ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ಕೂರು ಕೆರೆಯಲ್ಲಿ ಮೀನುಗಳ ಸಾವು

Last Updated 13 ಮಾರ್ಚ್ 2019, 20:07 IST
ಅಕ್ಷರ ಗಾತ್ರ

ಮಹದೇವಪುರ: ಸಮೀಪದ ಮುತ್ಕೂರು ಕೆರೆಯಲ್ಲಿ ಬುಧವಾರ ಸಾವಿರಾರು ಮೀನುಗಳು ಸತ್ತುಹೋಗಿವೆ.
ಕೆರೆಗೆ ವಿಷ ತ್ಯಾಜ್ಯಗಳನ್ನು ಕಿಡಿಗೇಡಿಗಳು ತಂದು ಸುರಿದ ಕಾರಣ ಮೀನುಗಳು ಸತ್ತಿವೆ ಎಂದು ಸ್ಥಳೀಯರಾದ ಮಹಮ್ಮದ್ ತಿಳಿಸಿದರು.
ಕಳೆದ ವರ್ಷ ಮಳೆ ಚೆನ್ನಾಗಿ ಸುರಿದ ಕಾರಣ ಕೆರೆಯಲ್ಲಿ ನೀರು ಇದೆ. ಸಾಕಷ್ಟು ಮೀನುಗಳೂ ಇದ್ದವು. ಸ್ಥಳೀಯರು ಮೀನು ಹಿಡಿದು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಆದರೆ ದಿಢೀರನೆ ಮೀನುಗಳು ಸತ್ತಿರುವುದರಿಂದ ಬಡ ಮೀನುಗಾರರಿಗೆ ನಷ್ಟವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕೆರೆಯಲ್ಲಿ ನಿನ್ನೆ ಸಂಜೆಯ ವೇಳೆಯಲ್ಲಿಯೇ ಒಂದಿಷ್ಟು ಮೀನು ದಂಡೆಯಲ್ಲಿ ಒದ್ದಾಡುತ್ತಿದ್ದವು. ಬಿಸಿಲಿನ ತಾಪಕ್ಕೆ ಮೀನುಗಳು ಹಾಗೆ ಮಾಡುತ್ತಿರಬಹುದು ಅಂತ ಅಂದುಕೊಂಡಿದ್ದೆವು. ಆದರೆ ಇಂದು ಬೆಳಿಗ್ಗೆ ಕೆರೆಗೆ ಬಂದು ನೋಡಿದಾಗ ಸಾವಿರಾರು ಮೀನುಗಳು ರಾಶಿ ರಾಶಿಯಾಗಿ ದಂಡೆಯಲ್ಲಿ ಸತ್ತು ತೇಲುತ್ತಿದ್ದವು. ಆಗ ತುಂಬಾ ಬೇಸರವಾಯಿತು ಎಂದು ಮುತ್ಕೂರು ನಿವಾಸಿ ಹರೀಶ ಹೇಳಿದರು.‌

ಮೀನು ಬೇಟೆಗೆ ಬರುತ್ತಿದ್ದ ಹಕ್ಕಿಗಳಿಗೂ ಆಹಾರವಿಲ್ಲದಂತಾಗಿದೆ ಎಂದು ಅವರು ತಿಳಿಸಿದರು.
ನೂರಾರು ಎಕರೆ ಸುತ್ತಳತೆಯನ್ನು ಹೊಂದಿರುವ ಮುತ್ಕೂರು ಕೆರೆ ಹೊಸಕೋಟೆ ವ್ಯಾಪ್ತಿಗೆ ಸೇರಿದ್ದು, ಶುದ್ಧ ಮಳೆ ನೀರಿನಿಂದ ತುಂಬಿದೆ. ಆದರೆ ಇತ್ತೀಚೆಗೆ ಕೆರೆಯ ನೀರನ್ನು ಕೆಲ ರೈತರು ತಮ್ಮ ತೋಟಗಳಿಗೆ ಬಳಸುತ್ತಿದ್ದಾರೆ. ಇದರಿಂದಾಗಿ ಕೆರೆಯ ನೀರು ಕಡಿಮೆ ಆಗಿದೆ.
ಕೆರೆಗೆ ಕಲ್ಮಶ: ಮುತ್ಕೂರು ಕೆರೆಗೆ ಕೋಳಿ ಮಾಂಸದ ಅಂಗಡಿಗಳ ಮಾಲೀಕರು ದಿನವೂ ಸಂಜೆಯಾಗುತ್ತಲೇ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಇದು ದುರ್ವಾಸನೆಗೆ ಕಾರಣವಾಗಿದೆ. ಈ ಕುರಿತು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕೆಲವೆಡೆ ಕೆರೆ ಒತ್ತುವರಿಯಾಗುವ ಆತಂಕವೂ ಇದೆ. ಆದ್ದರಿಂದ ಕೆರೆಗೆ ತಂತಿ ಬೇಲಿ ಅಳವಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT