ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮನುವಾದಿ ಮನಸ್ಥಿತಿಯಿಂದ ಸಂವಿಧಾ‌ನ ಹತ್ತಿಕ್ಕುವ ಪ್ರಯತ್ನ: ಸಾಹಿತಿ ಮೂಡ್ನಾಕೂಡು

‘ದೇಶ– ಸಂವಿಧಾನ ಉಳಿಸಿ’ ರಾಜ್ಯಮಟ್ಟದ ಜಾಗೃತಿ ಸಮಾವೇಶ
Published 26 ಜನವರಿ 2024, 14:04 IST
Last Updated 26 ಜನವರಿ 2024, 14:04 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ ಜಾತಿಪದ್ಧತಿ ಇನ್ನೂ ಜೀವಂತವಾಗಿದ್ದು, ಅಸ್ಪೃಶ್ಯತಾ ಆಚರಣೆಗಳೂ ತಾಂಡವವಾಡುತ್ತಿವೆ’ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾ–ಕರ್ನಾಟಕ ಹಾಗೂ ದಲಿತ ಸಂಘರ್ಷ ಸಮಿತಿ (ದಸಂಸ) ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ‘ದೇಶ ಹಾಗೂ ಸಂವಿಧಾನ ಉಳಿಸಿ’ ರಾಜ್ಯಮಟ್ಟದ ಪದಾಧಿಕಾರಿಗಳ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದೇಶವು ಸರ್ವ ಸಮಾನತೆಯ ಪ್ರತೀಕವಾದ ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷಗಳು ಕಳೆದಿವೆ. ಈಗಲೂ ಮೌಢ್ಯಾಚರಣೆಗಳು, ಜಾತಿ ವ್ಯವಸ್ಥೆಯಿದೆ. ಬಡತನವೂ ತೊಲಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಡಾ.ಬಿ.ಆರ್‌.ಅಂಬೇಡ್ಕರ್ ಅವರು ಜಾತ್ಯತೀತ ಹಾಗೂ ಧರ್ಮಾತೀತ ನೆಲೆಯಲ್ಲಿ ಸಂವಿಧಾನ ರೂಪಿಸಿ, ದೇಶದ ಪ್ರಗತಿಗೆ ಭದ್ರ ಬುನಾದಿ ಹಾಕಿದ್ದರು. ಆದರೆ, ಮನುವಾದಿ‌ ಮನಸ್ಥಿತಿಗಳು ಅಂದಿನಿಂದ ಇಂದಿನವರೆಗೆ ಸಂವಿಧಾನ ವಿರೋಧಿ ಕೃತ್ಯಗಳ ಮೂಲಕ ಸಂವಿಧಾ‌ನವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ. ಅವರು ಎಷ್ಟೇ ಪ್ರಯತ್ನ ಪಡಲಿ. ಅದು ಸಾಧ್ಯವಾಗುವುದಿಲ್ಲ’ ಎಂದು ಎಚ್ಚರಿಸಿದರು.

ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಅವರು ಮಾತನಾಡಿ, ‘ವಿಶ್ವಮಾನವ ಸಂದೇಶ ಸಾರಿದ ಬುದ್ಧ, ಬಸವ, ಕನಕ, ಕುವೆಂಪು ಅವರಂತಹ ದಾರ್ಶನಿಕರ ವಿಚಾರಧಾರೆಗಳು ಒಂದು ಪ್ರಾಂತ್ಯ, ಭಾಷೆ, ದೇಶಗಳಿಗೆ ಸೀಮಿತವಾಗದೆ ಜಾಗತಿಕ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ‌ ಅನುಸಂಧಾನ ಆಗುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ತುಳಿತಕ್ಕೆ ಒಳಗಾದ ಸಮುದಾಯಗಳು ಒಂದಾಗಬೇಕೆಂದು ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರು ಕನಸು ಕಂಡಿದ್ದರು. ಸಮಾನತೆ ಆಶಯದೊಂದಿಗೆ ಅಂಬೇಡ್ಕರ್‌ ಅವರು ಸಂವಿಧಾನ ರಚಿಸಿದ್ದರು. ಆದರೆ ಇಂದು ಕೆಲವು ವರ್ಗದಿಂದ ಬಿಕ್ಕಟ್ಟು ಎದುರಿಸುವಂತಾಗಿದೆ’ ಎಂದು ಹೇಳಿದರು.‌

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಮಿತಿ ರಾಜ್ಯ ಸಂಚಾಲಕ ಆರ್.ಮೋಹನ್‌ರಾಜ್‌ ಮಾತನಾಡಿ, ಅಂಬೇಡ್ಕರ್ ಕಂಡ ಪ್ರಬುದ್ಧ ಭಾರತದ ಆಶಯ ಸಾಕಾರಗೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜು ಎಂ., ಸ್ವಪ್ನ ಮೋಹನ್, ಶೇಖರ್ ಹಾವಂಜೆ, ಜಿ.ಶಿವಕುಮಾರ್, ಕೆ.ಎ.ಓಬಳೇಶ್, ಪರಶುರಾಮ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT