ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 50:50 ಅನುಪಾತದಲ್ಲಿ ಬದಲಿ ನಿವೇಶನಗಳನ್ನು ನೀಡುವ ಸಂಬಂಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಡಳಿತ ಮಂಡಳಿ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ’ ಎಂದು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಆರೋಪಿಸಿದರು.
‘ಆಡಳಿತ ಮಂಡಳಿ ಸಭೆ ನಿವೇಶನ ಹಂಚಿಕೆಯ ನಿರ್ಣಯ ತೆಗೆದುಕೊಂಡಿದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಆದರೆ, ಅದು ಸುಳ್ಳು ಮಾಹಿತಿ’ ಎಂದು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದ ಅವರು, ಆಡಳಿತ ಮಂಡಳಿ ಸಭೆಯ ನಡಾವಳಿಯ ಆಡಿಯೊ, ಆರ್‌ಟಿಐ ಮೂಲಕ ಪಡೆದ ದಾಖಲೆಗಳನ್ನು ಬಿಡುಗಡೆ ಮಾಡಿದರು.
‘ಮುಡಾ 2020 ನವೆಂಬರ್ 20ರಂದು ನಡೆಸಿದ ಸಭೆಯಲ್ಲಿ 14 ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಮತ್ತು ಇತರ ಸಚಿವರು ಹೇಳುತ್ತಲೇ ಬಂದಿದ್ದಾರೆ. ನಮಗೆ ಸಿಕ್ಕಿರುವ ದಾಖಲೆಗಳ ಪ್ರಕಾರ ಸಭೆಯ ನಡಾವಳಿಯಲ್ಲಿ ಆ ವಿಷಯವೇ ಪ್ರಸ್ತಾಪ ಆಗಿರಲಿಲ್ಲ ಮತ್ತು ನಿರ್ಣಯವನ್ನೂ ತೆಗೆದುಕೊಂಡಿರಲಿಲ್ಲ’ ಎಂದರು.
ಅಂದಿನ ಸಭೆಯಲ್ಲಿ 50:50 ಅನುಪಾತದಡಿ ನಿವೇಶನಗಳ ಹಂಚಿಕೆ ವಿಚಾರ ಚರ್ಚೆ ಆಗಿದೆ. ನಿರ್ದಿಷ್ಟವಾಗಿ ಯಾವುದೇ ಅರ್ಜಿದಾರರ ಹೆಸರೂ ಪ್ರಸ್ತಾಪ ಆಗಿಲ್ಲ. ಆಡಿಯೋವನ್ನು ಕೇಳಿದಾಗ, ಸರ್ಕಾರದ ಆದೇಶ, ಕಾಯ್ದೆ ಪ್ರಕಾರ ಕೊಡಲು ಸಾಧ್ಯವಿಲ್ಲ. ಅಂತಹವರು ಬೇಕಿದ್ದರೆ ನ್ಯಾಯಾಲಯಕ್ಕೆ ಹೋಗಲಿ ಎಂದು ಸಭೆಯಲ್ಲಿ ಕೆಲವು ಸದಸ್ಯರು ಅಭಿಪ್ರಾಯಪಟ್ಟಿರುವುದು ಆಡಿಯೋದಲ್ಲಿ ದಾಖಲಾಗಿದೆ ಎಂದು ರವಿಕುಮಾರ್ ತಿಳಿಸಿದರು.
ಸಭೆಯ ಕೊನೆಯಲ್ಲಿ 50:50 ಅನುಪಾತದ ವಿಚಾರ ಮುಂದೂಡಿಕೆ ಆಗಿತ್ತು. ಆ ಬಳಿಕ ನಕಲಿ ನಿರ್ಣಯ ಪ್ರತಿ ಸೃಷ್ಟಿಸಿ, ಮುಡಾದ ಅಂದಿನ ಅಧ್ಯಕ್ಷರು ಮತ್ತು ಆಯುಕ್ತರ ಸಹಿ ಹಾಕಿರುವುದು ಕಂಡು ಬರುತ್ತದೆ. ನಕಲಿ ನಿರ್ಣಯದ ಪ್ರತಿ ಬಳಸಿಕೊಂಡು ಬೇಕಾದವರಿಗೆಲ್ಲ ನಿವೇಶನಗಳನ್ನು ಹಂಚಲಾಗಿದೆ. ಇದು ಸಾವಿರಾರು ಕೋಟಿ ರೂಪಾಯಿಗಳ ಹಗರಣ ಎಂದು ಅವರು ಆಪಾದಿಸಿದರು.
ಮುಖ್ಯಮಂತ್ರಿಯವರ ಪತ್ನಿಗೂ ಮೊದಲೇ ಬದಲೀ ನಿವೇಶನಗಳನ್ನು ಕೋರಿ ಹಲವು ಮಹಿಳೆಯರೂ ಅರ್ಜಿ ಸಲ್ಲಿಸಿದ್ದರು. ಆದರೆ, ಅವರಿಗೆ ನಿವೇಶನಗಳನ್ನು ಹಂಚಿಕೆ ಮಾಡದೇ ನಕಲಿ ನಿರ್ಣಯ ಪ್ರತಿ ಬಳಸಿಕೊಂಡು ಮುಖ್ಯಮಂತ್ರಿಯವರ ಪತ್ನಿಗೆ ಮಾತ್ರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ವಿಚಾರವಾಗಿ ಅಂದಿನ ಅಧ್ಯಕ್ಷ ಮತ್ತು ಆಯುಕ್ತರನ್ನು ತನಿಖೆಗೆ ಒಳಪಡಿಸಿದರೆ ಯಾರ ಪ್ರಭಾವ ಇತ್ತು ಎನ್ನುವುದು ಹೊರಬರುತ್ತದೆ ಎಂದು ರವಿಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.