ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಪ್ರಕರಣದಲ್ಲಿ ತಮ್ಮ ತಪ್ಪನ್ನು ಮುಚ್ಚಲೆಂದೇ ಮನೀಶ್ ಖರ್ಬೀಕರ್ ಅವರನ್ನು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನಾಗಿ (ADGP) ನೇಮಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದ್ದಾರೆ.
‘ಜುಲೈನಲ್ಲಿ ನಡೆದ ವಿಧಾನಮಂಡಲದ ಅಧಿವೇಶನದ ಕೊನೆಯ ದಿನವೇ ಮುಖ್ಯಮಂತ್ರಿಯವರು ಈ ಸಂಬಂಧ ಆದೇಶ ಹೊರಡಿಸಿದ್ದರು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಆ ಬಳಿಕವೇ ಸಿದ್ದರಾಮಯ್ಯ ಮುಡಾ ಪ್ರಕರಣ ಲೋಕಾಯುಕ್ತ ತನಿಖೆ ಆಗಲಿ ಎಂದು ಹೇಳಲಾರಂಭಿಸಿದರು. ಲೋಕಾಯುಕ್ತ ಪೊಲೀಸ್ ಅಧಿಕಾರಿಗೆ ಹೆಚ್ಚುವರಿಯಾಗಿ ಸರ್ಕಾರದ ಅಧೀನ ಸಂಸ್ಥೆಗಳ ತನಿಖೆ ಜವಾಬ್ದಾರಿ ಕೊಟ್ಟ ಉದಾಹರಣೆ ಇಡೀ ದೇಶದಲ್ಲೇ ಇಲ್ಲ. ಇಂತಹ ಕೆಟ್ಟ ಪರಂಪರೆಗೆ ಸಿದ್ದರಾಮಯ್ಯ ನಾಂದಿ ಹಾಡಿದ್ದಾರೆ’ ಎಂದು ಅವರು ದೂರಿದರು.
‘ಮುಡಾ ಹಗರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕೆಂದರೆ ಅದು ಸಿಬಿಐನಿಂದಲೇ ಆಗಬೇಕು. ನ್ಯಾಯಾಲಯದ ಮೂಲಕ ಸಿಬಿಐ ತನಿಖೆ ನಡೆಸುವ ಪ್ರಕ್ರಿಯೆ ಆಗಬೇಕು. ಮುಖ್ಯಮಂತ್ರಿ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದ ಮುಖ್ಯಮಂತ್ರಿ ವಿರುದ್ಧ ಅಧಿಕಾರಿಗಳು ಯಾವ ರೀತಿ ತನಿಖೆ ಕೈಗೊಳ್ಳಬಹುದು. ಆರೋಪಿತ ಮುಖ್ಯಮಂತ್ರಿಯನ್ನು ತೀವ್ರ ವಿಚಾರಣೆಗೆ ಒಳಪಡಿಸುವ ಧೈರ್ಯ ಪೊಲೀಸ್ ಅಧಿಕಾರಿಗಳಿಗೆ ಇದೆಯೇ‘ ಎಂದು ರಾಜೀವ್ ಪ್ರಶ್ನಿಸಿದರು.
‘ತಮ್ಮ ವಿರುದ್ಧದ ಪ್ರಕರಣ ಸಿಬಿಐ ಅಥವಾ ಲೋಕಾಯುಕ್ತಕ್ಕೆ ಹೋಗಲಿದೆ ಎಂದು ಮೊದಲೇ ಗ್ರಹಿಸಿದ್ದರು. ಆದ್ದರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮುಖ್ಯಮಂತ್ರಿ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಲೋಕಾಯುಕ್ತದಲ್ಲಿ 70 ಕ್ಕೂ ಹೆಚ್ಚು ಪ್ರಕರಣಗಳು ತನಿಖಾ ಹಂತದಲ್ಲಿ ಇರುವಾಗಲೇ ಲೋಕಾಯುಕ್ತದ ಶಕ್ತಿ ಕುಂದಿಸುವ ಕೆಲಸ ಮಾಡಿದ್ದರು. ಇದೀಗ ಮುಡಾ ಪ್ರಕರಣ ದಾಖಲಾಗುತ್ತಿದ್ದಂತೆ ತಮ್ಮ ರಕ್ಷಣೆಗಾಗಿ ಸಿಬಿಐ ತನಿಖೆ ಇದ್ದ ಮುಕ್ತ ಅವಕಾಶವನ್ನು ಹಿಂದಕ್ಕೆ ಪಡೆದಿದ್ದಾರೆ. ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳುವ ಹತಾಶೆಯ ಯತ್ನ‘ ಎಂದು ಹೇಳಿದರು.