೆಹಾಕಿ ತೆರಳಿದರು.

‘ಸಿದ್ದರಾಮಯ್ಯ ರಾಜೀನಾಮೆ ನೀಡಲಿ’

ಈ ಲೂಟಿಯಲ್ಲಿ ಮುಖ್ಯಮಂತ್ರಿ ಸಮೇತ ಎಲ್ಲ ಸಚಿವರೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸಚಿವರೇ ಕಾರಣರಾಗಿದ್ದಾರೆ. ಇದು ₹187 ಕೋಟಿ ಹಗರಣ. ಇದಕ್ಕೆ ಯಾರೆಲ್ಲ ಕಾರಣರೆಂದು ಅಧಿಕಾರಿ ಮರಣಪೂರ್ವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಿದರು.

ಈ ಹಗರಣಕ್ಕೆ ನೇರವಾಗಿ ಸರ್ಕಾರವೇ ಹೊಣೆ. ಈ ಹಿಂದೆ ಕೆ.ಎಸ್‌.ಈಶ್ವರಪ್ಪ ಅವರ ರಾಜೀನಾಮೆ ಕೇಳಿದ್ದ ಕಾಂಗ್ರೆಸ್‌, ಸಚಿವರು ಮತ್ತು ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಹಣ ಮರಳಿಸಲು ಅಂತಿಮ ಗಡುವು  

ವರ್ಗಾವಣೆಯಾಗಿರುವ ಹಣವನ್ನು ನಿಗಮದ ಮುಖ್ಯ ಖಾತೆಗೆ ತಕ್ಷಣ ಮರಳಿಸುವಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ₹28 ಕೋಟಿ ಬಂದಿದೆ. ಉಳಿದ ಹಣ ಮರಳಿಸಲು ಗಡುವು ನೀಡಲಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT