ಚಿಕ್ಕಬಳ್ಳಾಪುರ: ‘75 ವರ್ಷ ದಾಟಿದವರಿಗೆ ಲೋಕಸಭೆ ಚುನಾವಣೆ ಸ್ಪರ್ಧೆಗೆ ಟಿಕೆಟ್ ನೀಡುವುದಿಲ್ಲ ಎಂದು ಬಿಜೆಪಿಯಲ್ಲಿ ತೀರ್ಮಾನಿಸಲಾಗಿದೆ. ಟಿಕೆಟ್ ನೀಡುವುದಿಲ್ಲ ಎಂದು ನನಗೆ ಗಂಭೀರವಾಗಿ ಹೇಳಿದ್ದಾರೆ’ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಆದ್ದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ರಾಜಕಾರಣದಲ್ಲಿ ಸಕ್ರಿಯವಾಗಿರುವೆ ಎಂದು ಹೇಳಿದರು.
‘ಬಿಜೆಪಿ ಆಡಳಿತದಲ್ಲಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಡಾ.ಕೆ.ಸುಧಾಕರ್ ಮತ್ತು ಎಂ.ಟಿ.ಬಿ.ನಾಗರಾಜ್ ನನ್ನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸರ್ಕಾರಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರಕ್ಕೆ ನನ್ನ ಹೆಸರು ಹಾಕುತ್ತಿದ್ದರು. ಆದರೆ ಪಕ್ಷದ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸುತ್ತಿರಲಿಲ್ಲ. ಬಿಜೆಪಿಯಲ್ಲಿ ನನ್ನ ಬಳಸಿಕೊಳ್ಳಲಿಲ್ಲ’ ಎಂದರು.
‘ನನ್ನ ಮಗ ಶರತ್ ಕಾಂಗ್ರೆಸ್ ಶಾಸಕ. ನಾನು ಬಿಜೆಪಿಯಲ್ಲಿಯೇ ಉಳಿದುಕೊಂಡಿದ್ದೇನೆ. ಸಮಯ ಬಂದಾಗ ಏನು ತಿಳಿಸಬೇಕೊ ಅದನ್ನು ನಿಮಗೆ (ಮಾಧ್ಯಮ) ತಿಳಿಸುವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವುದಿಲ್ಲ’ ಎಂದು ಹೇಳಿದರು.
‘ನನ್ನ ಅಭಿಮಾನಿಗಳು ಎಲ್ಲ ಕಡೆ ಇದ್ದಾರೆ. 50 ವರ್ಷ ರಾಜಕಾರಣದಲ್ಲಿ ಇದ್ದೇನೆ. ಬಹಳ ಶ್ರಮಪಟ್ಟಿದ್ದೇನೆ. ನನಗೆ ಇಷ್ಟು ಸಾಕು. ಚುನಾವಣೆ ನಡೆದು ಮೂರು ತಿಂಗಳು ಪೂರ್ಣವಾದರೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡಲು ಪಕ್ಷಕ್ಕೆ ಆಗಿಲ್ಲ. ಇದರಿಂದ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದರು.
‘ಹಣ ನೀಡುತ್ತೇವೆ ಅಕ್ಕಿ ಕೊಡಿ ಎಂದು ರಾಜ್ಯ ಸರ್ಕಾರ ಕೇಳಿದರೂ ಕೇಂದ್ರ ಸರ್ಕಾರ ಅಕ್ಕಿ ನೀಡದಿರುವುದು ತಪ್ಪು. ಮುಂದಿನ ಲೋಕಸಭೆ ಚುನಾವಣೆಗೆ ಇನ್ನೂ ಆರೇಳು ತಿಂಗಳಿದೆ. ನರೇಂದ್ರ ಮೋದಿ ಅವರೇ ಮತ್ತೆ ಅಧಿಕಾರಕ್ಕೆ ಬರುತ್ತಾರೊ ಅಥವಾ ಬೇರೆಯವರು ಬರುತ್ತಾರೊ ಎಂದು ಈಗ ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನು ಹೊಗಳಿದ ಸಂಸದ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವಷ್ಟು ಬುದ್ಧಿವಂತಿಕೆ ಇದೆ. ಅವರು 13 ಬಾರಿ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಿದ್ದಾರೆ. ಅವರು ತುಂಬಾ ಚೆನ್ನಾಗಿ ಹಣಕಾಸು ಖಾತೆ ನಿರ್ವಹಿಸಿದ್ದಾರೆ ಎಂದು ಬಿ.ಎನ್.ಬಚ್ಚೇಗೌಡ ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಯಾವ ರೀತಿ ಹಣ ಒದಗಿಸಬೇಕು ಎನ್ನುವುದು ಸಿದ್ದರಾಮಯ್ಯ ಅವರಿಗೆ ಗೊತ್ತು. ಈ ಯೋಜನೆಗಳಿಂದ ರಾಜ್ಯದ ಜನರಿಗೆ ಅನುಕೂಲ ಆಗುತ್ತದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.