ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ ಆದೇಶ: ಬಂಧಿಸಿದ ಕೆಲವೇ ಗಂಟೆಯಲ್ಲಿ ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ

Published 20 ನವೆಂಬರ್ 2023, 15:43 IST
Last Updated 20 ನವೆಂಬರ್ 2023, 15:43 IST
ಅಕ್ಷರ ಗಾತ್ರ

ಚಿತ್ರದುರ್ಗ: ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಎರಡನೇ ಪ್ರಕರಣದಲ್ಲಿ ಸೋಮವಾರ ಮತ್ತೆ ಬಂಧಿತರಾಗಿದ್ದ ಮುರುಘಾ ಮಠದ ಶಿವಮೂರ್ತಿ ಶರಣರು ಹೈಕೋರ್ಟ್‌ ಆದೇಶದ ಮೇರೆಗೆ ಬಿಡುಗಡೆಯಾದರು. ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಮೂರು ಗಂಟೆಯಲ್ಲಿ ಶರಣರು ಕಾರಾಗೃಹದಿಂದ ಹೊರಬಂದರು.

ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಮೊದಲ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ್ದ ಷರತ್ತುಬದ್ಧ ಜಾಮೀನಿನಲ್ಲಿ ನ.16ರಂದು ಬಿಡುಗಡೆಯಾಗಿದ್ದ ಶಿವಮೂರ್ತಿ ಶರಣರು ನಾಲ್ಕೇ ದಿನಗಳಲ್ಲಿ ಮತ್ತೊಂದು ಪ್ರಕರಣದಲ್ಲಿ ಜೈಲು ಸೇರಿದ್ದರು. ಶರಣರ ಬಂಧನಕ್ಕೆ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ ವಾರೆಂಟ್‌, ಬಂಧನ ಹಾಗೂ ಬಿಡುಗಡೆಯ ಬೆಳವಣಿಗೆಗಳು ಇಡೀ ದಿನ ಸಿನೀಮಿಯ ರೀತಿಯಲ್ಲಿ ನಡೆದವು.

ದಾವಣಗೆರೆಯ ವಿರಕ್ತ ಮಠದಲ್ಲಿ ಶರಣರನ್ನು ಬಂಧಿಸಿದ ಪೊಲೀಸರು ಚಿತ್ರದುರ್ಗಕ್ಕೆ ಕರೆತಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಎದುರು ಹಾಜರುಪಡಿಸಿದರು. ಡಿ.2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶೆ ಬಿ.ಕೆ.ಕೋಮಲಾ ಆದೇಶಿಸಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಶರಣರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಪೊಲೀಸರು, ಕಾರಾಗೃಹಕ್ಕೆ ಒಪ್ಪಿಸಿದರು. ಸೆಷನ್ಸ್‌ ಕೋರ್ಟ್‌ ಹೊರಡಿಸಿದ ವಾರೆಂಟ್‌ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್‌, ತಕ್ಷಣ ಬಿಡುಗಡೆಗೆ ಆದೇಶಿಸಿದ ಪ್ರತಿ ತಲುಪಿದ ಬಳಿಕ ಶರಣರನ್ನು ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT