ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರ ವಿರುದ್ಧದ ಪೋಕ್ಸೊ ಪ್ರಕರಣ: 3ನೇ ಆರೋಪಿಗೆ ಷರತ್ತುಬದ್ಧ ಜಾಮೀನು

Published 13 ಅಕ್ಟೋಬರ್ 2023, 15:23 IST
Last Updated 13 ಅಕ್ಟೋಬರ್ 2023, 15:23 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣದ ಮೂರನೇ ಆರೋಪಿ ಪರಮಶಿವಯ್ಯಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಪರಮಶಿವಯ್ಯ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿದೆ.

‘ಅರ್ಜಿದಾರರು ₹ 2 ಲಕ್ಷ ಮೌಲ್ಯದ ಬಾಂಡ್, ಇಬ್ಬರ ಭದ್ರತೆ ನೀಡಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು’ ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

‘ಎಸ್ ಜೆ ಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿದ್ದ ಪರಮಶಿವಯ್ಯ, ಬಾಲಕಿಯರ ಮೇಲೆ ಶರಣರು ಅತ್ಯಾಚಾರ ನಡೆಸಲು ಕುಮ್ಮಕ್ಕು ನೀಡಿದ್ದಾರೆ’ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಕ್ರಿಮಿನಲ್ ಪ್ರಕರಣದಲ್ಲಿ 2022ರ ಅಕ್ಟೋಬರ್ 29ರಿಂದ ನ್ಯಾಯಾಂಗ ಬಂಧನದಲ್ಲಿದ್ದರು. ಅರ್ಜಿದಾರರ ಪರ ಕೆ.ಬಿ.ಕೆ.ಸ್ವಾಮಿ ವಾದ ಮಂಡಿಸಿದ್ದರು.

ಪ್ರಕರಣವೇನು?

ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ ಕಾಯ್ದೆ–2012, ಭಾರತೀಯ ದಂಡ ಸಂಹಿತೆ–1860, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ-1988, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989 ಮತ್ತು ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯ್ದೆ–2015ರ ವಿವಿಧ ಕಲಂಗಳ ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

‘ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ 2022ರ ಆಗಸ್ಟ್‌ 26ರಂದು ದೂರು ದಾಖಲಿಸಿದ್ದರು‌. ಈ ಪ್ರಕರಣದಲ್ಲಿ ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಚಿತ್ರದುರ್ಗದ ಬೃಹನ್ಮಠದಲ್ಲಿ ಬಂಧಿಸಿದ್ದು ಅಂದಿನಿಂದಲೂ ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT