ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ಬಿರುಸು ಪಡೆದ ಮಳೆ: ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಳ

Published 5 ಜುಲೈ 2023, 16:43 IST
Last Updated 5 ಜುಲೈ 2023, 16:43 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ  ಮಲೆನಾಡು ಭಾಗ ಹಾಗೂ ಕರಾವಳಿಯಲ್ಲಿ ಬುಧವಾರ ಬಿರುಸಾದ ಮಳೆಯಾಗಿದ್ದು, ತುಂಗಾ, ಭದ್ರಾ, ಲಿಂಗನಮಕ್ಕಿ, ಮಾಣಿ ಸೇರಿದಂತೆ ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಿದೆ.

ಶಿವಮೊಗ್ಗ ತಾಲ್ಲೂಕು ಗಾಜನೂರಿನ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಒಟ್ಟು 3.24 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಿಂದ 1,500 ಕ್ಯುಸೆಕ್ಸ್ ನೀರನ್ನು ಬುಧವಾರ ಸಂಜೆಯಿಂದ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ’ಯಾವುದೇ ಕ್ಷಣದಲ್ಲಿ ಕ್ರೆಸ್ಟ್‌ಗೇಟ್ ಮೂಲಕ ನದಿಗೆ ನೀರು ಹರಿಸಲಾಗುವುದು. ತುಂಗೆಯ ದಡದ ಆಸುಪಾಸಿನ ಜನರು ಎಚ್ಚರದಿಂದ ಇರುವಂತೆ, ಜನ–ಜಾನುವಾರು ನದಿಗೆ ಇಳಿಯದಂತೆ ಮನವಿ ಮಾಡಿದ್ದೇವೆ‘ ಎಂದು ಕರ್ನಾಟಕ ನೀರಾವರಿ ನಿಗಮ ತುಂಗಾ ಜಲಾಶಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಪ್ಪಾನಾಯ್ಕ ’ಪ್ರಜಾವಾಣಿ‘ಗೆ ತಿಳಿಸಿದರು.

ಮಳೆಯಿಂದ ತೀರ್ಥಹಳ್ಳಿಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. 

ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವ ಕಾರಣ ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜಿಗೆ 12,400 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಬ್ಯಾರೇಜಿನಿಂದ 3,500 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ.

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಘಟಪ್ರಭಾ ನದಿಗೆ ಹರಿದುಬರುವ ನೀರಿನ ಪ್ರಮಾಣ ತುಸು ಹೆಚ್ಚಿದ್ದು ಹಿಡಕಲ್‌ ಜಲಾಶಯದಲ್ಲಿ ಬುಧವಾರ 154 ಕ್ಯುಸೆಕ್‌ಗೆ ಏರಿಕೆಯಾಗಿದೆ.

(ಮಂಗಳೂರು ವರದಿ) ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಕಡಲ್ಕೊರೆತ ಹೆಚ್ಚಿದೆ.

‌ಮಂಗಳೂರು ಹಾಗೂ ಉಡುಪಿಯ ಹಲವು ಬಡಾವಣೆಗಳಲ್ಲಿ ನೆರೆ ಸೃಷ್ಟಿಯಾಗಿ, ನಿವಾಸಿಗಳು ತೊಂದರೆ ಅನುಭವಿಸಿದರು. ಮಂಗಳೂರು ನಗರದ ಬಿಕರ್ನಕಟ್ಟೆಯಲ್ಲಿ ಕಟ್ಟಡದ ಮೇಲೆ ಅಳವಡಿಸಿದ್ದ ಜಾಹೀರಾತು ಫಲಕವೊಂದು ಉರುಳಿ ಬಿದ್ದು, 12 ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಉಡುಪಿಯ ಕೃಷ್ಣಮಠದ ಪಾರ್ಕಿಂಗ್ ಪ್ರದೇಶ ಜಲಾವೃತಗೊಂಡಿದೆ.

ಉಳ್ಳಾಲ ಬಳಿಯ ಪಾವೂರು ಹರೇಕಳ- ಅಡ್ಯಾರ್ ಸೇತುವೆಯ ಕೆಳಭಾಗದ ನೇತ್ರಾವತಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಗುಚಿತ್ತು. ಸ್ಥಳದಲ್ಲಿದ್ದ ಯುವಕರ ತಂಡ, ಸೇತುವೆ ಮೇಲಿನಿಂದ ನದಿಗೆ ಹಗ್ಗವನ್ನು ಇಳಿಸಿ ನೀರಿಗೆ ಬಿದ್ದ ಯುವಕನನ್ನು ಮೇಲಕ್ಕೆತ್ತಿದ್ದಾರೆ. ದೋಣಿ ನೀರುಪಾಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ತುಂಗಾ ಮತ್ತು ಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

(ಬೀದರ್ ವರದಿ): ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನಲ್ಲಿ 7, ಹುಮನಾಬಾದ್‌ ತಾಲ್ಲೂಕಿನಲ್ಲಿ ಒಂದು ಮನೆಯ ಗೋಡೆ ಭಾಗಶಃ ಕುಸಿದು ಬಿದ್ದಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ.  ಯಾದಗಿರಿ ಜಿಲ್ಲೆ, ರಾಯಚೂರು ನಗರವೂ ಸೇರಿ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಕಲಬುರಗಿಯಲ್ಲಿ ಮಂಗಳವಾರ ತಡರಾತ್ರಿಯಿಂದ ನಸುಕಿನವರೆಗೂ ಉತ್ತಮವಾಗಿ ಮಳೆಯಾಗಿದೆ.

(ಹುಬ್ಬಳ್ಳಿ ವರದಿ): ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಂಗಳವಾರ ರಾತ್ರಿಯಿಡೀ ಮಳೆಯಾಗದ್ದು, ಹಲವೆಡೆ ಜಲಾವೃತವಾಗಿದೆ. ನಿರಂತರ ಮಳೆಗೆ ಕಾರವಾರದ ಸಾರಿಗೆ ಘಟಕದ ಆವರಣದಲ್ಲಿ ನೀರು ನೀರು ನಿಂತಿತ್ತು. ಘಟಕದ ಶಿಥಿಲ ಕಟ್ಟಡದಲ್ಲಿ ಮಳೆ ನೀರು ಸೋರಿಕೆಯಾಗಿ, ಕಡತಗಳು ನೀರು ಪಾಲಾದವು.

ಹೊನ್ನಾವರ ತಾಲ್ಲೂಕಿನ ಅಪ್ಸರಕೊಂಡ ಗ್ರಾಮದಲ್ಲಿ ಭೂಕುಸಿತ ಆಗಿದೆ. 'ಮಳೆ ಮತ್ತಷ್ಟು ಸುರಿದರೆ ಇನ್ನಷ್ಟು ಕುಸಿತ ಉಂಟಾಗಬಹುದು. ರಸ್ತೆ ಸಂಪರ್ಕವೂ ಕಡಿತಗೊಳ್ಳಬಹುದು’ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

‘ಭೂಕುಸಿತ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ 25ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸುವ ಬಗ್ಗೆ ಮನವೊಲಿಸಲಾಗುವುದು' ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಭಟ್ಕಳದಲ್ಲಿ ಮಳೆ ಮುಂದುವರಿದಿದ್ದು, ರಾಷ್ಟ್ರೀಯ ಹೆದ್ದಾರಿಯ ರಂಗಿನಕಟ್ಟೆ, ಶಂಶುದ್ದೀನ್ ವೃತ್ತ ಜಲಾವೃತಗೊಂಡಿದೆ. ಬನವಾಸಿಯಲ್ಲಿ ರಭಸದ ಮಳೆಗೆ ಮನೆಯೊಂದರ ಛಾವಣಿ ಸಂಪೂರ್ಣ ಹಾನಿಯಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ.  

(ಮಡಿಕೇರಿ ವರದಿ): ಕೊಡಗು ಜಿಲ್ಲೆಯ ಘಟ್ಟಪ್ರದೇಶಗಳಲ್ಲಿ ಬುಧವಾರ ‌ಬಿರುಸಿನ ಮಳೆ ಸುರಿದಿದೆ. ನೀರು ತಳ ಸೇರಿದ್ದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕೊಂಚ ಏರಿಕೆಯಾಗಿದೆ.

ಸತತ 3ನೇ ದಿನವೂ ಮಡಿಕೇರಿ– ಮಂಗಳೂರು ರಸ್ತೆಯ ಕೊಯನಾಡು ಸಮೀಪ ಕುಸಿಯುವ ಭೀತಿಯಿಂದ ಸಂಚಾರ ನಿಷೇಧಿಸಲಾಗಿದ್ದು, ಪಕ್ಕದಲ್ಲೇ ಇರುವ ತಾತ್ಕಾಲಿಕ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಮಡಿಕೇರಿ ನಗರ, ಭಾಗಮಂಡಲ, ಕರಿಕೆ ಭಾಗಗಳಲ್ಲೂ ಉತ್ತಮ ಮಳೆಯಾಗಿದೆ. ಹಲವೆಡೆ ಮಳೆಗಿಂತ ಬಿರುಗಾಳಿಯೇ ಹೆಚ್ಚಿದ್ದು, ಕಾಫಿ ತೋಟಗಳಲ್ಲಿ ಮರಗಳು ಬುಡಮೇಲಾಗುತ್ತಿವೆ.

ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್‌ ಮೇಲೆ ಮರ ಉರುಳಿ ಬಿದ್ದು, ಹಿಂಭಾಗದ ಏಣಿ ಮುರಿದಿದೆ. ಯಾರಿಗೂ ಹಾನಿಯಾಗಿಲ್ಲ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಬುಧವಾರ ಸುರಿದ ಮಳೆಯಿಂದ, ಹೆತ್ತೂರು ಹೋಬಳಿಯ ಬನ್ನಹಳ್ಳಿಯ ಸೋಮಶೇಖರ್ ಅವರ ಮನೆ ತಡೆಗೋಡೆ ಕುಸಿದಿದೆ. ಬಾಳೆಹಳ್ಳ, ಮಂಕನಹಳ್ಳಿ, ಹೊಂಗಡಹಳ್ಳ, ಪಾಲಹಳ್ಳಿ, ಹಿರದನಹಳ್ಳಿ, ಮಾಗೇರಿ, ಬಿಸ್ಲೆ, ಹುದಿನೂರಿನಲ್ಲೂ ಉತ್ತಮ ಮಳೆಯಾಗಿದೆ.

ಇಂದು ಶಾಲೆ–ಕಾಲೇಜಿಗೆ ರಜೆ

ಮಂಗಳೂರು: ಹೆಚ್ಚಿನ ಮಳೆ ಕಾರಣ ಗುರುವಾರ (ಜುಲೈ 6ರಂದು) ಸಹ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳು ಹಾಗೂ ಎಲ್ಲ ಕಾಲೇಜುಗಳಿಗೆ, ಉಡುಪಿ ಜಿಲ್ಲೆಯಲ್ಲಿ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ಜಿಲ್ಲೆಯ ಪಡುವರಿಯಲ್ಲಿ 22.1 ಸೆಂ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT