ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಕ್ಷೇತ್ರ: ಪುಟ್ಟಣ್ಣ ಆಧಿಪತ್ಯಕ್ಕೆ ‘ಮೈತ್ರಿ’ ಸಡ್ಡು

ಕ್ಷೇತ್ರ ಮರಳಿ ಪಡೆಯಲು ಜೆಡಿಎಸ್‌ ಪೈಪೋಟಿ– ಬಿಜೆಪಿ ಸಾಥ್‌
Published 9 ಫೆಬ್ರುವರಿ 2024, 19:38 IST
Last Updated 9 ಫೆಬ್ರುವರಿ 2024, 19:38 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಫೆ.16ರಂದು ನಡೆಯಲಿರುವ ಉಪ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಕ್ಷೇತ್ರದ ಮೇಲಿನ ಎರಡು ದಶಕಗಳ ಆಧಿಪತ್ಯವನ್ನು ಈಗ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಪುಟ್ಟಣ್ಣ ಉಳಿಸಿಕೊಳ್ಳುವರೇ ಎನ್ನುವತ್ತ ಎಲ್ಲರ ಚಿತ್ತ ನೆಟ್ಟಿದೆ.

ಜೆಡಿಎಸ್‌–ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಕಣಕ್ಕೆ ಇಳಿದಿದ್ದಾರೆ. 2020ರ ಚುನಾವಣೆಯಲ್ಲೂ ಈ ಇಬ್ಬರು ಮುಖಾಮುಖಿಯಾಗಿದ್ದವರು. ಬಿಜೆಪಿಯಿಂದ ಪುಟ್ಟಣ್ಣ, ಜೆಡಿಎಸ್‌ನಿಂದ ರಂಗನಾಥ್‌ ಪೈಪೋಟಿ ನಡೆಸಿದ್ದರು. ಅದೃಷ್ಟ ಪುಟ್ಟಣ್ಣ ಅವರಿಗೆ ಒಲಿದಿತ್ತು. ಈ ಬಾರಿ ಎರಡು ಪಕ್ಷಗಳ ಬೆಂಬಲ ರಂಗನಾಥ್‌ಗೆ ದೊರೆತಿದೆ. ಇಬ್ಬರ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದ್ದು, ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಕಾಂಗ್ರೆಸ್‌ ಹಾಗೂ ಮೈತ್ರಿ ಪಕ್ಷಗಳ ಪ್ರಮುಖ ನಾಯಕರೇ ಅಖಾಡಕ್ಕೆ ಇಳಿದಿದ್ದಾರೆ. 

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೃಹತ್‌ ಬೆಂಗಳೂರು ನಗರ ಪಾಲಿಕೆಯ ಕೇಂದ್ರ, ಉತ್ತರ ಹಾಗೂ ದಕ್ಷಿಣ ಭಾಗಗಳ ಜತೆಗೆ ರಾಮನಗರ ಜಿಲ್ಲೆಯ ವ್ಯಾಪ್ತಿಯನ್ನು ಬೆಂಗಳೂರು ಶಿಕ್ಷಕರ ಕ್ಷೇತ್ರ ಒಳಗೊಂಡಿದೆ. ಶಿಕ್ಷಕರು ಮತದಾರರಾಗಿರುವ ಈ ಕ್ಷೇತ್ರದಿಂದ 2002ರಲ್ಲಿ ಸ್ಪರ್ಧಿಸಿದ್ದ ಪುಟ್ಟಣ್ಣ ಮೊದಲ ಪ್ರಯತ್ನದಲ್ಲೇ ಗೆಲುವು ಪಡೆದು ವಿಧಾನ ಪರಿಷತ್‌ ಪ್ರವೇಶಿಸಿದ್ದರು. ಜೆಡಿಎಸ್‌ ಅಭ್ಯರ್ಥಿಯಾಗಿ ಮೊದಲ ಅವಧಿಯಲ್ಲಿ ವಿಜಯಮಾಲೆ ಧರಿಸಿದ್ದ ಅವರು ನಂತರ 2008 ಹಾಗೂ 2014ರಲ್ಲೂ ಜೆಡಿಎಸ್‌ನಿಂದಲೇ ಕಣಕ್ಕೆ ಇಳಿದು ಸತತ ಮೂರು ಬಾರಿ ವಿಜಯಪತಾಕೆ ಹಾರಿಸಿದ್ದರು. 2020ರಲ್ಲಿ ಜೆಡಿಎಸ್‌ ತೊರೆದು ಬಿಜೆಪಿ ಸೇರಿ ನಾಲ್ಕನೇ ಬಾರಿ ಸ್ಪರ್ಧಿಸಿದಾಗಲೂ ಅವರಿಗೇ ಅದೃಷ್ಟ ಒಲಿದಿತ್ತು. 

2023ರ ವಿಧಾನಸಭಾ ಚುನಾವಣೆಗೂ ಮುನ್ನ ವಿಧಾನ ಪರಿಷತ್‌ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ರಾಜಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದರು. ವಿಧಾನ ಪರಿಷತ್‌ನಂತೆ ವಿಧಾನಸಭೆ ಪ್ರವೇಶದ ಅದೃಷ್ಟ ಅವರಿಗೆ ಸಿಕ್ಕಿರಲಿಲ್ಲ. ಅವರ ರಾಜೀನಾಮೆಯಿಂದಲೇ ತೆರವಾಗಿದ್ದ ಸ್ಥಾನದ ಉಳಿದ ಅವಧಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮತ್ತೆ ಅವರೇ ಸ್ಪರ್ಧಿಸಿದ್ದಾರೆ. 2026ರ ನವೆಂಬರ್‌ 11ರವರೆಗಿನ ಉಳಿದ ಅವಧಿಗೆ ಸೀಮಿತವಾಗಿ ಈ ಉಪ ಚುನಾವಣೆ ನಡೆಯುತ್ತಿದೆ. ಮೂರು ಅವಧಿ ಜೆಡಿಎಸ್‌ನಿಂದ, ಒಂದು ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮತದಾರರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಇದೇ 16ರಂದು ನಡೆಯುವ ಚುನಾವಣೆಯ ಫಲಿತಾಂಶ ಸಾಬೀತು ಮಾಡಲಿದೆ.

ಶಿಕ್ಷಕರ ಸಂಘಟನೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಜತೆ ನಿಕಟ ಒಡನಾಟ ಇರಿಸಿಕೊಂಡಿದ್ದ ಪುಟ್ಟಣ್ಣ, ಸ್ವಂತ ಬಲದಲ್ಲಿ ಕ್ಷೇತ್ರವನ್ನು ಜೆಡಿಎಸ್‌ನ ಪ್ರಬಲ ನೆಲೆಯಾಗಿ ಮಾಡಿದ್ದರು. ಬಿಜೆಪಿಗೆ ಪಕ್ಷಾಂತರ ಮಾಡಿದ ನಂತರ ಸ್ವಂತ ಬಲದಲ್ಲೇ ಗೆಲುವಿನ ಓಟ ಮುಂದುವರಿಸಿದ್ದರು. ಜೆಡಿಎಸ್‌–ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಎ.ಪಿ.ರಂಗನಾಥ್ ಜೆಡಿಎಸ್ ಪ್ರಾಬಲ್ಯವನ್ನು ಪುನರ್‌ಸ್ಥಾಪಿಸುವ ಉಮೇದಿನಲ್ಲಿದ್ದಾರೆ. ಪುಟ್ಟಣ್ಣ ಅವರನ್ನು ಮಣಿಸಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಜೆಡಿಎಸ್‌ ತೊರೆದು ಬಂದವರಿಗೆ ಟಿಕೆಟ್‌ ‌ಕೊಟ್ಟು ಗೆಲ್ಲಿಸಿದ್ದರೂ, ಅವಧಿಗೆ ಮುನ್ನವೇ ಕೈಕೊಟ್ಟ ‍‍ಪುಟ್ಟಣ್ಣನವರ ವಿರುದ್ಧ ಸೇಡು ತೀರಿಸಿಕೊಳ್ಳಲು ಬಿಜೆಪಿ ನಾಯಕರೂ ತಂತ್ರ ರೂಪಿಸಿದ್ದಾರೆ. 

ಎ.ಪಿ. ರಂಗನಾಥ್‌
ಎ.ಪಿ. ರಂಗನಾಥ್‌

ಶಿಕ್ಷಕರ ಹಿತಾಸಕ್ತಿಗಳೇ ಪ್ರಮುಖ

ವಾಗ್ದಾನ ಶಿಕ್ಷಕರು ಹಾಗೂ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ತ್ವರಿತವಾಗಿ 7ನೇ ವೇತನ ಆಯೋಗ ಜಾರಿ 2006 ಏಪ್ರಿಲ್‌ ನಂತರ ನೇಮಕಾತಿಯಾದವರಿಗೆ ಹಳೇ ಪಿಂಚಣಿ ವ್ಯವಸ್ಥೆಯಲ್ಲೇ ಮುಂದುವರಿಸುವುದು ಖಾಸಗಿ ಶಾಲಾ–ಕಾಲೇಜುಗಳ ಸಿಬ್ಬಂದಿಗೂ ಆರೋಗ್ಯ ವಿಮೆ ಜಾರಿ 1995–2000ದ ಅವಧಿಯಲ್ಲಿ ಆರಂಭವಾದ ಕನ್ನಡ ಶಾಲೆಗಳಿಗೂ ವೇತನಾನುದಾನಕ್ಕೆ ಒಳಪಡಿಸಲು ಪ್ರಯತ್ನಿಸುವುದಾಗಿ ಕಾಂಗ್ರೆಸ್‌ ಅಭ್ಯರ್ಥಿ ವಾಗ್ದಾನ ಮಾಡಿದ್ದಾರೆ. ಖಾಸಗಿ ಶಾಲಾ-ಕಾಲೇಜು ಶಿಕ್ಷಕರಿಗೂ ಆರೋಗ್ಯ ವಿಮೆ ಬಡ್ತಿ ಶಿಕ್ಷಕರಿಗೆ ಇರುವ ವೇತನ ತಾರತಮ್ಯ ನಿವಾರಣೆ ಎನ್‌ಪಿಎಸ್‌ ರದ್ದು ಶಿಕ್ಷಕರ ಕಲ್ಯಾಣ ನಿಧಿಯ ಸದ್ಬಳಕೆ ಎಲ್ಲ ನೌಕರ ಸಿಬ್ಬಂದಿಗೂ ಜ್ಯೋತಿ ಸಂಜೀವಿನಿ ಜಾರಿ ಸೇರಿದಂತೆ ಹಲವು ಭರವಸೆಗಳನ್ನು ಜೆಡಿಎಸ್‌–ಬಿಜೆಪಿ ಮೈತ್ರಿ ಅಭ್ಯರ್ಥಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT